ಕುಂದಾಪುರ: ಹೆಮ್ಮಾಡಿ ಒಂಟಿ ಮಹಿಳೆ ಗುಲಾಬಿಯ ಕೊಲೆ ಆರೋಪಿ ಜಡ್ಕಲ್ ಗ್ರಾಮ ಸೆಳ್ಕೋಡು ಕುಂಟುಮಾವು ಮನೆ ಸುಭಾಸ್ ನಾಯ್ಕ್ ಎಂಬವರ ಪುತ್ರ ರವಿರಾಜ್ (31) ಎನ್ನುವಾತನನ್ನು ತಾಲೂಕಿನ ಸಿದ್ದಾಪುರ ಪೆಟ್ರೋಲ್ ಬಂಕ್ ಬಳಿ ಸೋಮವಾರ ವಿಶೇಷ ಪೊಲೀಸ್ ತಂಡ ಬಂಧಿಸಿದೆ.
ಹಣಕ್ಕಾಗಿ ಹೆಂಗಸನ್ನ ಕೊಂದ ಕಿರಾತಕ…
ಹಣಕಾಸಿನ ಹಿನ್ನಲೆಯಲ್ಲಿ ಆರೋಪಿ ರವಿರಾಜ್ ಎಂಬವರು ಫೆ.28ರಂದು ರಾತ್ರಿ ಗುಲಾಬಿ ಮನೆಗೆ ಬಂದಿದ್ದು, ಗುಲಾಬಿ ಕತ್ತಿನಲ್ಲಿದ್ದ ಚಿನ್ನದ ಸರ ಅಡವಿಡಲು ಬೇಡಿಕೆ ಇಟ್ಟಿದ್ದ. ಚೈನ್ ನೀಡಲು ಒಪ್ಪದ ಗುಲಾಬಿ ಕತ್ತಿಗೆ ತನ್ನಲ್ಲಿದ್ದ ಟೆವಲ್ ಸುತ್ತಿ ಉಸಿರುಕಟ್ಟಿಸಿ ಕೊಲೆ ಮಾಡಿದ್ದ. ಈ ಪ್ರಕರಣ ಮಾರ್ಚ್ 1 ರಂದು ಮಧ್ಯಾಹ್ನದ ವೇಳೆಗೆ ಪ್ರಕರಣ ಬೆಳಕಿಗೆ ಬಂದಿತ್ತು. ಮೃತ ಮಹಿಳೆ ಕತ್ತಲ್ಲಿದ್ದ ಚೈನ್, ಬೆಂಡೋಲೆ, ಉಂಗುರ ತೆಗೆದುಕೊಂಡು ಗಿರವಿ ಇಟ್ಟಿರುವುದಾಗಿ ಪೊಲೀಸರ ತನಿಖೆ ಸಮಯ ಆರೋಪಿ ಬಾಯಿ ಬಿಟ್ಟಿದ್ದಾನೆ.
ಚಿನ್ನ ಕೇಳಲು ಬಂದು ಮರ್ಡರ್…
ಫೆ.28 ಮಧ್ಯರಾತ್ರಿ ಸುಮಾರಿಗೆ ಗುಲಾಬಿಯ ಮನೆಗೆ ಬಂದ ಆರೋಪಿ ರವಿರಾಜ್ ತಾನು ಕಷ್ಟದಲ್ಲಿದ್ದು ನಿಮ್ಮ ಬಳಿಯಲ್ಲಿರುವ ಚಿನ್ನ ಕೊಡಿ, ಅದನ್ನು ಗಿರವಿಯಿಟ್ಟು ಹಣ ತೆಗೆದುಕೊಳ್ಳುವೆ, ಸ್ವಲ್ಪ ಸಮಯದ ಬಳಿಕ ಮರಳಿ ನೀಡುವೆ ಎಂದು ಆಕೆಯ ಬಳಿ ಅಂಗಾಲಾಚುತ್ತಾನೆ. ಅದಕ್ಕೆ ಆಕೆ ಒಲ್ಲೆ ಎಂದು ಹೇಳುತ್ತಾಳೆ. ಸುಮಾರು ಮೂರು ಗಂಟೆಯವ ತನಕವೂ ಅಲ್ಲಿಯೇ ಕುಳಿತು ಕಾಯುತ್ತಿದ್ದ. ಸ್ವಲ್ಪ ಸಮಯದ ಬಳಿಕ ಆಕೆ ಮತ್ತೆ ಎದ್ದು ನೋಡಿದಾಗ ರವಿರಾಜ್ ಅಲ್ಲಿಯೇ ಕುಳಿತಿದ್ದು ಮತ್ತೆ ಮತ್ತೆ ಚಿನ್ನ ನೀಡುವಂತೆ ದುಂಬಾಲು ಬಿದ್ದಿದ್ದು ಆಕೆ ಸುತರಾಂ ಒಲ್ಲೆ ಎಂದಾಗ ಗುಲಾಬಿ ಹಿಂಬದಿಯಿಂದ ಕುತ್ತಿಗೆಗೆ ಬಟ್ಟೆ ಸುತ್ತಿ ಉಸಿರುಗಟ್ಟಿಸಿ ಕೊಲೆಗೈದು ಆಕೆಯ ಚಿನ್ನಾಭರಣ ದೋಚಿ ಪರಾರಿಯಾಗುತ್ತಾನೆ.
