ಕರಾವಳಿ

ಯಕ್ಷಾಂಗಣದ ತಾಳಮದ್ದಳೆ ಸಪ್ತಾಹ ಸಮಾರೋಪ – ಕೃತಿ ಬಿಡುಗಡೆ – ಪ್ರಶಸ್ತಿ ಪ್ರದಾನ /ಯಕ್ಷಗಾನಕ್ಕೆ ರಾಜ್ಯವ್ಯಾಪಿ ಗೌರವ: ಪ್ರೊ.ಎಂ.ಎ.ಹೆಗ್ಡೆ

Pinterest LinkedIn Tumblr

ಮಂಗಳೂರು: ‘ಯಕ್ಷಗಾನ ಇಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ; ಅದಕ್ಕೆ ರಾಜ್ಯವ್ಯಾಪಿ ಗೌರವ ಪ್ರಾಪ್ತಿಯಾಗಿದೆ.ರಾಷ್ಟ್ರ- ಅಂತಾರಾಷ್ಟ್ರ ಮಟ್ಟದಲ್ಲೂ ಯಕ್ಷಗಾನದ ಘನತೆ ಮೆರೆದಿದೆ.ಇದಕ್ಕೆ ಕಾರಣ ಅದರಲ್ಲಿರುವ ಕಲಾ ಸಮೃದ್ಧಿ; ವಿವಿಧ ಆಯಾಮಗಳಲ್ಲಿ ತೆರೆದುಕೊಳ್ಳುವ ಯಕ್ಷಗಾನದ ಸಾಂಸ್ಕೃತಿಕ ಸಿರಿವಂತಿಕೆ’ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಹೇಳಿದ್ದಾರೆ.

‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ಕನ್ನಡ ರಾಜ್ಯೋತ್ಸವ ಕಲಾಸಂಭ್ರಮದ ಪ್ರಯುಕ್ತ ನಗರದ ಎಸ್ ಡಿ ಯಮ್ ಲಾ ಕಾಲೇಜು ಸಭಾಂಗಣದಲ್ಲಿ ಜರಗಿದ ಆರನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ-2018’ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ ಪ್ರಸ್ತುತ ಬಯಲಾಟ ಅಕಾಡೆಮಿಯಿಂದ ಪ್ರತ್ಯೇಕಗೊಂಡು ಯಕ್ಷಗಾನ ಅಕಾಡೆಮಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಯಕ್ಷಾಂಗಣದಂತಹ ಕ್ರಿಯಾಶೀಲ ಸಂಘಟನೆಗಳೊಂದಿಗೆ ಸೇರಿಕೊಂಡು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಲು ಅಕಾಡೆಮಿ ಸಿದ್ಧವಿದೆ’ ಎಂದು ಅವರು ತಿಳಿಸಿದರು. ಕೋಟೆಕಾರು ಶ್ರೀ ಶೃಂಗೇರಿ ಶಾಖಾಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭ ಅಕಾಡೆಮಿ ಪ್ರಕಟಿಸಿದ ‘ಕುಮಾರವ್ಯಾಸ ಭಾರತದ ಯಕ್ಷಗಾನ ಪ್ರದರ್ಶನಗಳ ರಂಗಭಾಷೆ’ ಕೃತಿಯನ್ನು ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಬಿಡುಗಡೆಗೊಳಿಸಿದರು. ಅವರು ಮಾತನಾಡಿ ‘ಯಕ್ಷಗಾನ ರಂಗಭೂಮಿ ಸೃಷ್ಟಿ ಶೀಲ ಗುಣವುಳ್ಳ ವಿಶಾಲ ಹರವು ಹೊಂದಿದೆ. ಅದರ ಸಾಧ್ಯತೆಗಳನ್ನು ಅನಾವರಣಗೊಳಿಸುವಲ್ಲಿ ಹಿರಿಯ ಕಲಾವಿದರ ಕೊಡುಗೆ ಅಪಾರವಾದುದು. ಕಲಾವಿದರ ಮೂಲಕ ಸಂವಹನಗೊಳ್ಳುವ ಯಕ್ಷಗಾನ ರಂಗಭಾಷೆಯನ್ನು ಅರ್ಥಮಾಡಿಕೊಳ್ಳುವುದು ಪ್ರಜ್ಞಾವಂತ ಪ್ರೇಕ್ಷಕರಿಂದ ಮಾತ್ರ ಸಾಧ್ಯ.ಯಕ್ಷಾಂಗಣವು ಕನ್ನಡ ನುಡಿಹಬ್ಬದ ರೂಪದಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಆಯೋಜಿಸಿ ಪ್ರೇಕ್ಷಕರಲ್ಲಿ ಸದಭಿರುಚಿ ಮೂಡಿಸುವ ಕಾರ್ಯ ಮಾಡಿದೆ’ ಎಂದರು. ಕೃತಿಕರ್ತ ಡಾ.ಚಂದ್ರಶೇಖರ ದಾಮ್ಲೆ ಮಾತನಾಡಿದರು.

