
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಅಯೋಧ್ಯೆಯ ರಾಮಮಂದಿರ ವಿವಾದವನ್ನು ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ ಇಬ್ರಾಹಿಂ ಆರೋಪಿಸಿದ್ಧಾರೆ. ಅಲ್ಲದೇ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿ ಮತಯಾಚನೆಗೆ ಅಯೋಧ್ಯೆ ವಿಚಾರ ಮುನ್ನೆಲೆಗೆ ತರುತ್ತದೆ. ಇದರ ಹೊರತು ಯಾವುದೇ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ ಎಂದು ಇಬ್ರಾಹಿಂ ಕಿಡಿಕಾರಿದ್ದಾರೆ.
ರಾಮಮಂದಿರ ನಿರ್ಮಾಣದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಅವರು, ಬಿಜೆಪಿಯವರು ಅಯೋಧ್ಯೆ ವಿಚಾರವನ್ನೇ ಮುಂದಿಟ್ಟುಕೊಂಡು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡುತ್ತಾರೆ. ಈ ಹಿಂದೆಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಮಮಂದಿರ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚಿಸಿದರು. ಈ ಬಾರಿಯೂ ಇದನ್ನೇ ಮಾಡುತ್ತಾರೆ ಹೊರತು ವಿವಾದವನ್ನು ಬಗೆಹರಿಸಲು ಮುಂದಾಗುವುದಿಲ್ಲ ಎಂದು ಇಬ್ರಾಹಿಂ ತರಾಟೆಗೆ ತೆಗೆದುಕೊಂಡರು.
ಕೇವಲ ಗುಡಿ-ಮಸೀದಿಗಳನ್ನು ಕಟ್ಟುವುದು ಧರ್ಮವಲ್ಲ. ಮುನುಷ್ಯರ ನಡುವೇ ಪ್ರೀತಿ/ಸೌಹಾರ್ದತೆ ಬಿತ್ತುವುದೇ ಧರ್ಮ. ರಾಮಮಂದಿರ ನಿರ್ಮಾಣಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಒಂದೆಡೆ ಉತ್ತರಪ್ರದೇಶದಲ್ಲಿ ಬಿಜೆಪಿ ಆಡಳಿತರೂಢ ಸರ್ಕಾರ ಗೋವುಗಳಿಗೆ ಪೂಜೆ ಮಾಡುತ್ತದೆ. ಇನ್ನೊಂದೆಡೆ ಗೋವಾದಲ್ಲಿ ಗೋಮಾಂಸ ರಪ್ತು ಮಾಡುತ್ತಾರೆ. ಬಿಜೆಪಿಯ ಈ ಇಬ್ಬಗೆ ನೀತಿ ಯಾಕೇ? ಎಂದು ಪ್ರಶ್ನಿಸಿದರು.
ಬಿಜೆಪಿ ರಾಜಕೀಯಕ್ಕಾಗಿ ಭಾರೀ ಕೀಳುಮಟ್ಟಕ್ಕೆ ಇಳಿದಿದೆ. ಪ್ರಧಾನಿ ಮೋದಿ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿಯೇ ಅತೀಹೆಚ್ಚು ಗೋಮಾಂಸ ರಪ್ತಾಗಿದೆ ಎಂದು ಮೂಲಗಳು ತಿಳಿಸುತ್ತಿವೆ. ಗೋವನ್ನು ಮಾತೆ ಎಂದು ಪೂಜಿಸುವ ಬಿಜೆಪಿ ಮುಖಂಡರೇ ಇಂದು ಗೋಮಾಂಸ ರಪ್ತು ಮಾಡುವ ಕಂಪನಿಗಳ ಮಾಲೀಕರಾಗಿದ್ದಾರೆ. ಇದೆಲ್ಲವೂ ತಮ್ಮ ರಾಜಕೀಯಕ್ಕಾಗಿ ಮಾಡುತ್ತಿರುವ ಬಿಜೆಪಿಯವರ ಹೈಡ್ರಾಮ ಎಂದು ಇಬ್ರಾಹಿಂ ಗಂಭೀರ ಆರೋಪ ಎಸಗಿದ್ದಾರೆ.
ಇನ್ನು ಎರಡು ವಿಧಾನಸಭಾ/ ಮೂರು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳೇ ಗೆಲ್ಲಲಿದ್ಧಾರೆ. ಈ ಉಪಚುನಾವಣೆ ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನಲಾಗುತ್ತಿದೆ. ಹಾಗೇ ಆಗಿದ್ದಲ್ಲಿ ಮೋದಿ ಸರ್ಕಾರಕ್ಕೆ ದೇಶದ ಜನತೆ 2019ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಲ್ಲದೇ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಂದುವರೆಯಲಿದೆ. ಇದೇ ರೀತಿಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಮೈತ್ರಿ ಪಕ್ಷದ ಅಭ್ಯರ್ಥಿಗಲೇ ಗೆಲುವು ದಾಖಲಿಸಲಿದ್ದಾರೆ. ಮೋದಿಗೆ ರಾಮಮಂದಿರದ ಬದಲಿಗೆ ಸಾಬರ ಹೆಂಡತಿಯರ ಬಗ್ಗೆಯೇ ಭಾರೀ ಚಿಂತೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ ಇಬ್ರಾಹಿಂ ವ್ಯಂಗ್ಯವಾಡಿದರು.
Comments are closed.