ಕರಾವಳಿ

ಸೀತಾನದಿಯಲ್ಲಿ ಅಕ್ರಮ ಮರಳುಗಾರಿಕೆ; ಪ್ರಶ್ನಿಸಲು ಹೋದ ತೋಟದ ಕಾವಲುಗಾರನಿಗೆ ಹಲ್ಲೆ

Pinterest LinkedIn Tumblr

ಕುಂದಾಪುರ: ಅಕ್ರಮ ಮರಳುಗಾರಿಕೆ ನಡೆಸಿ ಖಾಸಗಿ ಜಾಗವೊಂದರಲ್ಲಿ ಟಿಪ್ಪರ್ ಮೂಲಕ ಮರಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಅಡ್ಡಗಟ್ಟಿದ ಕಾವಲುಗಾರನಿಗೆ ಹಲ್ಲೆ ನಡೆಸಿರುವ ಕಳವಳಕಾರಿ ಘಟನೆಯೊಂದು ಗೋಳಿಯಂಗಡಿ ಸಮೀಪದ ನೆಂಚಾರುವಿನಲ್ಲಿ ನಡೆದಿದೆ. ಹಲ್ಲೆಗೊಳಗಾದ ರಬ್ಬರ್ ತೋಟದ ಕಾವಲುಗಾರ ಸುಧೀರ್ ಶೆಟ್ಟಿ ಕೋಟ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ.

 

ಕಳೆದ ಕೆಲ ದಿನಗಳಿಂದ ಮಂದಾರ್ತಿ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಇನ್ನಿತರರು ನೆಂಚಾರು ಸಮೀಪದ ಸೀತಾ ನದಿಯಲ್ಲಿ ರಾತ್ರಿ ಜೆಸಿಬಿ ಮೂಲಕ ಮರಳನ್ನು ಕದ್ದು ಸಾಗಿಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ನಿಶಾ ಫ್ರಾನ್ಸಿಸ್ ಹಾಗೂ ಫ್ರಾನ್ಸಿಸ್ ಜಾರ್ಜ್ ಎಂಬವರಿಗೆ ಸೇರಿದ್ದ ನೆಂಚಾರು ಸಮೀಪದ ಸರ್ವೇ ನಂಬರ್ 121ರಲ್ಲಿ 10ಎಕರೆ ವಿಶಾಲ ಜಾಗದಲ್ಲಿ ಜಾರ್ಜ್ ರಬ್ಬರ್ ಕೃಷಿ ನಡೆಸುತ್ತಿದ್ದರು. ಈ ಜಾಗದ ಸಮೀಪವೇ ಸೀತಾ ನದಿ ಹರಿಯುತ್ತಿದ್ದು, ಇದೇ ಸ್ಥಳದಲ್ಲಿ ಅಕ್ರಮ ಮರಳುಗಾರಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕಳೆದ ಕೆಲ ದಿನಗಳಿಂದ ಜಾರ್ಜ್ ತೋಟಕ್ಕೆ ಅಳವಡಿಸಿರುವ ಗೇಟ್ ಬೀಗ ಮುರಿದು ಜೆಸಿಬಿ, ಟಿಪ್ಪರ್ ಮೂಲಕ ಮರಳನ್ನು ಸಾಗಿಸುತ್ತಿರುವ ವಿಚಾರ ತೋಟದ ಕಾವಲುಗಾರ ಸುಧೀರ್ ಶೆಟ್ಟಿ ಗಮನಕ್ಕೆ ಬಂದಿದ್ದು, ಮಾಲೀಕರಾದ ಜಾರ್ಜ್ ಅವರಿಗೆ ವಿಷಯ ತಿಳಿಸಿದ್ದರು.

ಫೆಬ್ರವರಿ ೧೮ರ ರಾತ್ರಿ ಮತ್ತೆ ಗೇಟ್‌ಗೆ ಅಳವಡಿಸಿರುವ ಬೀಗ ಮುರಿದು ತೋಟದೊಳಗಿರುವ ರಸ್ತೆಯನ್ನು ಬಳಸಿಕೊಂಡು ಸೀತಾ ನದಿಯಲ್ಲಿರುವ ಮರಳನ್ನು ತೆಗೆದು ಅದೇ ದಾರಿಯಲ್ಲಿ ಬರುತ್ತಿರುವಾಗ ಕಾವಲುಗಾರ ಸುಧೀರ್ ಶೆಟ್ಟಿ ಗೇಟ್ ಅಡ್ಡಗಟ್ಟಿದ ವೇಳೆಯಲ್ಲಿ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ್ದು, ಮೊಬೈಲ್, ಬ್ಯಾಟರಿಗಳನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಜಾರ್ಜ್ ಸ್ನೇಹಿತ ರಮೇಶ್ ಶೆಟ್ಟಿ ಎಂಬವರಿಗೂ ಬೆದರಿಸಿ ಅಲ್ಲಿಂದ ಮರಳು ತುಂಬಿದ ಟಿಪ್ಪರ್ ಸಮೇತ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಸದ್ಯ ಜಿಲ್ಲಾ ಪಂಚಾಯತ್ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಪ್ರವೀಣ್ ಹೆಗ್ಡೆ ಮಾರಾಳಿ, ವಿಜಯ ಶೆಟ್ಟಿ ಗೋಳಿಯಂಗಡಿ ಸೇರಿದಂತೆ ಇತರರ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಊರನ್ನು ಅಭಿವೃದ್ಧಿ ಮಾಡಬೇಕಿರುವ ಜನಪ್ರತಿನಿಧಿಗಳೇ ಅಕ್ರಮ ನಡೆಸುವ ಮೂಲಕ ಊರಿನ ರಸ್ತೆ ಮೊದಲಾದ ಮೂಲಕಸೌಕರ್ಯಕ್ಕೆ ಅಡ್ಡಗಾಲು ಹಾಕಿರುವ ಬಗ್ಗೆ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಲ್ಲದೇ ಈ ಭಾಗದಲ್ಲಿನ ಅವ್ಯವಸ್ಥೆಗಳ ಬಗ್ಗೆ ಉಘ್ರ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

Comments are closed.