ಪ್ರಶಸ್ತಿ ಪ್ರದಾನ :

ಸಮಾರಂಭದಲ್ಲಿ ಆರನೇ ವರ್ಷದ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಯನ್ನು ಬಡಗುತಿಟ್ಟಿನ ಹಿರಿಯ ಭಾಗವತ,ಯಕ್ಷಗಾನ ಗುರು ತೋನ್ಸೆ ಜಯಂತ ಕುಮಾರ್ ಅವರಿಗೆ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಪ್ರದಾನಮಾಡಿದರು.ಅವರು ತಮ್ಮ ಭಾಷಣದಲ್ಲಿ ‘ತೆಂಕು-ಬಡಗು ಎಂಬ ಪರಿ ಭೇದವಿಲ್ಲದೆ ಅರ್ಹ ಸಾಧಕರಿಗೆ ನಿಧಿಯೊಂದಿಗೆ ಪ್ರಶಸ್ತಿ ನೀಡುತ್ತಿರುವುದು ಯಕ್ಷಾಂಗಣದ ಸಮಭಾವ ಮತ್ತು ಸಾಂಸ್ಕೃತಿಕ ಕಾಳಜಿಗೆ ಸಾಕ್ಷಿ. ಕಲಾಭಿಮಾನಿಗಳು ಸಂಸ್ಥೆಯನ್ನು ಬೆಂಬಲಿಸಬೇಕು’ ಎಂದು ನುಡಿದರು. ಯಕ್ಷಾಂಗಣದ ಕೋಶಾಧಿಕಾರಿ ಎಂ.ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ಪ್ರಶಸ್ತಿ ಫಲಕ ವಾಚಿಸಿದರು. ಸುಧಾಕರ ರಾವ್ ಪೇಜಾವರ ಅಭಿನಂದಿಸಿದರು. ಜಯಂತ ಕುಮಾರ್ ಸನ್ಮಾನಕ್ಕೆ ಉತ್ತರಿಸಿದರು.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಸ್.ಪ್ರದೀಪ ಕುಮಾರ್ ಕಲ್ಕೂರ ಸಮಾರೋಪ ಭಾಷಣ ಮಾಡಿದರು. ಮಾಜಿ ಶಾಸಕ ಕುಂಬಳೆ ಸುಂದರ ರಾವ್, ಮುಂಬಯಿಯ ಉದ್ಯಮಿ, ಬಂಟ ಯಕ್ಷಕಲಾ ವೇದಿಕೆ ಸದಸ್ಯ ಬಾಬು ಶೆಟ್ಟಿ ಪೆರಾರ, ಯುವ ಉದ್ಯಮಿ ಜಗದೀಶ್ ಪೂಜಾರಿ ಆಚೆಬೈಲ್ ಇರಾ, ಕಾರ್ಪೋರೇಟರ್ ಪ್ರಕಾಶ್ ಸಾಲಿಯಾನ್, ಮಯಿಥಾಯಿ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ರಾಜಗೋಪಾಲ್ ರೈ , ವಳವೂರು ರಾಮಣ್ಣ ರೈ ಸ್ಮಾರಕ ಸಮಿತಿ ಸಂಚಾಲಕ ಟಿ.ಭಾಸ್ಕರ ರೈ ಬ್ರಹ್ಮಾವರ ಮುಖ್ಯ ಅತಿಥಿಗಳಾಗಿದ್ದರು.

