ಅಂತರಾಷ್ಟ್ರೀಯ

ಈಜುಕೊಳದಲ್ಲಿ ಮುಳುಗಿದ್ದವನನ್ನು ರಕ್ಷಿಸಿದ 11ರ ಭಾರತದ ಬಾಲಕ!

Pinterest LinkedIn Tumblr


ಅಮೇರಿಕಾ: ಈಜುಕೊಳದಲ್ಲಿ ಮುಳುಗುತ್ತಿದ್ದ 34 ವರ್ಷದ ವ್ಯಕ್ತಿಯನ್ನು 11 ವರ್ಷದ ಪೋರ ಕಾಪಾಡಿದ್ದಾನೆ. ಭಾರತೀಯ ಮೂಲದ ಅದ್ವೈಕ್​ ನಂದಿಕೊಟ್ಕುರ್​ ತನಗಿಂತ ದುಪ್ಪಟ್ಟು ಭಾರವಿರುವ ವ್ಯಕ್ತಿಯನ್ನು ಈಜುಕೊಳದಿಂದ ಎತ್ತಿ ಬದುಕುಳಿಸಿದ್ದಾನೆ.

ಅಮೆರಿಕಾದ ಮಿನ್ನೆಸೊಟ ಬಳಿಯಿರುವ ಈಗನ್ ಕಾಂಪ್ಲೆಕ್ಸ್​​ನಲ್ಲಿರುವ​ ಈಜುಕೊಳದಲ್ಲಿ ಶ್ರೀನಿವಾಸ(34) ತನ್ನ ಗಳೆಯರು ಮತ್ತು ಕುಟುಂಬಸ್ಥರ ಜೊತೆ ಸ್ವಿಮ್​ ಮಾಡುತ್ತಿದ್ದರು. ಆತನಿಗೆ ಈಜು ಬರುತ್ತಿರಲಿಲ್ಲ. ಆದರೆ ಈಜಲು ಪ್ರಯತ್ನಿಸುತ್ತಿದ್ದರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನೋಡನೋಡುತ್ತಿದ್ದಂತೆ 77 ಕೆಜಿ ತೂಕದ ವ್ಯಕ್ತಿ ತೇಲಲು ಆಗದೆ 8 ಅಡಿ ಆಳವಿರುವ ಈಜುಕೊಳದೊಳಗೆ ಮುಳುಗುತ್ತಿದ್ದರು. ಅಲ್ಲಿ ಏನಾಯಿತು ಎಂದು ನೋಡುವಷ್ಟರಲ್ಲಿ ಆತ ಸಂಪೂರ್ಣ ಮುಳುಗಿದ್ದ.

ಅದೇ ಕಾಂಪ್ಲೆಕ್ಸ್​ನಲ್ಲಿ ವಾಸವಿದ್ದ ಅದ್ವೈಕ್ ತನ್ನ ಹೆತ್ತವರ ಜೊತೆ ​ ಸ್ವಿಮ್ಮಿಂಗ್​ ಪೂಲ್​ ಬಳಿ ಸುತ್ತಾಡುತ್ತಿದ್ದ. ಈ ಘಟನೆ ಸಂಭವಿಸಿದಾಗ ತಾಯಿ ಲಲಿತಾ ಮರೆಡ್ಡಿ ಮತ್ತು ತಂದೆ ರಘು ನಂದಿಕೊಟ್ಕುರ್​ ಅವರೂ ಸಹ ಇದ್ದರು.

ಸ್ವಿಮ್ಮಿಂಗ್​ ಪೂಲ್​ನಲ್ಲಿ ಮುಳುಗುತ್ತಿರುವ, ಪ್ರಜ್ಞೆ ಕಳೆದುಕೊಂಡಿರುವ ವ್ಯಕ್ತಿಯನ್ನು ಅದ್ವೈಕ್​ನ ತಾಯಿ ಲಲಿತಾ ನೋಡಿದರು. ಆಗ ಲಿಲತಾ ತಕ್ಷಣ ಅಲ್ಲೇ ಪಕ್ಕದಲ್ಲಿ ಇದ್ದ 9 ಜನರನ್ನು ಸಹಾಯಕ್ಕೆ ಕರೆದರು. ಆದರೆ ಯಾರೊಬ್ಬರೂ ಈಜುಕೊಳಕ್ಕೆ ಧುಮುಕಿ ಆತನನ್ನು ಬದುಕಿಸುವ ಸಾಹಸಕ್ಕೆ ಮುಂದಾಗಲಿಲ್ಲ.

ರಘು ಮತ್ತು ಲಲಿತಾಗೆ ಈಜು ಬರುತ್ತಿತ್ತು. ಆಗ ರಘು ಸ್ವಿಮ್ಮಿಂಗ್​ ಪೂಲ್​ಗೆ ಧುಮುಕಿ ತೇಲುವ ಟೂಬ್​ನ ಸಹಾಯದಿಂದ ಆಳಕ್ಕೆ ಮುಳುಗಿ ಶ್ರೀನಿವಾಸನನ್ನು ಬದುಕಿಸಲು ಮುಂದಾದರು. ‘ಆದರೆ ಆ ತೇಲುವ ಟೂಬ್​ ನನ್ನನ್ನು ಮೇಲಕ್ಕೆ ಎತ್ತುತ್ತಿತ್ತು. ನನಗೆ ಆ ವ್ಯಕ್ತಿಯನ್ನು ಹಿಡಿಯಲು ಸಾಧ್ಯವಾಗಲಿಲ್ಲ’. ಆಗ ಇದೆಲ್ಲವನ್ನು ನೋಡುತ್ತಿದ್ದ ಲಲಿತಾಗೆ ಏನು ಮಾಡಬೇಕೆಂದು ತೋಚದಾಯಿತು. 30 ಕೆಜಿ ಇರುವ ತನ್ನ 11 ವರ್ಷದ ಮಗನಿಗೆ ಆ ವ್ಯಕ್ತಿಯನ್ನು ಬದುಕಿಸಲು ಹೇಳಿದಳು.

