ಕರ್ನಾಟಕ

ವಿದ್ಯಾರ್ಥಿನಿಯೊಬ್ಬಳಿಗೆ ಒಬ್ಬರೇ ಶಿಕ್ಷಕಿಯ ಶಾಲೆ

Pinterest LinkedIn Tumblr


ಕೋಲಾರ: ಸರಕಾರಿ ಆಸ್ಪತ್ರೆ, ಸರಕಾರಿ ಶಾಲೆಗಳನ್ನು ಉನ್ನತ ಮಟ್ಟಕ್ಕೇರಿಸುವ ಮಹದ್ ಕನಸು ಕಾಣುವವರು ಸ್ಪೀಕರ್ ರಮೇಶ್ ಕುಮಾರ್. ಈಗ ಅವರ ತವರು ಕ್ಷೇತ್ರವಾದ ಶ್ರೀನಿವಾಸಪುರದಲ್ಲಿ ಸರಕಾರಿ ಶಾಲೆಯೊಂದು ಗಮನ ಸೆಳೆದಿದೆ. ಈ ಶಾಲೆಯಲ್ಲಿರೋದು ಒಬ್ಬರೇ ವಿದ್ಯಾರ್ಥಿ, ಒಬ್ಬರೇ ಟೀಚರ್, ಒಂದೇ ಕುಕ್ಕರ್. ಓಬೇನಹಳ್ಳಿಯ ಸರಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ ವಾಸ್ತವ ಸ್ಥಿ ಇದು.

ಓಬೇನಹಳ್ಳಿ ಗ್ರಾಮದಲ್ಲಿ ಸುಮಾರು 50 ಕ್ಕೂ ಮನೆಗಳಿದ್ದು, 250 ಮಂದಿ ಗ್ರಾಮಸ್ಥರಿದ್ದಾರೆ. ಇವರಲ್ಲಿ 45 ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಕಲಿಯಲು ಹೋಗುತ್ತಿದ್ದಾರೆ. ಆದರೆ, ಓಬೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಗೆ ಮಾತ್ರ ಕೇವಲ ಒಬ್ಬ ವಿದ್ಯಾರ್ಥಿನಿ ಮಾತ್ರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿದ್ದು, 5ನೇ ತರಗತಿ ಓದುತ್ತಿದ್ದಾಳೆ. ಈ ಶಾಲೆಯಲ್ಲಿರೋದು ವಿದ್ಯಾರ್ಥಿನಿ ನಂದಿತಾ, ಶಿಕ್ಷಕಿ ಕೋಮಲಾ ಹಾಗೂ ಒಬ್ಬ ಅಡುಗೆಯವರು ಈ ಮೂವರು ಮಾತ್ರವೇ.

250 ಕ್ಕೂ ಹೆಚ್ಚು ಜನರಿರುವ ಓಬೇನಹಳ್ಳಿ ಗ್ರಾಮದಲ್ಲಿ 45 ಶಾಲಾ ಮಕ್ಕಳಿದ್ದಾರೆ. ಗ್ರಾಮದಿಂದ 6 ಕಿಮೀ ದೂರದಲ್ಲಿ ಶ್ರೀನಿವಾಸಪುರ ಪಟ್ಟಣವಿದ್ದು, ಅಲ್ಲಿ 15ಕ್ಕೂ ಅಧಿಕ ಖಾಸಗಿ ಶಾಲೆಗಳಿವೆ. ಈ ಖಾಸಗಿ ಶಾಲೆಗಳು ಓಬೇನಹಳ್ಳಿಗೆ ತುಸು ಹತ್ತಿರವಿರೋದ್ರಿಂದ ಇಲ್ಲಿಯ ಪೋಷಕರು ಹೆಚ್ಚಾಗಿ ಮಕ್ಕಳನ್ನ ಖಾಸಗಿ ಶಾಲೆಗಳಿಗೇ ಸೇರಿಸಬಯಸುತ್ತಾರೆ. ಕೆಲ ಮಕ್ಕಳಿಗೆ ಆರ್​ಟಿಐ ಮೀಸಲಾತಿಯಡಿ ಖಾಸಗಿ ಶಾಲೆಯಲ್ಲಿ ಉಚಿತ ಸೀಟ್ ದೊರೆತಿದೆ. ಹಾಗಾಗಿಯೇ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಸರ್ಕಾರಿ ಶಾಲೆ ಉಳಿಸಬೇಕಿರುವ ಶಿಕ್ಷಣ ಇಲಾಖೆಯೇ ಸರ್ಕಾರಿ ಶಾಲೆಗಳ ಆಸುಪಾಸಿನಲ್ಲೇ ಖಾಸಗಿ ಶಿಕ್ಷಣ ಸಂಸ್ಥೆ ಗಳಿಗೆ ಅನುಮತಿ ನೀಡಿ ಸರ್ಕಾರಿ ಶಾಲೆಗಳ ಹಾಜರಾತಿಗೆ ಕೊಡಲಿ ಇಟ್ಟಿದೆ ಎಂಬ ಅಭಿಪ್ರಾಯಗಳಿವೆ.

