
‘ಬಹಳ ಜನ ಅಂದುಕೊಂಡಿದ್ದಾರೆ… ಅಪ್ಪನ ಎರಡನೇ ಹೆಂಡತಿ ಕರೀನಾ ಮತ್ತು ನನ್ನ ನಡುವೆ ಎಲ್ಲ ಸರಿಯಾಗಿಲ್ಲ ಅಂತ. ಆದರೆ, ಅದೆಲ್ಲ ಸುಳ್ಳು. ಅಪ್ಪ ಆಕೆಯನ್ನು ಮದುವೆಯಾದಾಗ ನಾನು ಯಾವ ರೀತಿ ಕರೆಯಬೇಕೆಂದು ಗೊಂದಲವಾಗಿದ್ದು ಸುಳ್ಳಲ್ಲ. ಆಕೆಯನ್ನು ಕರೀನಾ ಎಂದು ಹೆಸರಿಡಿದು ಕರೆಯಬೇಕಾ ಅಥವಾ ಕರೀನಾ ಆಂಟಿ ಎನ್ನಬೇಕಾ ಎಂದು ಗೊಂದಲವಾಗಿತ್ತು. ಆಗ ನನ್ನ ಅಪ್ಪನೇ ನನ್ನನ್ನು ಕರೆದು ‘ನೀನು ಆಕೆಯನ್ನು ಆಂಟಿ ಎಂದು ಕರೆಯೋಕೆ ನಿನಗೂ ಸಾಧ್ಯವಿಲ್ಲ.. ಈ ಸಂಬಂಧಕ್ಕೆ ಯಾವುದೇ ಹೆಸರಿಡಬೇಡ’ ಎಂದಿದ್ದರು’.
ಹೀಗೆ ತನ್ನ, ತನ್ನ ಅಪ್ಪನ ಹಾಗೂ ಆತನ ಎರಡನೇ ಹೆಂಡತಿ ಕರೀನಾ ಕಪೂರ್ ನಡುವಿನ ಸಂಬಂಧ, ತನ್ನಮ್ಮ ಅಮೃತಾ ಸಿಂಗ್ ಅವರ ಅಂತರಾಳದ ಬಗ್ಗೆ ಸೈಫ್ ಅಲಿಖಾನ್ ಮಗಳು ಸಾರಾ ಅಲಿಖಾನ್ ಮನಬಿಚ್ಚಿ ಮಾತನಾಡಿದ್ದು ‘ಕಾಫಿ ವಿಥ್ ಕರಣ್’ ಸೀಸನ್ 6 ಕಾರ್ಯಕ್ರಮದಲ್ಲಿ. ಅಪ್ಪ ಸೈಫ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರಾ ತಮ್ಮ ವೈಯಕ್ತಿಕ ಬದುಕಿನ ಹಲವು ವಿಷಯಗಳನ್ನು ತೆರೆದಿಟ್ಟರು. ಅದಕ್ಕೆ ಸೈಫ್ ಕೂಡ ಧ್ವನಿಗೂಡಿಸಿದರು.
ನಾವೆಲ್ಲ ಬಹಳ ಕಂಫರ್ಟಬಲ್ ಆಗಿದ್ದೇವೆ:
ಕರೀನಾ ಕಪೂರ್ ತಮ್ಮಷ್ಟಕ್ಕೆ ತಾವಿರುವ ಗುಣವುಳ್ಳ, ಸ್ವಾಭಿಮಾನಿ ಮಹಿಳೆ. ‘ನೋಡು ಸಾರಾ, ನಿನಗೆ ಒಬ್ಬಳು ಅದ್ಭುತವಾದ ಅಮ್ಮನಿದ್ದಾಳೆ. ಹಾಗಾಗಿ, ನೀನು ನನ್ನನ್ನು ನಿನ್ನ ಅಮ್ಮನ ಸ್ಥಾನದಲ್ಲಿಟ್ಟು ನೋಡಬೇಕು ಎಂದು ನಾನು ಯಾವತ್ತೂ ಬಯಸುವುದಿಲ್ಲ. ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಹಾಗೆ ಇರಬೇಕೆಂಬುದು ನನ್ನಾಸೆ’ ಎಂದು ಹೇಳಿದ್ದರು. ಅಂದಿನಿಂದ ನಾವಿಬ್ಬರೂ ಅದೇರೀತಿ ಇದ್ದೇವೆ.
ನನ್ನಪ್ಪ ಕೂಡ ಯಾವತ್ತೂ ‘ಇವಳು ನಿನ್ನ ಮಲತಾಯಿ. ಅವಳಿಗೆ ಗೌರವ ಕೊಡಬೇಕು’ ಎಂಬಿತ್ಯಾದಿ ಟಿಪಿಕಲ್ ಅಪ್ಪನ ರೀತಿ ವರ್ತಿಸಿಲ್ಲ. ಹಾಗಾಗಿ, ನನ್ನ ಮತ್ತು ಕರೀನಾ ಸಂಬಂಧಕ್ಕೆ ಬೌಂಡರಿ ಇಲ್ಲ ಎಂದು ಸಾರಾ ಹೇಳಿಕೊಂಡಿದ್ದಾರೆ.
