
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಪರೇಷನ್ ಕಮಲಕ್ಕೆ ಮುಂದಾದ ಬಿಜೆಪಿಗೆ ಉಭಯ ಪಕ್ಷಗಳು ತಿರುಗೇಟು ನೀಡಲು ತಂತ್ರ ರೂಪಿಸಿವೆ. ಒಂದೆಡೆ ಹೈಕಮಾಂಡ್ ಸೂಚನೆಯಂತೆ ರಾಜ್ಯ ನಾಯಕರು ಸಚಿವ ಸ್ಥಾನ ವಂಚಿತರ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನೊಂದೆಡೆ ಆಪರೇಷನ್ ಕಮಲವನ್ನು ವಿಫಲಗೊಳಿಸಲು ಬಿಜೆಪಿಯ ಅತೃಪ್ತ ಶಾಸಕರನ್ನು ಕೈ-ತೆನೆ ನಾಯಕರು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿನ್ನೆ ರಾತ್ರಿಯಿಂದಲೇ ಆಪರೇಷನ್ ಕೈ-ತೆನೆಗೆ ಮುಂದಾಗಿರುವ ಎರಡೂ ಪಕ್ಷಗಳು ಬಿಜೆಪಿಯ 5 ಶಾಸಕರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಜೆಡಿಎಸ್ಗೆ ಬಂದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಡಿಕೆಶಿ ಅವರೇ ಕೈ-ತೆನೆ ಆಪರೇಷನ್ನ ಮುಂದಾಳತ್ವ ವಹಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಯಾರಿಗೆ ಗಾಳ..?
ಬಿಜೆಪಿಗೆ ಬಳ್ಳಾರಿಯಿಂದಲೇ ಕೌಂಟರ್ ಆಪರೇಷನ್ ಕೊಡಲು ಮುಂದಾಗಿದ್ದಾರೆ. ಡಿಕೆಶಿ ಹಾಗೂ ಸಿಎಂ ಆಪ್ತರು ಶಿರಗುಪ್ಪ ಬಿಜೆಪಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ಅವರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಹಣಕಾಸಿನ ತೊಂದರೆಯಲ್ಲಿರುವ ಸೋಮಲಿಂಗಪ್ಪನವರಿಗೆ ಹಣಕಾಸಿನ ನೆರವು ನೀಡಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಸೋಮಲಿಂಗಪ್ಪ ಬಿಜೆಪಿಯಿಂದ ಕಾಂಗ್ರೆಸ್ ಅಥವಾ ಜೆಡಿಎಸ್ಗೆ ಬರುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್, ಹಿರಿಯೂರು ಶಾಸಕಿ ಪೂರ್ಣಿಮಾ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ಹಾಸನ ಶಾಸಕ ಪ್ರೀತಂಗೌಡ ಅವರ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ಬೆಂಗಳೂರಿನ ಪ್ರಭಾವಿ ವೀರಶೈವ ಶಾಸಕರೊಬ್ಬರ ಸಂಪರ್ಕಕ್ಕೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಅವರು ಈ ಹಿಂದೆ ಕಾಂಗ್ರೆಸ್ನಲ್ಲೇ ಇದ್ದರು. ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಡಿಕೆಶಿ ಈಗಾಗಲೇ ಆ ಶಾಸಕರ ಜೊತೆ ಮಾತುಕತೆ ನಡೆಸಿದ್ದು, ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿದ್ದರೆ ಬಿಎಎಸ್ವೈ ಮತ್ತು ಅವರ ಮಕ್ಕಳು ಬೆಳೆಯಲು ಬಿಡಲ್ಲ. ನಮ್ಮ ಪಕ್ಷಕ್ಕೆ ಬಂದರೆ ದಕ್ಷಿಣ ಕರ್ನಾಟಕದ ವೀರಶೈವ-ಲಿಂಗಾಯತ ನಾಯಕರಾಗುವ ಅವಕಾಶ ಇದೆ. ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆ ಶಾಸಕರರೂ ಸಹ ಕಾಂಗ್ರೆಸ್ಗೆ ಬರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದ್ದು, ಬಿಜೆಪಿಗೆ ಕೈಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Comments are closed.