ಶಿಕ್ಷಕಿ ಮತ್ತು ವಿದ್ಯಾರ್ಥಿನಿ

ಶಿಕ್ಷಕಿ ಕೋಮಲ ಅವರ ವಾಹನದಲ್ಲೇ ನಿತ್ಯ ಶಾಲೆಗೆ ಆಗಮಿಸೋ ವಿದ್ಯಾರ್ಥಿನಿ ನಂದಿತಾ ಸಂಯಮದಿಂದಲೇ ಕುಳಿತು ಬೇಸರವಿಲ್ಲದೆ ಪಾಠ ಕೇಳುತ್ತಾಳೆ. ಮನೆಯಲ್ಲಿ ಬಡತನವಿದ್ದರೂ, ಸರ್ಕಾರಿ ಶಾಲೆಯಲ್ಲಿ ಉತ್ತಮ ಕಲಿಕೆ ನೀಡುವ ಭರವಸೆಯಿಂದ ಪೋಷಕರು ಶಾಲೆಗೆ ಕಳಿಸುತ್ತಿದ್ದು ಶಾಲೆ ಇನ್ನು ಉಳಿದಿದೆ. ಒಬ್ಬ ವಿದ್ಯಾರ್ಥಿನಿಗೆ ಪಾಠ ಹೇಳೋ ಶಿಕ್ಷಕಿ ಕೋಮಲ ಈ ಬಗ್ಗೆ ಮಾತನಾಡಿದ್ದು, ಖಾಸಗಿ ಶಾಲೆಗಳ ಹಾವಳಿಯಿಂದ ಮಕ್ಕಳ ಸಂಖ್ಯೆ ಇಳಿಕೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಅರ್ಧ ವರ್ಷ ಶಾಲೆಗೆ ಆಗಮಿಸಿರುವ ವಿದ್ಯಾರ್ಥಿನಿ ನಂದಿತಾಗೆ, ಆಟ-ಪಾಠ, ಕಾಲ ಕಳೆಯಲು ಸ್ನೇಹಿತೆಯಾಗಿ ಶಿಕ್ಷಕಿ ಕೋಮಲ ಜೊತೆಗಿದ್ದಾರೆ. ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ನಂದಿತಾ, ಸರ್ಕಾರಿ ಶಾಲೆಯೆಂದ್ರೆ ಇಷ್ಟ. ಅದಕ್ಕಾಗಿಯೇ ಇಲ್ಲಿಯೇ ಓದುತ್ತಿದ್ದೇನೆ ಎಂದು ಹೇಳುತ್ತಾಳೆ. ಇನ್ನು ನಂದಿತಾರ ಪೋಷಕರ ಧೈರ್ಯವನ್ನು ಮೆಚ್ಚಲೇಬೇಕು. ಇಡೀ ಶಾಲೆಯಲ್ಲಿ ತಮ್ಮ ಮಗಳು ಒಬ್ಬಳೇ ವಿದ್ಯಾರ್ಥಿನಿಯಾಗಿದ್ದರೂ ಆಕೆಯನ್ನು ಕಳುಹಿಸಲು ಒಪ್ಪಿರುವ ಇಂತಹ ಪೋಷಕರಿಂದ ರಾಜ್ಯದ ಹಲವು ಸರಕಾರಿ ಶಾಲೆಗಳು ಇನ್ನೂ ಉಸಿರಾಡುತ್ತಿವೆ ಎನ್ನಬಹುದು.

ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಸೋಕೆ ಸರ್ಕಾರವೂ ಉತ್ಸುಕವಾಗಿದ್ದು ಪ್ರಾಯೋಗಿಕವಾಗಿ ಹಲವೆಡೆ ಜಾರಿ ಮಾಡಿದೆ. ಆದ್ರೆ ಗ್ರಾಮೀಣ ಭಾಗದಲ್ಲಿನ ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿದ್ದು, ಸರ್ಕಾರಿ ಶಾಲೆಗಳ ಉಳಿಗಾಲದ ಪ್ರಶ್ನೆ ಎದುರಾಗಿದೆ.

Comments are closed.