ಕರಾವಳಿ

ಕರಾವಳಿಯಲ್ಲಿ ಭಾರೀ ಮಳೆಯಾಗುವ ಸೂಚನೆ : ಮಂಗಳೂರಿಗೆ ಬಂದ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ

Pinterest LinkedIn Tumblr

ಮಂಗಳೂರು. ಜೂನ್.10: ಪಶ್ಚಿಮ ಕರಾವಳಿ ಅರಬೀಸಮುದ್ರದ ಆಗ್ನೇಯ ಭಾಗದ ಲಕ್ಷದ್ವೀಪ ಪರಿಸರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಈಗಾಗಲೇ ನಿನ್ನೆಯಿಂದ ಅವಳಿ ಜಿಲ್ಲೆಗಳಲ್ಲಿ ಮಳೆ ಸುರಿಯಲಾರಂಭಿಸಿದ್ದು, ಉಡುಪಿ – ಮಂಗಳೂರು ಸೇರಿದಂತೆ ದ.ಕ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ರಾತ್ರಿಯಿಂದ ಸಾಧಾರಣ ಮಳೆ ಸುರಿಯಲಾರಂಭಿಸಿದೆ.ಇದು ಮುಂದೆ ಇನ್ನಷ್ಟು ತೀವ್ರಗೊಂಡು ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ.

ಇದರಿಂದ ಕೇರಳ ಹಾಗೂ ಕರ್ನಾಟಕ ರಾಜ್ಯದ ಕರಾವಳಿ ಪ್ರದೇಶ ಮತ್ತು ಒಳನಾಡು ಪ್ರದೇಶದಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ. ಅಲ್ಲದೇ ಗಂಟೆಗೆ 35-45ಕಿ.ಮೀ. ವೇಗದ ಬಿರುಗಾಳಿಯೂ ಬೀಸುವ ಸಾಧ್ಯತೆ ಇದೆ ಎಂದು ತಿರುವನಂತಪುರನ ಹವಾಮಾನ ಕೇಂದ್ರದ ಸೈಕ್ಲಾನ್ ವಾರ್ನಿಂಗ್ ಸೆಂಟರ್ ಎಚ್ಚರಿಕೆ ನೀಡಿದೆ.

ಕೇರಳ ಮತ್ತು ಕರ್ನಾಟಕ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಗಾಳಿಯ ವೇಗವು ಗಂಟೆಗೆ 90-ರಿಂದ 100ಕಿ.ಮೀ. ದಾಟುವ ಸಾಧ್ಯತೆ ಇದ್ದು, ಇದರ ಪರಿಣಾಮ ಮುಂದಿನ ಐದು ದಿನಗಳ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಕೇಂದ್ರ ತಿಳಿಸಿರುವುದಾಗಿ ವರದಿಯಾಗಿದೆ.

ಮುಂಜಾಗ್ರತಾ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ : ಸಚಿವ ಖಾದರ್

ಇದೇ ವೇಳೆ ದ.ಕ ಜಿಲ್ಲೆಯಲ್ಲೂ ಮಳೆಗಾಲದಲ್ಲಿ ಆಗಬಹುದಾದ ತೊಂದರೆಗಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಮಟ್ಟದಲ್ಲಿ ವಿಪತ್ತು ನಿರ್ವಹಣೆಗೆ ಮತ್ತು ತುರ್ತು ಪರಿಹಾರ ಕಾರ್ಯಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಕರೆದು, ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನಗರ ಪ್ರದೇಶದಲ್ಲೂ ಮಳೆ ಚರಂಡಿಗಳ ಹೂಳೆತ್ತಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮುಂಗಾರು ಮಳೆ ಕರಾವಳಿ ಪ್ರವೇಶಿಸುವ ಸುಳಿವು ದೊರೆಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ (ಎನ್.ಡಿ.ಆರ್.ಎಫ್.) ವೊಂದು ಮಂಗಳೂರಿಗೆ ಆಗಮಿಸಿದೆ.

30 ಮಂದಿಯ ಎನ್.ಡಿ.ಆರ್.ಎಫ್. ತಂಡ ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯಿಂದ ಮಂಗಳೂರಿಗೆ ಬಂದಿಳಿದಿದೆ. ಈ ತಂಡವು ಮೂರು ತಿಂಗಳುಗಳ ಕಾಲ ತಂಡ ಇಲ್ಲಿ ವಾಸ್ತವ್ಯ ಹೂಡಲಿದ್ದು, ಕರಾವಳಿ ಭಾಗದಲ್ಲಿ ಪ್ರಕೃತಿ ವಿಕೋಪ ಎದುರಾದರೆ ಈ ತಂಡ ಕಾರ್ಯಾಚರಣೆ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

Comments are closed.