ಕರ್ನಾಟಕ

ಅನಂತಕುಮಾರ್ ಜೊತೆ ಇದ್ದ ಆ ವ್ಯಕ್ತಿಯ ವೈರಲ್ ಫೋಟೋ

Pinterest LinkedIn Tumblr


ಧಾರವಾಡ: ಕೇಂದ್ರ ಸಚಿವ ಅನಂತಕುಮಾರ್ ನಿಧನದ ಸಂದರ್ಭದಲ್ಲಿ ಅವರದ್ದೊಂದು ಫೋಟೋ ವೈರಲ್ ಆಗಿತ್ತು. ಹುಬ್ಬಳ್ಳಿಯ ರಾಷ್ಟ್ರ ಧ್ವಜ ಹೋರಾಟದ ಸಂದರ್ಭದಲ್ಲಿನ ಫೋಟೋ ಅದಾಗಿತ್ತು. ಅಂದು ಅನಂತಕುಮಾರ್ ಅವರೊಂದಿಗೆ ಹೋರಾಟ ಮಾಡಿದವರೇ ಗುರುನಾಥ ಕುಲಕರ್ಣಿ.ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ಮೊದಲಾದವರ ಸಾಲಿನಲ್ಲದಿದ್ದರೂ ಎರಡನೇ ಪಂಕ್ತಿ ನಾಯಕರಾಗಿ ಇವರು ಬಿಜೆಪಿ ಬೆಳೆದಿರಬಹುದು ಎಂಬ ಒಂದು ಸಣ್ಣ ಯೋಚನೆ ಅನೇಕರ ತಲೆಯಲ್ಲಿ ಬಂದಿದ್ದರೆ ಅಚ್ಚರಿ ಇಲ್ಲ. ಆದರೆ, ಗುರುನಾಥ ಕುಲಕರ್ಣಿ ಎಲ್ಲದರಲ್ಲೂ ಇದ್ದರೂ ಯಾವುದರಲ್ಲೂ ಬೆಳೆಯಲೇ ಇಲ್ಲ. ಬೆಳೆಯಲು ಅವಕಾಶವೂ ಸಿಗಲಿಲ್ಲ. ಏನೂ ಇಲ್ಲದವರ ಹಾಗೆ ಇವರೀಗ ನತದೃಷ್ಟದ ಬದುಕು ಸವೆಸುತ್ತಿದ್ದಾರೆ.

ಗುರುನಾಥ ಕುಲಕರ್ಣಿ ಧಾರವಾಡದ ಸಂಗೊಳ್ಳಿ ರಾಯಣ್ಣ ನಗರದಲ್ಲಿನ ಪುಟ್ಟ ಮನೆಯೊಂದರಲ್ಲಿ ವಾಸಮಾಡುತ್ತಿದ್ದಾರೆ. ಇವರು ಸಹ ಆರ್.ಎಸ್.ಎಸ್., ಜನಸಂಘ ಹಾಗೂ ಆ ಬಳಿಕ ಬಿಜೆಪಿಯನ್ನು ಕಟ್ಟಿ ಬೆಳೆಸಲು ಜಗನ್ನಾಥ ಜೋಶಿಯವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದರು. ಆರಂಭದಲ್ಲಿ ವಿಜಯಪುರದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಂಧನಕ್ಕೊಳಗಾದರು. ಆ ಬಳಿಕ ಆಯೋಧ್ಯೆಯ ಬಾಬರಿ ಮಸೀದಿ ಧ್ವಂಸಕ್ಕಾಗಿ ನಡೆದ ಕರಸೇವೆ ಅಭಿಯಾನದಲ್ಲಿ ರಾಜ್ಯದಿಂದ ಪಾಲ್ಗೊಂಡಿದ್ದರು. ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಪಾಲ್ಗೊಂಡಿದ್ದ ಇವರನ್ನು ಮಾರ್ಕುಂಡೆ ಅಡವಿಯಲ್ಲಿ ಪೊಲೀಸರು ತಡೆಯೊಡಿದ್ದರು. ಅದನ್ನು ಭೇದಿಸಿ ಅಯೋಧ್ಯೆಯತ್ತ ಮುನ್ನುಗ್ಗಿದ್ದ ಕರಸೇವಕರಲ್ಲಿ ಇವರೂ ಇದ್ದರು. ಆಗ ಪೊಲೀಸರ ಗೋಲಿಬಾರ್ ಆಯ್ತು. ಆ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡರು. ನಂತರ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಇದಾದ ಬಳಿಕ ಹುಬ್ಬಳ್ಳಿಯ ಧ್ವಜ ಹೋರಾಟದಲ್ಲಿ ಭಾಗಿಯಾದರು. ಅಂದು ಅನಂತಕುಮಾರ್ ಅವರು ಕೈಯಲ್ಲಿ ಧ್ವಜ ಹಿಡಿದು ಪೊಲೀಸ್ ಭದ್ರಕೋಟೆ ಭೇದಿಸಿ ಮುನ್ನುಗ್ಗಲು ಹೋಗುತ್ತಾರೆ. ಆಗ ಪೊಲೀಸರು ತಡೆದಾಗ, ಅನಂತಕುಮಾರ್ ತಮ್ಮ ಕೈಯಲ್ಲಿನ ಧ್ವಜವನ್ನು ಗುರುನಾಥ ಅವರಿಗೆ ನೀಡುತ್ತಾರೆ. ಅಷ್ಟರಲ್ಲಿಯೇ ಪೊಲೀಸರ ಲಾಠಿ ಏಟುಗಳು ಗುರುನಾಥರ ಮೇಲೆ ಬಿಳುತ್ತವೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಪೊಲೀಸರೊಂದಿಗೆ ಸೇರಿ ಅನಂತಕುಮಾರ್ ಅವರೇ ವಾಹನ ಏರಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪ್ರತ್ರೆಗೆ ದಾಖಲಿಸುವಂತೆ ಮಾಡುತ್ತಾರೆ. ಇಷ್ಟೆಲ್ಲ ಮಾಡಿದರೂ ಕೂಡ ಇವರು ಪಕ್ಷದಲ್ಲಿ ಬೆಳೆಯಲೇ ಇಲ್ಲ. ಬೆಳೆದವರೂ ಕೂಡ ಇವರನ್ನು ಹಿಂದಿರುಗಿ ನೋಡಲೂ ಇಲ್ಲ. ಹೀಗಾಗಿ ಒಂದು ರೀತಿಯಲ್ಲಿ ಇವರು ನತದೃಷ್ಟ ನಾಯಕ ಆಗಿ ಹೋಗಿದ್ದಾರೆ.

