ಕರಾವಳಿ

‘ನಮ್ಮನ್ನು ಕೊಂದು ಬಳಿಕ ಮನೆ ಕೆಡವಿ’; ಕುಂದಾಪುರ ಕಾಳಾವರದಲ್ಲಿ ಬಡ ಕುಟುಂಬದ ಅಳಲು!

Pinterest LinkedIn Tumblr

ಕುಂದಾಪುರ: ಇವರಿಗೆ ಇರಲು ಸ್ವಂತ ಮನೆಯಿಲ್ಲ. ಜಾಗ ಮೊದಲೇ ಇಲ್ಲ. ಸರ್ಕಾರಿ ಜಾಗದಲ್ಲಿ ಕೂತು ಅಕ್ರಮ-ಸಕ್ರಮದಡಿ ಅರ್ಜಿ ಹಾಕಿದರೆ ಆಡಳಿತ ಕಣ್ಣು ತೆರೆಯುತ್ತಿಲ್ಲ. ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟು ಕಷ್ಟಪಟ್ಟು ಲಕ್ಷಾಂತರ ರೂಪಾಯಿ ವ್ಯಯಿಸಿ ಸಣ್ಣದೊಂದು ಸೂರು ಕಟ್ಟಿಕೊಂಡರೆ ಅದರ ನಿರ್ಣಾಮಕ್ಕೂ ಮುಂದಾಗಿದೆ. ದಿನನಿತ್ಯ ಊಟ, ನಿದ್ದೆಯಿಲ್ಲದ ಕಷ್ಟಪಟ್ಟು ಕಟ್ಟಿರುವ ಮನೆಯನ್ನು ಉಳಿಸಿಕೊಳ್ಳಲು ಸರರ್ಕಾರಿ ಕಚೇರಿ, ಜನಪ್ರತಿನಿಧಿಗಳ ಮನೆ ಅಲೆದಾಡುತ್ತಿರುವ ಮಹಿಳೆಯರು ಇನ್ನೊಂದೆಡೆ. ಈ ಬಡಕುಟುಂಬಗಳ ಕರುಣಾಜಕನ ಸ್ಟೋರಿ ಇಲ್ಲಿದೆ.

ಕಳೆದ ಐದಾರು ವರ್ಷಗಳಿಂದ ಇಲ್ಲಿನ ಕಾಳಾವರ ಗ್ರಾಮಪಂಚಾಯತ್ ವ್ಯಾಪ್ತಿಯ ದೇವಸ್ಥಾನ ಬೆಟ್ಟು ಸಮೀಪದಲ್ಲಿರುವ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಕುಟುಂಬಗಳಿಗೆ ಇದೀಗ ಮನೆ ತೆರವುಗೊಳಿಸಲು ಆದೇಶಿಸಿ ತಹಸೀಲ್ದಾರ್ ನೋಟೀಸ್ ನೀಡಿದ್ದಾರೆ. ಈ ದಿಢೀರ್ ಆದೇಶದಿಂದಾಗಿ ಬಡ ಕುಟುಂಬಗಳು ದಿಕ್ಕೇ ತೋಚದೆ ಕಣ್ಣೀರ ಕಡಲಲ್ಲಿ ಮುಳುಗಿವೆ. ಹೌದು, ಐದಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸವಿದ್ದರೂ ತಾಲೂಕು ಆಡಳಿತ ಮಾತ್ರ ಇವರಿಗೆ ಅಕ್ರಮ ಸಕ್ರಮದಡಿಯಲ್ಲಿ ಜಾಗ ಮಂಜೂರು ಮಾಡಲು ಹಿಂದೇಟು ಹಾಕುತ್ತಿದೆ. ವಾಸ್ತವ್ಯ ದೃಢೀಕರಣ ನೀಡಿದ್ದರೂ ಬೇರೆ ಬೇರೆ ನೆವಗಳನ್ನು ಹೇಳಿ ಸತಾಯಿಸುತ್ತಿದ್ದು, ಇದೀಗ ಮೂರು ದಿನಗಳ ಗಡುವು ನೀಡಿ ಮನೆ ತೆರವಿನ ಆದೇಶಕ್ಕೆ ಮುಂದಾಗಿದೆ.