ಕೊಲೆ ಮಾಡಿ ಅಲ್ಲಲ್ಲಿ ತಿರುಗಾಟ…
ಕೊಲೆ ಮಾಡಿ ಚಿನ್ನ ದೋಚಿದ ರವಿರಾಜ್ ಅಲ್ಲಿಂದ ಕಾಲ್ನಡಿಗೆಯಲ್ಲಿ ಮೂರು ಕಿಲೋಮೀಟರ್ ದೂರ ಸಾಗಿ ತಲ್ಲೂರಿಗೆ ಬರುತ್ತಾನೆ. ಅಲ್ಲಿಂದ ರಿಕ್ಷಾದಲ್ಲಿ ಕುಂದಾಪುರಕ್ಕೆ ಬಂದು ಅಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ಏರಿ ಸಿದ್ದಾಪುರಕ್ಕೆ ತೆರಳಿ ಬೆಳಿಗ್ಗೆನ ಸುಮಾರಿಗೆ ರಂಜಿತ್ ಎಂಬಾತನಿಗೆ ತನ್ನ ಕದ್ದು ತಂದ ಚಿನ್ನದ ಸರ ನೀಡಿ ಸಾಲ ಕಟ್ಟಿಕೊಳ್ಳಲು ಹೇಳಿ ಅವನ ಬಳಿ 17 ಸಾವಿರ ಪಡೆದು ಅಲ್ಲಿಂದ ಬೆಂಗಳೂರಿಗೆ ತೆರಳುತ್ತಾನೆ. ಅಲ್ಲಿಯೂ ಕೂಡ ಕಿವಿ ಓಲೆ ಗಿರವಿ ಇಟ್ಟು ಹಣ ಪಡೆಯುತ್ತಾನೆ. ಒಂದೆರಡು ಬಾರಿ ಊರಿಗೆ ಬಂದು ಹೋಗಿರುವ ರವಿರಾಜ್ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದ ಪೊಲೀಸರು ಇಂದು ಆತನನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿದ್ದ ಪೊಲೀಸರ ತಂಡ…..
ಕೊಲೆ ಪ್ರಕರಣ ವಿಶೇಷ ತಂಡದಲ್ಲಿದ್ದ ಗ್ರಾಮಾಂತರ ಠಾಣೆ ಎಸ್ಸೈ ಶ್ರೀಧರ ನಾಯ್ಕ್, ಕುಂದಾಪುರ ಎಸ್ಸೈ ಹರೀಶ್ ಆರ್.ನಾಯ್ಕ್, ಹೆಡ್ ಕಾನ್ಸ್‌ಟೇಬಲ್ ವೆಂಕಟರಮಣ ದೇವಾಡಿಗ, ಮಂಜುನಾಥ, ಸೀತಾರಾಮ ಶೆಟ್ಟಿಗಾರ್, ಮೋಹನ್ ಶಿರೂರು, ಮಧು, ಸಂತೋಷ್ ಕುಮಾರ್, ರತ್ನಾಕರ ಶೆಟ್ಟಿ, ಸಂತೋಷ್ ಕೊರವಡಿ, ವಿಜಯಾ, ಸಂತೋಷ್, ಕಾನ್ಸ್‌ಟೇಬಲ್ ಗಳಾದ ಆದರ್ಶ, ಚಂದ್ರಶೇಖರ ಅರೆಶಿರೂರು, ಶ್ರೀಧರ್, ಸುಜಿತ್, ಚೇತನ್, ಸಚಿನ್ ಶೆಟ್ಟಿ, ತಾಂತ್ರಿಕ ವಿಭಾಗದ ಸಿಬ್ಬಂದಿ ಶಿವಾನಂದ ಕೊಲೆ ಪ್ರಕರಣ ಬೇಧಿಸಲು ಸಹಕಾರಿಸಿದ್ದಾರೆ.
ಪೊಲೀಸ್ ಕಾರ್ಯಕ್ಕೆ ಪ್ರಶಂಸೆ..
ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕುಂದಾಪುರ ಡಿಎಸ್ಪಿ ಬಿ.ಪಿ.ದಿನೇಶ್ ಕುಮಾರ್ ನೇತೃತ್ವದಲ್ಲಿ ಕುಂದಾಪುರ ವೃತ್ತನಿರೀಕ್ಷಕ ಮಂಜಪ್ಪ ನೇತೃತ್ವದ ತಂಡ ಕೃತ್ಯಕ್ಕೆ ಬಳಸಿದ ಕಾರನ್ನು ಸಿದ್ದಾಪುರ ಪೆಟ್ರೋಲ್ ಬಂಕ್ ಬಳಿ ವಶಕ್ಕೆ ಪಡೆದಿದ್ದಾರೆ. ಕುಂದಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಪೊಲೀಸ್ ತಂಡಕ್ಕೆ ಇದೊಂದು ಪ್ರಕರಣ ಸವಾಲಾಗಿತ್ತು. ಉಪವಿಭಾಗದ ಪೊಲೀಸರ ತಂಡ ಇಲ್ಲಿನ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದೆ. ಯಾವುದೇ ಸುಳಿವಿಲ್ಲದ ಒಂದು ಕಠಿಣ ಪ್ರಕರಣವಾಗಿದ್ದು ಇದನ್ನು ಕೂಲಂಕುಷವಾಗಿ ಭೇದಿಸಿದ ಪೊಲೀಸರ ತಂಡಕ್ಕೆ ಬಹುಮಾನ ನೀಡುವ ಬಗ್ಗೆ ಜಿಲ್ಲಾ ಎಸ್ಪಿ ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.