ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಅಧಿಕಾರಿಗಳದ್ದೇ ಆಡಳಿತವಾಗಿದೆ: ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ!

Pinterest LinkedIn Tumblr

ಕುಂದಾಪುರ: ಜನರಿಂದ ಗೆದ್ದು ಬಂದ ನಮಗೆ ಉಡುಪಿ ಜಿಲ್ಲಾಡಳಿತ ಸ್ಥಿತಿಯನ್ನು ಪರಾಮರ್ಶಿಸಲು ಅಸಾಧ್ಯವಾಗಿದೆ. ಜಿಲ್ಲೆಯಲ್ಲಿ ಅಧಿಕಾರಿಗಳು ಆಡಳಿತ ನಡೆಸುತ್ತಾರೋ ಅಥವಾ ಸರ್ಕಾರ ಆಡಳಿತ ನಡೆಸುತ್ತಿದೆಯೋ ಎಂಬ ಜಿಜ್ಞಾಸೆ ನಮ್ಮಲ್ಲಿ ಮೂಡಿದೆ. ಈ ಅವ್ಯವಸ್ಥೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರಲ್ಲಿ ಪ್ರಶ್ನಿಸುತ್ತೇನೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಶನಿವಾರ ಸಂಜೆ ಕಾಳಾವರದ ದೇವಸ್ಥಾನಬೆಟ್ಟು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ ಬಡ ಕುಟುಂಬಗಳ ಮನೆ ತೆರವಿಗೆ ಆದೇಶಿಸಿದ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದರು.

ಯಾವುದೇ ನಿವೇಶನಗಳಿಲ್ಲದೆ ಕೂಲಿಯನ್ನೇ ಮಾಡಿಕೊಂಡಿರುವ ಈ ಕುಟುಂಬಗಳು ಮಳೆಗಾಲದ ಪೂರ್ವದಲ್ಲಿ ಮನೆಯನ್ನು ನಿರ್ಮಿಸಿಕೊಂಡಿದ್ದು, ಮನೆಗಳಾಗಿ ಹಲವು ತಿಂಗಳು ಕಳಿದಿವೆ ಎಂಬುವುದು ಕಂಡು ಬರುತ್ತಿದೆ. ಸ್ಥಳೀಯ ಶಾಸಕರಾದ ಶ್ರೀನಿವಾಸ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಲ್ಲಿ ದಿಢೀರ್ ನಿರ್ಧಾರಗಳನ್ನು ಕೈಗೊಳ್ಳಬೇಡಿ, ವಿಚಾರಗಳನ್ನು ವಿಮರ್ಶಿಸಿ ಮತ್ತೆ ಕಾರ್ಯರೂಪಕ್ಕಿಳಿಯಿರಿ ಎಂದು ಸಲಹೆ ನೀಡಿದ್ದರೂ ಕೂಡ ಶಾಸಕರ ಮಾತನ್ನು ಲೆಕ್ಕಿಸದೆ ತೆರವು ಆದೇಶ ಹೊರಡಿಸಿರುವುದು ನೋಡಿದರೆ ಉಡುಪಿ ಜಿಲ್ಲಾಡಳಿತದ ಕಾರ್ಯವೈಖರಿ ನಿಜಕ್ಕೂ ಆಶ್ಚರ್ಯ ಹುಟ್ಟಿಸಿದೆ ಎಂದು ಮಾರ್ಮಿಕವಾಗಿ ನುಡಿದರು.

ಈ ಸಮಸ್ಯೆಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾರಲ್ಲಿ ವಿವರಣೆ ನೀಡಿದಾಗ ಅವರು ಜಿಲ್ಲಾಧಿಕಾರಿಯವರಿಗೆ ನಾನು ಜಿಲ್ಲೆಗೆ ಬರುವ ತನಕವೂ ಮನೆ ಮುಟ್ಟಬೇಡಿ ಎಂದು ಆದೇಶ ನೀಡಿದ್ದಾರೆ. ಉಸ್ತುವಾರಿ ಸಚಿವೆಯ ಆದೇಶ ಮೀರಿಯೂ ತೆರವು ಆದೇಶ ನೀಡುವುದಾದರೆ ಅಧಿಕಾರಿಗಳು ವ್ಯವಸ್ಥೆಯೊಂದಿಗೆ ಆಟವಾಡುತ್ತಿದ್ದಾರಾ ಎಂದು ಕೋಟ ಆಕ್ರೋಶ ವ್ಯಕ್ತಪಡಿಸಿದರು.

