ಕರಾವಳಿ

ಮರಳು ಸಮಸ್ಯೆ ಶಾಶ್ವತ ಪರಿಹಾರಕ್ಕೆ ಒತ್ತಾಯ: ಕಟ್ಟಡ ಕಾರ್ಮಿಕರ ಸಂಘದಿಂದ ಪ್ರತಿಭಟನೆ

Pinterest LinkedIn Tumblr

ಕುಂದಾಪುರ: ಜಿಲ್ಲೆಯ ಜನಸಾಮಾನ್ಯರನ್ನು ಕಾಡುತ್ತಿರುವ ಮರಳು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಒತ್ತಾಯಿಸಿ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಇಲ್ಲಿನ ಶಾಸ್ತ್ರಿವೃತ್ತದ ಸಮೀಪ ಧರಣಿ ನಡೆಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ಎಚ್. ನರಸಿಂಹ, ಮರಳು ಸಮಸ್ಯೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಕೂಲಿಕಾರ್ಮಿಕರು ಕೆಲಸ ಇಲ್ಲದೆ ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಮರಳು ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕಾದ ಜಿಲ್ಲಾಡಳಿತ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಲಭ್ಯವಿದ್ದರೂ ಕೂಡ ಜನರ ಉಪಯೋಗಕ್ಕೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಮರಳು ನೀತಿ ತರುತ್ತದೆಂದು ಮರಳುಗಾರಿಕೆಗೆ ಅವಕಾಶ ನೀಡಲು ಜಿಲ್ಲಾಡಳಿತ ವಿಳಂಬ ನೀತಿ ಅನುಸರಿಸುತ್ತಿದೆ. ಮರಳು ಸಮಸ್ಯೆಯಿಂದಾಗಿ ನಿರ್ಮಾಣ ಕ್ಷೇತ್ರವು ಸಂಪೂರ್ಣ ನೆಲಕಚ್ಚಿದೆ. ದುಡಿಮೆಯನ್ನೇ ನಂಬಿ ಸಾಲಾ ಮಾಡಿ‌ ಕುಟುಂಬ ನಿರ್ವಹಿಸುತ್ತಿರುವ ಸಾವಿರಾರು ಕಟ್ಟಡ ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ಸಂಕಷ್ಟದಲ್ಲಿವೆ. ಕಾರ್ಮಿಕರ ಹಿತದೃಷ್ಠಿಯಿಂದ ಮರಳು ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಲು ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ನವೆಂಬರ್ 16 ರಂದು ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಹಗಲು ರಾತ್ರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಮರಳು ಸಮಸ್ಯೆಯಿಂದಾಗಿ ಕಳೆದೆರಡು ವರ್ಷಗಳಿಂದ ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು. ಜಿಲ್ಲೆಯಲ್ಲಿ ದೊರೆಯುವ ಮರಳು ಜಿಲ್ಲೆಯ ಜನರಿಗೆ ಸಿಗುವ ರೀತಿಯಲ್ಲಿ ಮೊದಲ ಆದ್ಯತೆ ನೀಡಬೇಕು. ಬಳಿಕ ಹೊರ ಜಿಲ್ಲೆಗಳಿಗೆ ಸಾಗಿಸಲು ನಮ್ಮ ಅಭ್ಯಂತರವಿಲ್ಲ ಎಂದರು.

ಪ್ರತಿಭಟನೆಯಲ್ಲಿ ಸಿಐಟಿಯು ಹಿರಿಯ ಮುಖಂಡ ಯು‌. ದಾಸಭಂಡಾರಿ, ರಮೇಶ್ ಗುಲ್ವಾಡಿ, ಸಂತೋಷ್ ಹೆಮ್ಮಾಡಿ, ಅರುಣ್ ಕುಮಾರ್ ಸುಧಾಕರ ಕುಂಭಾಶಿ, ಸುಶೀಲಾ ಗಂಗೊಳ್ಳಿ ಮೊದಲಾದವರು ಇದ್ದರು.

Comments are closed.