ಕರಾವಳಿ

ಮೋದಿ ಮತ್ತೆ ಪ್ರಧಾನಿಯಾಗಲು ಹರಕೆಯಾಟ : ಡಿ.29ರಂದು ಮಂಗಳೂರಿನಲ್ಲಿ “ಸಂಪೂರ್ಣ ದೇವಿ ಮಹಾತ್ಮೆ” ಯಕ್ಷಗಾನ

Pinterest LinkedIn Tumblr

ಮಂಗಳೂರು, ಡಿಸೆಂಬರ್ 25: ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಹಾರೈಸಿ ಮಂಗಳೂರಿನ ಟೀಂ ಮೋದಿಯ ಸದಸ್ಯರು, ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಕಡೆಯಿಂದ ‘ಸಂಪೂರ್ಣ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಸಲು ಮುಂದಾಗಿದ್ದಾರೆ.

ಡಿಸೆಂಬರ್ 29ರ ಶನಿವಾರದಂದು ನಗರದ ಮಣ್ಣಗುಡ್ಡೆ ಗುರ್ಜಿ ಸಮೀಪದ ಮೈದಾನದಲ್ಲಿ ‘ಸಂಪೂರ್ಣ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ. ಸಾಮಾನ್ಯವಾಗಿ, ಕಟೀಲು ಮತ್ತು ಉಡುಪಿ ಜಿಲ್ಲೆ ಮಂದರ್ತಿ ದುರ್ಗಾಪರಮೇಶ್ವರಿ ಮೇಳದ ಯಕ್ಷಗಾನ ನಡೆಸಬೇಕಾದರೆ, ಎರಡು ವರ್ಷಗಳ ಮೊದಲೇ ಮುಂಗಡ ಬುಕ್ಕಿಂಗ್ ಮಾಡಬೇಕಾಗುತ್ತದೆ. ಆದರೆ, ಡಿಸೆಂಬರ್ 29ರಂದು ಕಟೀಲು ಮೇಳದ ಹರಕೆ ಹೊತ್ತಿದ್ದ ಕುಟುಂಬಕ್ಕೆ ಯಕ್ಷಗಾನ ನಡೆಸಲು ಅನಾನುಕೂಲವಾಗಿದ್ದರಿಂದ, ಈ ದಿನಾಂಕ ಟೀ ಮೋದಿ ತಂಡಕ್ಕೆ ಸಿಕ್ಕಿದೆ.

ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ಟೀಂ ಮೋದಿ ತಂಡ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದು, ಸುಮಾರು ಆರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.

ಪ್ರಮುಖವಾಗಿ ಕರಾವಳಿ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಅವರ ಅಭಿಮಾನಿಗಳು ತೋರುವ ‘ಅಭಿಮಾನ’ ಅಂತಿಂತದಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲೂ ಮೋದಿ ಗೆದ್ದು ಬರಬೇಕೆಂದು ಹಲವು ಪೂಜೆ, ಪುನಸ್ಕಾರಗಳು ನಡೆದಿದ್ದವು.
ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಇತ್ತೀಚೆಗೆ ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳದಲ್ಲಿ ಮಹಾರುದ್ರಯಾಗ ನಡೆಸಲಾಗಿತ್ತು. ಮೋದಿಯವರ ನಕ್ಷತ್ರ, ಹೆಸರಿನಲ್ಲಿ ಸಂಕಲ್ಪ ಮಾಡಿ ಪೂರ್ಣಾಹುತಿ ನೀಡಲಾಗಿತ್ತು.

ಈಗ, ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಮಂಗಳೂರು ಟೀಂ ಮೋದಿ, ಕರಾವಳಿಯ ಇನ್ನೊಂದು ಹರಕೆಯ ಪದ್ದತಿಯ ಮೂಲಕ ದೇವಿಯನ್ನು ಆರಾಧಿಸಲು ಮುಂದಾಗಿದ್ದಾರೆ.

ಇನ್ನೇನು ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಗೆದ್ದು ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಎಂದು ಅವರ ಅಭಿಮಾನಿಗಳು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಮತ್ತೆ ದೇವರ, ದಿಂಡರ, ದೈವಗಳ ಮೊರೆ ಹೋಗಿದ್ದಾರೆ.

Comments are closed.