ಕರಾವಳಿ

ಬಜೆಟ್ ಹಣ ಬಿಡುಗಡೆಗೆ ಹಣಕಾಸು ಇಲಾಖೆಗೆ ಪರ್ಸೆಂಟೇಜ್ (ಲಂಚ) ಕೇಳಿದ ಅಧಿಕಾರಿಗಳು : ಶಾಸಕರಿಂದ ತರಾಟೆ – ವಿಡಿಯೋ ವೈರಲ್

Pinterest LinkedIn Tumblr

ಮಂಗಳೂರು : ಸರಕಾರಿ ಯೋಜನೆಗಳಿಗೆ ಪರ್ಸೆಂಟೇಜ್ ನೀಡದಿದ್ದರೆ ಕೆಲಸಗಳೇ ಮುಂದೆ ಸಾಗಲ್ಲ ಎನ್ನುವುದು ಜನರಲ್ಲಿರುವ ಸಾಮಾನ್ಯ ಅಭಿಪ್ರಾಯ. ಯೋಜನೆಗಳ ಹಣದಲ್ಲಿ ಇಂತಿಷ್ಟು ಪರ್ಸೆಂಟ್ ಶಾಸಕರಿಗೆ, ಅಧಿಕಾರಿಗಳಿಗೆ ಹೋಗೇ ಹೋಗುತ್ತೆ ಅನ್ನೋದು ಜನರ ಅನಿಸಿಕೆ. ಈಗ ಬಜೆಟ್ ಹಣ ಬಿಡುಗಡೆ ಮಾಡೋದಕ್ಕೂ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎನ್ನುವ ವಿಚಾರ ಬಯಲಾಗಿದೆ.

ಹಣಕಾಸು ಇಲಾಖೆಗೆ ಲಂಚ ನೀಡಬೇಕೆಂಬ ವಿಚಾರವನ್ನು ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ಶಾಸಕರ ಮುಂದೆ ಬಾಯಿಬಿಟ್ಟ ವಿಡಿಯೋ ಇದೀಗ ವೈರಲ್ ಆಗಿದೆ. ಮಂಗಳೂರಿನಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸ್ವತಃ ಶಾಸಕರ ಎದುರಲ್ಲೇ ಈ ವಿಚಾರ ಬಾಯ್ಬಿಟ್ಟಿದ್ದು, ಬಜೆಟ್ ಹಣ ಬಿಡುಗಡೆ ಆಗಬೇಕಿದ್ದರೆ ಹಣಕಾಸು ಇಲಾಖೆಗೆ ಲಂಚ ಕೊಡಬೇಕು ಅನ್ನೋದನ್ನು ಒಪ್ಪಿಕೊಂಡಿದ್ದಾರೆ.

ಮಂಗಳೂರು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಪಿಡಿಓಗಳಲ್ಲಿ ತಾಪಂ ಇಓ ಸದಾನಂದ, ಈ ಬಗ್ಗೆ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಲಂಚ ಕೊಡದೆ ಬಜೆಟ್ ವರದಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಬೇಸತ್ತ ಪಿಡಿಒಗಳು ತಾಲೂಕು ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿದ್ದರು . ಈ ವಿಚಾರ ತಿಳಿದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ತಾಲೂಕು ಪಂಚಾಯತ್ ಕಚೇರಿಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ್ದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರು ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ವೇಳೆ ಕಾರ್ಯನಿರ್ವಣಾಧಿಕಾರಿ ಸದಾನಂದ ಅವರು ಹಣಕಾಸು ಇಲಾಖೆಗೆ ಲಂಚ ಕೊಡಬೇಕು ಎನ್ನುವ ವಿಚಾರವನ್ನು ಶಾಸಕರ ಮುಂದೆ ಹೇಳಿದ್ದಾರೆ. ಬಜೆಟ್ ಹಣ ಬಿಡುಗಡೆಗೆ ಹಣಕಾಸು ಇಲಾಖೆಗೆ ಹಣ ಕೊಡಬೇಕಾಗುತ್ತದೆ ಅದನ್ನು ಪಿಡಿಒಗಳ ಬಳಿ ಕೇಳುತ್ತಿದ್ದೇನೆ ಎಂದು ಅವರು ತಿಳಿಸಿದಾರೆ.

ಮಾತ್ರವಲ್ಲದೇ ಶಾಸಕರು ಹೊಸಬರಾಗಿದ್ದರಿಂದ ನಿಮಗೆ ಇದೆಲ್ಲ ಅರ್ಥ ಆಗಲ್ಲ ಅನ್ನುವ ಹಾರಿಕೆಯ ಮಾತನ್ನೂ ಆಡಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದು ಸ್ವತಃ ಶಾಸಕರೇ ತಬ್ಬಿಬ್ಬಾದರು. ಈ ಸಂದರ್ಭದಲ್ಲಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಶೀಘ್ರ ಫೈಲ್ ವಿಲೇವಾರಿ ಮಾಡುವಂತೆ ಸೂಚಿಸಿದರು.

ಅಲ್ಲಿ ನಡೆದ ಮಾತುಕತೆ ಎಲ್ಲವೂ ಮೊಬೈಲ್ ನಲ್ಲಿ ಸೆರೆಯಾಗಿದ್ದು, ರಾಜ್ಯದ ಹಣಕಾಸು ಇಲಾಖೆಯಿಂದಲೇ ಮಾಮೂಲಿ ಕಲೆಕ್ಷನ್ ಮಾಡ್ತಾರೆ ಅನ್ನೋದಕ್ಕೆ ದಾಖಲೆಯಾಗಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Comments are closed.