
ಜೇನುಗೂಡಿಗೆ ಕಲ್ಲು ಹೊಡೆಯುವುದು ಯಾರಿಗೇ ಆದರೂ ಅತ್ಯಂತ ಸವಾಲು ಹಾಗೂ ಕಠಿಣ ಕೆಲಸವೇ ಸರಿ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತು ಎದುರಾಗಬಹುದು. ಕಲ್ಲು ಹೊಡೆಯುವ ಮುನ್ನ ಸಕಲ ಮುಂಜಾಗ್ರತೆ ತೆಗೆದುಕೊಂಡರೆ ಮಾತ್ರ ರೊಚ್ಚಿಗೇಳಬಹುದಾದ ಜೇನುಗಳಿಂದ ಪಾರಾಗಬಹುದು. ಇಲ್ಲವಾದಲ್ಲಿ ಗೂಡಿನಿಂದ ಏಳುವ ಜೇನುಗಳು ಯಾವ ರೀತಿಯ ಪರಿಣಾಮವನ್ನೂ ಬೇಕಾದರೂ ಉಂಟು ಮಾಡಬಹುದು. ಏಕೆಂದರೆ ಅವು ತನ್ನ ಗೂಡಿಗೆ ಕಲ್ಲು ಹೊಡೆಸಿಕೊಂಡು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು, ಕೋಪಗೊಂಡಿರುವ ಜೇನುಗಳು.
ಈಗ ಕಾಂಗ್ರೆಸ್ ಪರಿಸ್ಥಿತಿಯೂ ಕೂಡ ಅದೇ ಆಗಿದೆ. ವಿಸ್ತರಣೆ ಎಂಬ ಜೇನುಗೂಡಿಗೆ ಕಲ್ಲು ಹೊಡೆದಾಗಿದೆ. ಆದರೆ, ಹೊಡೆಯುವ ಮುನ್ನ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿ, ಈ ಸಾಹಸಕ್ಕೆ ಕೈ ಹಾಕಿದೆ. ಕಾಂಗ್ರೆಸ್ ನಿಲುವಿನಲ್ಲಿ ಗಟ್ಟಿತನ, ಬಂಡಾಯ ಏಳುವವರಿಗೆ ಸ್ಪಷ್ಟ ಸಂದೇಶ ರವಾನಿಸಿದರೂ ಇದರಿಂದ ಪಕ್ಷಕ್ಕೆ ಯಾವ ರೀತಿಯ ಪರಿಣಾಮ ಬೇಕಾದರೂ ಎದುರಾಗಬಹುದು ಎಂಬುದರ ಅರಿವು ಕೂಡ ಇದೆ. ಸಚಿವ ಸ್ಥಾನ ಕಳೆದುಕೊಂಡವರು, ಸ್ಥಾನ ಸಿಗದವರು ಯಾವ ನಿರ್ಧಾರವನ್ನು ಬೇಕಾದರೂ ಈಗ ತೆಗೆದುಕೊಳ್ಳಬಹುದು. ಅವರ ನಿರ್ಧಾರ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೂ ಕಾರಣವಾದರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ, ಕಾಂಗ್ರೆಸ್ ಇರುವ ಸದ್ಯದ ಪರಿಸ್ಥಿತಿಯಲ್ಲಿ ಬಂಡಾಯಗಾರರು ಅಷ್ಟೊಂದು ಧೈರ್ಯ ತೋರಲಾರರು ಎಂಬ ನಂಬಿಕೆ ಕೈ ಪಾಳಯದ ಮುಖಂಡರದ್ದು.
ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೂ ಒಂದಿಲ್ಲೊಂದು ಕಾರಣದಿಂದ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಕ್ಕೆ ಬಿಸಿ ತುಪ್ಪವಾಗಿಯೇ ಪರಿಣಮಿಸಿದ್ದರು. ಅವರ ಪ್ರತಿ ನಡಿಗೆಗಳು ಕೂಡ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಲೇ ಇದ್ದವು. ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರದಿಂದ ಆರಂಭವಾದ ಜಾರಕಿಹೊಳಿ ಅಂತಃಕಲಹ ಕೊನೆ, ಕೊನೆಗೆ ಸರ್ಕಾರದ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ನೀಡುವ ಹಂತಕ್ಕೆ ಬೆಳೆದು ನಿಂತಿತ್ತು. ಅಂತಿಮವಾಗಿ ಅದು ದೆಹಲಿ ಹೈಕಮಾಂಡ್ ಅಂಗಳಕ್ಕೂ ಮುಟ್ಟಿತ್ತು. ಆದರೆ, ಕಾಂಗ್ರೆಸ್ ಮುಖಂಡರಿಗೆ ಅಂದು ಬಂಡಾಯ ಶಮನವೇ ಪ್ರಮುಖವಾಗಿತ್ತು. ಆದರೆ, ಈಗ ರಾಜಕೀಯ ಚಿತ್ರಣವೇ ಬದಲಾಗಿದೆ.