‘ಅಮ್ಮ ನನಗೆ ಸ್ವಿಮ್ಮಿಂಗ್​ ಪೂಲ್​ಗೆ ಧುಮುಕಲು ಹೇಳಿದರು. ಆ ವ್ಯಕ್ತಿ ತುಂಬಾ ಭಾರವಿದ್ದಾನೆ ಎಂದು ಹೇಳಿದೆ. ಆದರೂ ನಾನು ಧುಮುಕಿದೆ’ ಎಂದು ಅದ್ವೈಕ್​ ಹೇಳುತ್ತಾನೆ.

ಶ್ರೀನಿವಾಸ 77 ಕೆಜಿ ತೂಕವಿದ್ದ ವ್ಯಕ್ತಿ. ಅವರನ್ನು ಈಜುಕೊಳದ ತಳಭಾಗದಿಂದ ಮೇಲೆತ್ತುವುದು 11 ವರ್ಷದ ಪೋರನಿಗೆ ಸಾಹಸದ ಕೆಲಸವೇ ಆಗಿತ್ತು. ಅಷ್ಟೇ ಅಲ್ಲದೇ ನೀರಿನ ಒತ್ತಡ ಕೆಳಗೆ ತಳ್ಳುತ್ತಿತ್ತು. ಆದರೆ ಅದ್ವೈಕ್​ ಧೈರ್ಯ ಮಾಡಿ ಈಜುಕೊಳಕ್ಕೆ ಧುಮುಕಿ 77 ಕೆಜಿ ತೂಕದ ವ್ಯಕ್ತಿಯನ್ನು ಮೇಲೆತ್ತಿದ್ದ.

ಅದ್ವೈಕ್​ ಶ್ರೀನಿವಾಸನನ್ನು ಮೇಲೆತ್ತಿದಾಗ, ಆತನ ತಂದೆ ರಘು, ಚಿಕ್ಕಪ್ಪ ಸುಸೀಲ್​ ಕುಮಾರ್​ ನಂದಿಕೊಟ್ಕೂರ್​ ಮತ್ತಿತರರು ಸೇರಿ ಆ ವ್ಯಕ್ತಿಯನ್ನು ಈಜುಕೊಳದಿಂದ ಹೊರಗೆ ಎಳೆದುಕೊಂಡರು. ಅದೃಷ್ಟವಶಾತ್​ ಶ್ರೀನಿವಾಸ ಪ್ರಾಣಾಪಾಯದಿಂದ ಪಾರಾಗಿದ್ದರು. ಸುಸೀಲ್​ ವೃತ್ತಿಪರ ಈಜುಗಾರನಲ್ಲ. ಯಾವುದೇ ತರಬೇತಿ ಪಡೆದಿರಲಿಲ್ಲ. ಆದರೂ ಸಾಹಸ ಮಾಡಿ ಆ ವ್ಯಕ್ತಿಯ ಜೀವವನ್ನು ಕಾಪಾಡಿದ್ದರು.

ವಿಷಯ ತಿಳಿದಾಕ್ಷಣ ಸ್ಥಳಕ್ಕಾಗಮಿಸಿದ ಈಗನ್​ ಪೊಲೀಸ್​ ಠಾಣೆಯ ಪೊಲೀಸರು ಘಟನೆ ಸಂಬಂಧ ವಿಚಾರಣೆ ನಡೆಸಿದರು. ಅಲ್ಲದೇ ಶ್ರೀನಿವಾಸರನ್ನು ಬದುಕುಳಿಸಿದ ಅದ್ವೈಕ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

‘ಅಪ್ರಾಪ್ತ ಹುಡಗನೊಬ್ಬ ಸ್ವಿಮ್ಮಿಂಗ್​ ಪೂಲ್​ಗೆ ಧುಮುಕಿ ವ್ಯಕ್ತಿಯನ್ನು ಬದುಕಿಸಿರುವುದು ಅಚ್ಚರಿಯ ಸಂಗತಿ. ಬದುಕುಳಿದಿರುವ ವ್ಯಕ್ತಿ ತುಂಬಾ ಅದೃಷ್ಟವಂತ’ ಎಂದು ಪೊಲೀಸ್​ ಅಧಿಕಾರಿ ಅರೋನ್ ಮಾಚ್ಟೆಮಸ್​ ಸಿಎನ್​ಎನ್​ ಗೆ ಹೇಳಿದರು.

ಪೊಲೀಸ್​ ಇಲಾಖೆ ಅದ್ವೈತ್​ ಮತ್ತು ಸುಸೀಲ್ ಅವರನ್ನು ‘ಲೈಫ್​ ಸೇವಿಂಗ್​ ಅವಾರ್ಡ್’ಗೆ ನಾಮಿನೇಟ್​ ಮಾಡಿದೆ.

Comments are closed.