ಅಪ್ಪನ ಮದುವೆಗೆ ಅಮ್ಮನೇ ರೆಡಿ ಮಾಡಿದ್ರು:
ನಮ್ಮ ಕುಟುಂಬ ಹೊರಗಿನವರಿಗೆ ಹೇಗೆ ಕಾಣುತ್ತದೆಯೋ ಗೊತ್ತಿಲ್ಲ. ಆದರೆ, ನಾವು ಒಬ್ಬರಿಗೊಬ್ಬರು ಬಹಳ ಕಂಫರ್ಟಬಲ್ ಆಗಿದ್ದೇವೆ. ನನ್ನ ಅಪ್ಪನ ಎರಡನೇ ಮದುವೆಗೆ ನನ್ನ ಅಮ್ಮ ಅಮೃತಾ ಸಿಂಗ್ ಸ್ವತಃ ನನ್ನನ್ನು ರೆಡಿ ಮಾಡಿದ್ದರು. ಅಮ್ಮ ಅಮೃತಾ ಸಿಂಗ್ ಮತ್ತು ಕರೀನಾ ಕಪೂರ್ ಇಬ್ಬರೂ ಬಹಳ ಪ್ರಬುದ್ಧರಾಗಿ ಯೋಚಿಸುವುದರಿಂದ ಅವರಿಬ್ಬರ ನಡುವೆ ಮನಸ್ತಾಪ ಬಂದಿಲ್ಲ.
ನನ್ನಪ್ಪ ಮತ್ತು ಅಮ್ಮ ನಾನಂದುಕೊಂಡಿದ್ದಕ್ಕಿಂತ ಬಹಳ ಸಂತೋಷವಾಗಿದ್ದಾರೆ. ಒಂದುವೇಳೆ ಅವರಿಬ್ಬರೂ ಒಟ್ಟಿಗೆ ಇರುತ್ತಿದ್ದರೂ ಇಷ್ಟು ಖುಷಿಯಾಗಿರುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ನನಗೂ ಅಷ್ಟೇ, ಎರಡು ಮನೆ ಸಿಕ್ಕಂತಾಗಿದೆ. ನಾನು ಎಲ್ಲಿದ್ದರೂ ಆ ವ್ಯತ್ಯಾಸ ನನಗೆ ಗೊತ್ತಾಗುವುದೇ ಇಲ್ಲ. ನಾವು ಪ್ರತಿಯೊಬ್ಬರ ನಿರ್ಧಾರಕ್ಕೂ, ಪ್ರತಿಯೊಬ್ಬರ ಸಂಬಂಧಗಳಿಗೂ ಗೌರವ ಕೊಟ್ಟಾಗ ನಾವೂ ಖುಷಿಯಾಗಿರಬಹುದು, ಬೇರೆಯವರನ್ನೂ ಖುಷಿಯಾಗಿ ಬದುಕಲು ಬಿಡಬಹುದು ಅನ್ನೋದು ನಾನು ಅವರಿಬ್ಬರನ್ನೂ ನೋಡಿ ಕಲಿತುಕೊಂಡ ಪಾಠ ಎಂದು ಸಾರಾ ಹೇಳಿದ್ದಾರೆ.
ಸಾರಾ ಡೇಟಿಂಗ್ ಬಗ್ಗೆ ಸೈಫ್ ಹೇಳಿದ್ದೇನು?:
ಇನ್ನು, ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸೈಫ್ ಕೂಡ ತಮ್ಮ ಮಗಳು ಸಾರಾ ಅಲಿ ಖಾನ್ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ. ಯಾವ ಹೀರೋಯಿನ್ಗೂ ಕಡಿಮೆಯಿಲ್ಲದಂತೆ ಸುಂದರವಾಗಿರುವ ಮಗಳು ಯಾರೊಂದಿಗೆ ಡೇಟಿಂಗ್ ಮಾಡಿದರೆ ಓಕೆ? ಎಂದು ಕರಣ್ ಜೋಹರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸೈಫ್, ನಾನು ನನ್ನ ಮಕ್ಕಳ ಬಗ್ಗೆ ತುಂಬ ಓಪನ್ ಮೈಡೆಂಡ್ ಆಗಿರುತ್ತೇನೆ. ಅವರಿಗೆ ನನ್ನಿಂದ ಯಾವುದೇ ನಿರ್ಬಂಧಗಳೂ ಇಲ್ಲ. ನನ್ನ ಅಪ್ಪ ಕೂಡ ನನ್ನನ್ನು ಹಾಗೇ ಬೆಳೆಸಿದ್ದ ಕಾರಣ ನನ್ನ ಮಕ್ಕಳಿಗೂ ಅವರಿಗೆ ಬೇಕಾಗಿದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಸಾರಾಗೆ ಯಾರು ಇಷ್ಟವೋ ಅವರೊಂದಿಗೆ ಡೇಟಿಂಗ್ ಮಾಡಲು ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ.
ಅಂದಹಾಗೆ, ಸಾರಾ ಅಲಿಖಾನ್ ‘ಕೇದಾರನಾಥ್’ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದು, ಸುಶಾಂತ್ ಸಿಂಗ್ ನಾಯಕನಅಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ, ರಣವೀರ್ ಸಿಂಗ್ ಅಭಿನಯದ ‘ಸಿಂಬಾ’ ಸಿನಿಮಾದಲ್ಲೂ ಸಾರಾ ಅಭಿನಯಿಸುತ್ತಿದ್ದಾರೆ.
Comments are closed.