ಪ್ರಸ್ತಾವನೆಗೈದು ಮಾತನಾಡಿದ ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ‘ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಕೇವಲ ಮನರಂಜನೆಯ ಉದ್ದೇಶದಿಂದ ಮಾಡುವುದಲ್ಲ; ನವೆಂಬರ್ ತಿಂಗಳಲ್ಲಿ ಕನ್ನಡ ಪರವಾದ ಜಾಗೃತಿ ಮೂಡಿಸುವ ದೃಷ್ಟಿಯಿಂದ ಕನ್ನಡದ ನುಡಿ ಹಬ್ಬವಾಗಿ ಅಚ್ಚಗನ್ನಡದ ಮಾತುಗಾರಿಕೆಯನ್ನು ವಾರಪೂರ್ತಿ ಕೇಳಿಸಲಾಗುತ್ತದೆ. ಇದರೊಂದಿಗೆ ಯಕ್ಷಗಾನದ ಉಳಿವಿಗಾಗಿ ಶ್ರಮಿಸಿ ಕಣ್ಮರೆಯಾದ ಹಿರಿಯರನ್ನು ಪ್ರತಿದಿನ ಸ್ಮರಿಸುವುದಲ್ಲದೆ ಸಾಧಕರನ್ನು ಸನ್ಮಾನಿಸಲಾಗುತ್ತಿದೆ’ಎಂದರು.

ಪ್ರಧಾನ ಕಾರ್ಯದರ್ಶಿ ತೋನ್ಸೆ. ಪುಷ್ಕಳಕುಮಾರ್ ನಿರೂಪಿಸಿದರು;. ಕೆ.ರವೀಂದ್ರ ರೈ ಹರೇಕಳ ವಂದಿಸಿದರು.ಸಮಿತಿ ಸಂಚಾಲಕ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪದಾಧಿಕಾರಿಗಳಾದ ವಕ್ವಾಡಿ ಶೇಖರ ಶೆಟ್ಟಿ, ಕರುಣಾಕರ ಶೆಟ್ಟಿ ಪಣಿಯೂರು, ಕೆ.ಲಕ್ಷ್ಮೀನಾರಾಯಣ ರೈ ಹರೇಕಳ,ವಾಸುದೇವ ಆರ್.ಕೊಟ್ಟಾರಿ, ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ , ಉಮೇಶಾಚಾರ್ಯ ಗೇರುಕಟ್ಟೆ, ಅಶೋಕ ಮಾಡ ಕುದ್ರಾಡಿಗುತ್ತು,ಸಿದ್ಧಾರ್ಥ ಅಜ್ರಿ, ಕಮಲಾಕ್ಷ ಶೆಟ್ಟಿ ಕೋಡಿಕಲ್, ಪೂರ್ಣೇಶ ಆಚಾರ್ಯ, ನಿವೇದಿತಾ ಎನ್.ಶೆಟ್ಟಿ, ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು.

ಬಳಿಕ ದೇವಿ ಪ್ರಸಾದ್ ಆಳ್ವ ತಲಪಾಡಿ ಅವರ ಭಾಗವತಿಕೆಯಲ್ಲಿ ‘ಕಲ್ಯಾಣ ಸಪ್ತಕ’ದ ಕೊನೆಯ ತಾಳಮದ್ದಳೆ ‘ರತಿ ಕಲ್ಯಾಣ’ ಜರಗಿತು.

Comments are closed.