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್ಗೆ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮತ್ತಷ್ಟು ಕಗ್ಗಂಟಾಗೇ ಪರಿಣಮಿಸಿತ್ತು. ಯಾವ ಪಕ್ಷಕ್ಕೆ ಬಹುಮತ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ನೊಂದಿಗೆ ಕೈ ಜೋಡಿಸಿ, ತನ್ನ ಅಸ್ತಿತ್ವವನ್ನು ಮರುಸ್ಥಾಪಿಸಿಕೊಂಡಿತ್ತು. ಜೆಡಿಎಸ್ಗಿಂತ ಎರಡು ಪಟ್ಟು ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಮುಖ್ಯಮಂತ್ರಿ ಪಟ್ಟವನ್ನೂ ಐದು ವರ್ಷಗಳ ಕಾಲವೂ ಆ ಪಕ್ಷಕ್ಕೆ ಬಿಟ್ಟು ಕೊಡಲು ನಿರ್ಧಸಿತ್ತು. ಇಂದು ಅಂದಿಗೆ ಕಾಂಗ್ರೆಸ್ಗೆ ಅನಿವಾರ್ಯ ಕೂಡ ಆಗಿತ್ತು.
ಪಕ್ಷದ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾದ ಕಾಂಗ್ರೆಸ್ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಬೆದರಿಕೆ ತಂತ್ರ ಅನುಸರಿಸಿದರು. ಇದರಿಂದ ಮೈತ್ರಿ ಸರ್ಕಾರ ಇಂದು ಬೀಳುತ್ತದೆಯೋ, ನಾಳೆ ಬೀಳುತ್ತದೆಯೋ ಎಂಬ ಭಯದಲ್ಲೇ ಮೈತ್ರಿ ನಾಯಕರು ಏಳು ತಿಂಗಳು ದಿನ ದೂಡಿದರು. ಅವರಲ್ಲಿ ಸರ್ಕಾರಕ್ಕೆ ಹೆಚ್ಚಿನ ತಲೆ ನೋವು ತಂದೊಡ್ಡಿದ್ದು, ಸಚಿವ ರಮೇಶ್ ಜಾರಕಿಹೊಳಿ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ನೇತೃತ್ವದ ಸಭೆಯಲ್ಲೂ ರಾಜೀನಾಮೆ ನೀಡಿ, ತಮ್ಮ ಬೆಂಬಲಿಗ ಶಾಸಕರ ರಾಜೀನಾಮೆ ನೀಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಸಾಕಷ್ಟು ರಾಜಕೀಯ ಹೈಡ್ರಾಮಾವನ್ನೇ ಸೃಷ್ಟಿ ಮಾಡಿದ್ದರು. ದಿನಕ್ಕೊಂದು ಹೇಳಿಕೆ ನೀಡುತ್ತಾ, ಅತ್ತ ಬಿಜೆಪಿ ಮುಖಂಡರು ಆಯೋಜಿಸುವ ಔತಣಕೂಟಕ್ಕೂ ತೆರಳುವ ಮೂಲಕ ರಮೇಶ್ ಪಕ್ಷಕ್ಕೆ ಮಗ್ಗುಲ ಮುಳ್ಳಾಗಿಯೇ ಕಾಡಿದ್ದರು. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಂದು ಹೆಜ್ಜೆ ಮುಂದೆ ಹೋಗಿ, ರಮೇಶ್ ಜಾರಕಿಹೊಳಿಗೆ ಮಂತ್ರಿ ಪದವಿಯಿಂದ ಕೊಕ್ ನೀಡಿದ್ದಾರೆ. ಈ ಮೂಲಕ ಬಂಡಾಯ ಸಾರುವವರಿಗೆ ಖಡಕ್ ಸಂದೇಶ ನೀಡಿದ್ದಾರೆ.
ಆದರೆ, ಮೊದಲೇ ಬಂಡಾಯದ ಕೂಪದಲ್ಲಿ ಮುಳುಗಿದ್ದ ರಮೇಶ್ ಜಾರಕಿಹೊಳಿ ಈಗ ಮತ್ತೆ ಪೆಟ್ಟು ತಿಂದ ಹುಲಿಯಾಗಿದ್ದಾರೆ. ಅದು ಶಾಂತವಾಗುತ್ತದೆಯೋ ಅಥವಾ ತನಗೆ ಪೆಟ್ಟು ನೀಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ. ರಮೇಶ್ ಬಣದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗುತ್ತಿರುವ ಏಳು ಮಂದಿ ಶಾಸಕರ ರಾಜಿನಾಮೆ ಕೊಡಿಸಿ, ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಾರೋ ಅಥವಾ ಪ್ರಬಲವಾಗಿ ಬೆಳೆಯುತ್ತಿರುವ ಕಾಂಗ್ರೆಸ್ ಹೈಕಮಾಂಡ್ ಎದುರುಹಾಕಿಕೊಳ್ಳುವುದು ಬೇಡ ಎಂದು ಸುಮ್ಮನಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
Comments are closed.