ಸೋದರ ಸಂಬಂಧಿಯ ಮನೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದ ಕಾಳಾವರ ನಿವಾಸಿ ಅಮ್ಮಣ್ಣಿ ಶೆಡ್ತಿ ಐದಾರು ವರ್ಷಗಳ ಹಿಂದೆ ತಮ್ಮ ಮಕ್ಕಳು ಹಾಗೂ ಸಂಬಂಧಿಗಳಾದ ಸರ್ಕಾರಿ ಭೂಮಿಯಲ್ಲಿ ಬೇರೆ ಬೇರೆ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದರು. ಮಳೆಗಾಲದಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ಇವರಿಗೆ ಸರ್ಕಾರ ಯಾವುದೇ ಅನುದಾನವಿರಲಿ ಜಾಗವಿರಲಿ ಇದುವರೆಗೂ ಮಂಜೂರು ಮಾಡಿಲ್ಲ. ಸರ್ಕಾರಿ ಜಾಗದಲ್ಲಿ ಕೂತ ಏಳು ಮನೆಯವರಿಗೂ ಸ್ವಂತ ಜಾಗವಾಗಲಿ, ಮನೆಯಾಗಲಿ ಇಲ್ಲ. ಸರ್ಕಾರಿ ಜಾಗದಲ್ಲಿ ನಿರ್ಮಿಸಿಕೊಂಡಿರುವ ಮನೆಯನ್ನೇ ನಂಬಿಕೊಂಡಿರುವ ಇವರಿಗೆ ತಹಸೀಲ್ದಾರ್ ಆದೇಶ ಇದೀಗ ಬರಸಿಡಿಲು ಎರಗಿದಂತಾಗಿದೆ. ವಸಂತಿ, ಸುಗಂಧಿ, ಶ್ರೀಮತಿ, ಶ್ಯಾಮಲಾ, ಜ್ಯೋತಿ, ಗೀತಾ, ಅಕ್ಷತಾ ಒಟ್ಟು ಏಳು ಕುಟುಂಬಗಳು ತಮ್ಮ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿ ಇದೇ ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಐದಾರು ವರ್ಷಗಳಿಂದ ಮಳೆಗಾಲ ಚಳಿಗಾಲವೆನ್ನದೆ ಪುಟ್ಟ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಇವರು ಒಂದು ವರ್ಷಗಳ ಹಿಂದೆ ಚಿನ್ನಾಭರಣಗಳನ್ನೆಲ್ಲಾ ಅಡವಿಟ್ಟು ಚಿಕ್ಕದಾದ ಮನೆಯನ್ನು ಕಟ್ಟಿಕೊಂಡಿದ್ದರು. ಸುಮಾರು 2 ಲಕ್ಷದವರೆಗೂ ವೆಚ್ಚ ಮಾಡಿದ್ದ ಮನೆಗಳು ಕಣ್ಣೆದುರೆ ನೆಲಸಮವಾಗುತ್ತದೆ ಎನ್ನುವ ಆತಂಕದಲ್ಲೇ ದಿನ ದೂಡುತ್ತಿರುವ ಇವರ ನೋವಿಗೆ ಇದುವರೆಗೂ ಬೆರಳೆಣಿಕೆಯ ರಾಜಕಾರಣಿಗಳು ಬಿಟ್ಟರೆ ಬೇರಾರು ಸ್ಪಂದಿಸಿಲ್ಲ.