ಬಡವನ ಮನೆಯೊಡೆಯಲು ನೀತಿ ಸಂಹಿತೆ ಇಲ್ಲವೇ?
ಜಿಲ್ಲೆಗೆ ಸೀಮಿತಗೊಳಿಸಿ ಇಪ್ಪತ್ತೈದು ಸಾವಿರ ಬಡವರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ಕೂಡ ಇನ್ನೂ ಹಕ್ಕು ಪತ್ರ ನೀಡಿಲ್ಲ. ಆದರೆ ಯಾರನ್ನೂ ಕೂಡ ಇದುವರೆಗೂ ಸ್ಥಳದಿಂದ ತೆರವುಗೊಳಿಸಿಲ್ಲ. ಆದರೆ ಈ ಜಾಗದಲ್ಲಿ ಡಿಸಿ ನಿರ್ದೇಶನದಲ್ಲಿ ಕುಂದಾಪುರ ಎಸಿ ಮನೆಯನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಜಾಗದಲ್ಲಿ ಕುಳಿತವರು ಬಡವರು. ಅವರಿಗೆ ಬೇರಾವುದೆ ನಿವೇಶನ ಇಲ್ಲವೆಂಬದನ್ನು ಮನವರಿಕೆ ಮಾಡಿದ್ದರೂ ಕೂಡ ಈ ವರ್ತನೆ ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಸಮಸ್ಯೆಯನ್ನು ನೀಗಿಸಲು ನೀತಿ ಸಂಹಿತೆಯ ನೆಪವೊಡ್ಡುವ ಜಿಲ್ಲಾಡಳಿತಕ್ಕೆ ಬಡವನ ಮನೆ ಒಡೆಯಲು ನೀತಿ ಸಂಹಿತೆ ಅಡ್ಡಿ ಬರುವುದಿಲ್ಲವೇ ಎಂದು ಕೋಟ ವ್ಯಂಗ್ಯವಾಡಿದರು.

ಧರಣಿಗೆ ಬೆಂಬಲವಿದೆ: ಕೋಟ
ಬಡ ಕುಟುಂಬಗಳು ಸಾಲ ಮಾಡಿ ಲಕ್ಷಾಂತರ ರೂ. ಹಣ ವ್ಯಯಿಸಿ ಸಣ್ಣದೊಂದು ಸೂರು ನಿರ್ಮಿಸಿಕೊಂಡಿದ್ದು, ಅದಕ್ಕೂ ಅಧಿಕಾರಿ ವರ್ಗ ಸಮಸ್ಯೆ ತಂದಿಟ್ಟು ತೆರವುಗೊಳಿಸುವುದೇ ಆದರೆ ನಾನು ಇವರ ಬೆಂಬಲಕ್ಕೆ ನಿಲ್ಲುತ್ತೇನೆ. ಮನೆ ತೆರವುಗೊಳಿಸುವುದಾದರೆ ನೊಂದ ಕುಟುಂಬ ಮಿನಿ ವಿಧಾನ ಸೌಧದೆದುರು ಪ್ರತಿಭಟನೆಗೆ ಎಚ್ಚರಿಸಿದ್ದಾರೆ. ಕರ್ನಾಟಕದ ಪ್ರತಿಪಕ್ಷದ ನಾಯಕನಾಗಿ ನಾನೂ ಕೂಡ ಈ ಧರಣಿಗೆ ಬೆಂಬಲ ನೀಡಿ ಧರಣಿಯಲ್ಲಿ ಕೂರುವೆ.

ಅಧಿಕಾರಿಗಳದ್ದು ಅತಿಯಾಯಿತು..!
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದ ನಾವು ಬಡವರ ಮನೆ ಒಡೆಯಬೇಡಿ ಎಂದು ಪರಿ ಪರಿಯಾಗಿ ವಿನಂತಿಸಿದ್ದೇವೆ. ಜಿಲ್ಲಾಧಿಕಾರಿ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಅವರದ್ದೆ ಸರ್ಕಾರವಾದರೆ ಯಾವುದೇ ಪ್ರಶ್ನೆ ಇಲ್ಲ. ಆದರೆ ಇವರನ್ನೂ ಮೀರಿ ಒಂದು ಸರ್ಕಾರವಿದೆ, ಮುಖ್ಯಮಂತ್ರಿ, ಕಂದಾಯ ಮಂತ್ರಿ, ಉಸ್ತುವಾರಿ ಸಚಿವರು ಇದ್ದಾರೆಂಬುವುದು ಅವರಿಗೆ ಅರಿವಿಲ್ಲದಿದ್ದರೆ ಶಾಸಕರಾಗಿ ನಾವು ಶಾಸನ ಸಭೆ ಸೇರಿದಂತೆ ಯಾವ ವೇದಿಕೆಯಲ್ಲಾದರೂ ಹೋರಾಟ ಮಾಡುತ್ತೇವೆಂದು ಕೋಟ ಕಿಡಿಕಾರಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.