ಕರ್ನಾಟಕ

ಪರಮೇಶ್ವರ್​ ಎಂದಾದರೂ ಬಿಜೆಪಿಗೆ ಬಂದರೆ ಒಳ್ಳೆಯ ಹುದ್ದೆ ಕೊಡುತ್ತೇವೆ: ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್​ ಅತೃಪ್ತರ ನಡೆಯನ್ನು ಗಮನಿಸಿ ನಾವು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​ ಯಾವಾಗ ಬೇಕಾದರೂ ಬಿಜೆಪಿಗೆ ಬರಲಿ. ಅವರನ್ನು ಸೇರಿಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ಯಡಿಯೂರಪ್ಪ ಕಾಂಗ್ರೆಸ್​ಗೆ ಬರಲಿ ಎಂದು ಹೇಳಿದ್ದ ಡಾ. ಜಿ. ಪರಮೇಶ್ವರ್ ಮಾತಿಗೆ ತಿರುಗೇಟು ನೀಡಿರುವ ಯಡಿಯೂರಪ್ಪ, ಬೇಕಿದ್ದರೆ ಅವರೇ ನಮ್ಮ ಪಕ್ಷಕ್ಕೆ ಬರಲಿ. ಪರಮೇಶ್ವರ್​ ಅವರಿಗೆ ಒಳ್ಳೆಯ ಹುದ್ದೆ ನೀಡುತ್ತೇವೆ. ಹೇಗಿದ್ದರೂ ಅವರಿಗೂ ಕಾಂಗ್ರೆಸ್​ ಬಗ್ಗೆ ಅಸಮಾಧಾನವಿದೆ. ಅವರು ಯಾವಾಗ ಬಿಜೆಪಿಗೆ ಬಂದರೂ ನಾವು ಸೇರಿಸಿಕೊಳ್ಳುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ.

ಸಚಿವ ಸಂಪುಟ ಪುನಾರಚನೆ ಬಗ್ಗೆ ಮಾತನಾಡಿರುವ ಬಿಎಸ್​ವೈ, ಪ್ರಮಾಣವಚನ ಕಾರ್ಯಕ್ರಮ ಮುಗಿಯಲಿ, ಆಮೇಲೆ ನೋಡೋಣ. ಅತೃಪ್ತರು ಏನೆಲ್ಲಾ ಮಾಡುತ್ತಾರೆ ಎಂದು ನೋಡುತ್ತಿರಿ. ಅತೃಪ್ತರ ನಡೆಯನ್ನು ಗಮನಿಸಿ ನಂತರ ನಾವು ನಮ್ಮ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ನನ್ನನ್ನು ಯಾರೂ ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಹೀಗಾಗಿ, ನಾನು ಹೋಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಈ ಬಾರಿ ಮತ್ತೊಮ್ಮೆ ಆಪರೇಷನ್​ ಕಮಲಕ್ಕೆ ಬಿಜೆಪಿ ಗಾಳ ಹಾಕಿದೆ ಎಂಬ ಆರಫವನ್ನು ಕಾಂಗ್ರೆಸ್​ ಮಾಡಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್​ ಶಾಸಕರನ್ನು ತಮ್ಮ ಪಕ್ಷದತ್ತ ಸೆಳೆಯಲು ಬಲೆ ಬೀಸಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಅದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಡಿ.ವಿ. ಸದಾನಂದ ಗೌಡ ಕೂಡ ಈಗಾಗಲೇ 2-3 ತೋಳಗಳು ನಮ್ಮ ಗುಹೆಯೊಳಗೆ ಬಂದಿವೆ. ಅಧಿವೇಶನದ ಬಳಿಕ ಆ ತೋಳಗಳು ಹೊರಗೆ ಬರಲಿವೆ ಎಂದು ಹೇಳಿಕೆ ನೀಡಿದ್ದು ಮತ್ತಷ್ಟು ಅನುಮಾನ ಹುಟ್ಟುವಂತೆ ಮಾಡಿತ್ತು. ಇಂದು ಸಚಿವ ರಮೇಶ್​ ಕುಮಾರ್​ ​ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದರಿಂದ ಹಾಗೂ ಸಂಪುಟ ವಿಸ್ತರಣೆ ವೇಳೆ ಹಲವು ಜಿಲ್ಲೆಗಳ ನಾಯಕರಿಗೆ ಅವಕಾಶ ಸಿಕ್ಕಿಲ್ಲ ಎಂಬ ಅಸಮಾಧಾನ ಎದ್ದಿರುವುದರಿಂದ ಮತ್ತೊಮ್ಮೆ ಅತೃಪ್ತ ಶಾಸಕರನ್ನು ಚಿವುಟಿದಂತಾಗಿದೆ.

Comments are closed.