ಇಲ್ಲಿನ ನಿವಾಸಿಗಳ ಸಂಕಷ್ಟಗಳನ್ನು ಅರಿತ ಸ್ಥಳೀಯ ಕಾಳಾವರ ಪಂಚಾಯತ್ 94ಸಿ ಅಡಿಯಲ್ಲಿ ಹಕ್ಕುಪತ್ರ ನೀಡಲು ಮುಂದಾಗಿತ್ತು. ಮೊದಲು 94ಸಿ ಗೆ ಅರ್ಜಿ ನೀಡಿದ್ದು, ಪಂಚಾಯತ್ ದೃಢೀಕರಣ ಇಲ್ಲವೆಂಬ ಕಾರಣಕ್ಕೆ ಆ ಅರ್ಜಿಯನ್ನು ತಾಲೂಕು ಆಡಳಿತ ತಿರಸ್ಕರಿಸಿತು. ಬಳಿಕ ಕಾಳಾವರ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು ವಾಸ್ತವ್ಯ ದೃಢೀಕರಣ ನೀಡಿತು. ಮತ್ತೊಮ್ಮೆ 94ಸಿ ಗೆ ಪಂಚಾಯತ್ ದೃಢೀಕರಣದ ಜೊತೆ ಅರ್ಜಿ ಸಲ್ಲಿಸಿದ್ದರು. ಆದರೆ ಕೇವಲ ಒಂದೇ ತಿಂಗಳಲ್ಲಿ ಕೂಲಂಕುಷವಾಗಿ ಅಧ್ಯಯನ ನಡೆಸದೆ ಇತ್ತೀಚೆಗೆ ರಾತ್ರೋರಾತ್ರಿ ಮನೆ ಕಟ್ಟಲಾಗಿದೆ ಎಂದು ಎರಡನೇ ಭಾರಿ ನೀಡಿರುವ ಅರ್ಜಿಯನ್ನೂ ತಿರಸ್ಕರಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಮನೆ ತೆರವಿನ ಆದೇಶ ಹಿಂಪಡೆಯಲು ಉಸ್ತುವಾರಿ ಸಚಿವರಲ್ಲಿ ಮಾತನಾಡಿದ್ದೇನೆ. ಬಳಿಕ ಸಚಿವರು ಜಿಲ್ಲಾಧಿಕಾರಿಯವರಲ್ಲಿ ಹಿಂಪಡೆಯಲು ಆದೇಶ ನೀಡಿದ್ದಾರೆ. ಅದರ ಮೇಲೂ ಮನೆ ತೆರವುಗೊಳಿಸಲು ಆದೇಶ ನೀಡಿರುವುದು ಸರಿಯಾದ ಕ್ರಮವಲ್ಲ. ಇದನ್ನೆಲ್ಲಾ ಗಮನಿಸಿದರೆ ಜಿಲ್ಲೆಯಲ್ಲಿ ಸರ್ಕಾರ ಆಡಳಿತ ನಡೆಸುತ್ತದೋ ಅಥವಾ ಅಧಿಕಾರಿಗಳು ಆಡಳಿತ ನಡೆಸುತ್ತಾರೋ ಎಂಬ ಪ್ರಶ್ನೆ ಎದುರಾಗಿದೆ. ನೊಂದವರು ಧರಣಿ ಮಾಡುವುದಾದರೆ ನಾನು ಅವರೊಂದಿಗೆ ಧರಣಿ ಕೂರುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ನಿರ್ಗತಿಕ ಕುಟುಂಬಗಳು ಅತಂತ್ರರಾಗಿದ್ದು, ಇದೀಗ ಆತ್ಮಹತ್ಯೆ ಯೋಚನೆಗೆ ಮುಂದಾಗಿದ್ದಾರೆ. ಈ ಗಂಭೀರ ವಿಚಾರವನ್ನು ಆಡಳಿತ ವ್ಯವಸ್ಥೆ ಹೇಗೆ ನಿಭಾಯಿಸುತ್ತದೆ ಎಂಬುವುದನ್ನು ಕಾದುನೋಡಬೇಕಿದೆ.

ವರದಿ – ಯೋಗೀಶ್ ಕುಂಭಾಸಿ

Comments are closed.