ಉಡುಪಿ: ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿದ್ದ ಪ್ರವೀಣ್ ಯಕ್ಷಿಮಠ ಎನ್ನುವರ ವಿರುದ್ಧ ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಪ್ರವೀಣ್ ಯಕ್ಷಿಮಠ ಪೋಸ್ಟ್ ಹಾಕುತ್ತಿದ್ದು ರಾಜಕೀಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾನೆ.ಅಂತಹ ಬರಹಗಳನ್ನು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಶೇರ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಉಡುಪಿಯ ಎಸ್ಪಿ ಲಕ್ಷ್ಮಣ ನಿಂಬರಗಿ ಅವರಿಗೂ ದೂರು ನೀಡಲಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಲಾಗಿದ್ದು, 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿಯ ಅಪಪ್ರಚಾರ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಕಳೆದ ಕೆಲ ದಿನಗಳಿಂದ ‘ಗೋ ಬ್ಯಾಕ್ ಶೋಭಾ’ ಹೆಸರಲ್ಲಿ ಅಭಿಯಾನವೂ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ಈ ಎಲ್ಲಾ ಬೆಳವಣಿಗೆಗಳನ್ನು, ಬರಹದ ದಾಖಲೆಗಳನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಿಗೆ ರವಾನಿಸಲಾಗಿದೆಯೆಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ತಿಳಿಸಿದ್ದಾರೆ.
ಇನ್ನು ಈ ಬೆಳವಣಿಗೆಯ ಬೆನ್ನಲ್ಲೇ ಪ್ರವೀಣ್ ಯಕ್ಷಿಮಠ ಪರ ಸಮಾಜಿಕ ಜಾಲತಾಣದಲ್ಲಿ ಬರಹಗಳು ಹೆಚ್ಚುತ್ತಿದೆ. ನಿಮ್ಮ ಬೆನ್ನಿಗೆ ನಾವಿದ್ದೇವೆ ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ಯಕ್ಷಿಮಠ ಫೋಟೋ ಜೊತೆಗೆ ಹಾಕಿ ಅಪ್ಲೋಡ್ ಮಾಡಲಾಗುತ್ತಿದೆ.
Comments are closed.