ಕುಟುಂಬ ನಿರ್ವಹಣೆಗೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಗುರುನಾಥ ಅವರು ವಯಸ್ಸಾದಂತೆಲ್ಲ ಹಳೆಯ ಏಟಿನ ನೋವುಗಳು ಕಾಡಲಾರಂಭಿಸಿ ಮನೆ ಹಿಡಿದು ಕುಳಿತುಕೊಳ್ಳಬೇಕಾಯಿತು. ಈಗಂತೂ ಬಿದ್ದು ಗಾಯಗೊಂಡು ಹಾಸಿಗೆಯನ್ನೇ ಹಿಡಿದುಬಿಟ್ಟಿದ್ದಾರೆ. ಹುಬ್ಬಳ್ಳಿ ಈದ್ಗಾ ಮೈದಾನದ ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ನಡೆದ ಪೊಲೀಸರ ಗೋಲಿಬಾರ್ ಮತ್ತು ಲಾಠಿ ಜಾರ್ಜ್ ಬಾಧಿತರಿಗೆ ಈ ಹಿಂದೆ ಸರ್ಕಾರ 37 ಲಕ್ಷ ರೂಪಾಯಿ ಪರಿಹಾರ ಧನ ಮಂಜೂರಿ ಮಾಡಲಾಗಿತ್ತಂತೆ. ಆದ್ರೆ ಇವರಿಗೆ ಪರಿಹಾರ ಸಹ ಸಿಗಲೇ ಇಲ್ಲ. ಪಕ್ಷದ ಯಾರೊಬ್ಬರೂ ಸಹ ಇವರ ನೋವಿಗೆ ಹಾಗೂ ಸಮಸ್ಯೆಗೆ ಸ್ಪಂದಿಸಿಲ್ಲ. ಇವರ ಇಬ್ಬರು ಹೆಣ್ಣು ಮಕ್ಕಳ ಪೈಕಿ ಒಬ್ಬರ ಮದುವೆಯಾಗಿದ್ದು, ಈಗ ಕಿರಿಯ ಮಗಳೇ ಕಾಲೇಜ್ ಓದಿನ ಜೊತೆಗೆ ಅಲ್ಲಿಲ್ಲಿ ಕೆಲಸ ಮಾಡುತ್ತಾ ತಂದೆಯನ್ನು ಸಾಕುತ್ತಿದ್ದಾರೆ.

ಒಟ್ಟಾರೆ, ಒಂದು ಕಾಲಕ್ಕೆ ಹೋರಾಟಗಳಲ್ಲಿ ಗೆಲುವಿನ ಸರದಾರ ಆಗಿದ್ದ ಗುರುನಾಥ ಕುಲಕರ್ಣಿ, ಇಂದು ಅವರದೇ ಪಕ್ಷದವರ ನೆನಪಿನಿಂದಲೂ ದೂರ ಆಗಿ ಹೋಗಿದ್ದು, ಜನಸಂಘ ಮತ್ತು ಬಿಜೆಪಿಯ ದಂತಕಥೆಯಂತಿರುವ ಇವರ ಈ ದುಸ್ಥಿತಿಯನ್ನು ನೋಡಿಯಾದರೂ ಇವರಿಂದ ಬೆಳೆದವರು ಹೊರಳಿ ನೋಡುತ್ತಾರೆಯೋ ಎಂಬುದನ್ನು ಕಾದು ನೋಡಬೇಕಿದೆ.

Comments are closed.