
ವಾಷಿಂಗ್ಟನ್: ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆ ಇದುವರೆಗೂ ಅಲ್ಲಿನ ಪೌರತ್ವ ಸಿಗುತ್ತಿತ್ತು. ಆದರೆ, ಇದೀಗ ಆ ದೇಶದಲ್ಲೇ ಹುಟ್ಟಿದ ಮಗುವಿಗೂ ಅಲ್ಲಿನ ಪೌರತ್ವ ನೀಡದಿರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ್ದಾರೆ.
ಬೇರೆ ದೇಶದಿಂದ ಬಂದು ಅಮೆರಿಕದಲ್ಲಿ ನೆಲೆಸಿರುವವರಿಗೆ ಅಮೆರಿಕದಲ್ಲೇ ಮಗು ಹುಟ್ಟಿದರೆ ಅದು ಜನ್ಮಸಿದ್ಧ ಹಕ್ಕಾಗಿ ಅಲ್ಲಿನ ಪೌರತ್ವ ಪಡೆಯುತ್ತಿತ್ತು. ಆದರೆ, ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಟ್ರಂಪ್, ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ವಲಸೆ ಬರುವವರಿಗೆ ಕಾನೂನನ್ನು ಬಿಗಿಗೊಳಿಸಲು ಯೋಚಿಸುತ್ತಿದ್ದೇವೆ. ಹಾಗಾಗಿ, ಅಮೆರಿಕದಲ್ಲಿ ಹುಟ್ಟಿದ ವಲಸಿಗರ ಮಕ್ಕಳಿಗೆ ಪೌರತ್ವ ರದ್ದುಪಡಿಸಲು ಕಾನೂನು ತರುವ ಯೋಚನೆ ಮಾಡಿದ್ದೇವೆ. ಬೇರೆ ದೇಶದಿಂದ ಬಂದ ದಂಪತಿ ಬೇಕೆಂದೇ ಅಮೆರಿಕದಲ್ಲೇ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಆಗ ಆ ಮಗುವಿಗೆ ಇಲ್ಲಿನ ಪೌರತ್ವ ಸುಲಭವಾಗಿ ಸಿಗುತ್ತದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸದ್ಯದಲ್ಲೇ ಈ ಬಗ್ಗೆ ಕಾನೂನು ರೂಪಿಸಲಾಗುವುದು ಎಂದಿದ್ದಾರೆ.
ವಿಶ್ವದ ಯಾವ ದೇಶದಲ್ಲೂ ಬೇರೆ ದೇಶದ ವಲಸಿಗರಿಗೆ ಆ ದೇಶದಲ್ಲಿ ಮಗುವಾದರೆ ಅಲ್ಲಿನ ಪೌರತ್ವ ನೀಡುವುದಿಲ್ಲ. ಅಮೆರಿಕವೊಂದರಲ್ಲೇ ಈ ರೀತಿಯ ವ್ಯವಸ್ಥೆ ಇದೆ. ಇಲ್ಲಿ ಹುಟ್ಟಿದ ಮಗು 85 ವರ್ಷಗಳ ಕಾಲ ನಮ್ಮ ದೇಶದ ಪ್ರಜೆಯಾಗಿರಲು ಅರ್ಹವಾಗಿರುತ್ತದೆ ಮತ್ತು ದೇಶದ ಪ್ರಜೆಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನೂ ಪಡೆದುಕೊಳ್ಳುತ್ತದೆ. ಇದಕ್ಕೆ ಮುಕ್ತಾಯ ಹಾಡಬೇಕೆಂದು ನಿರ್ಧರಿಸಿದ್ದೇವೆ ಎಂದು ಟ್ರಂಪ್ ಸಂದರ್ಶನದಲ್ಲಿ ಹೇಳಿದ್ದರು.
Comments are closed.