ಕರ್ನಾಟಕ

ಕನ್ನಡ ಶಾಲೆ ಮುಚ್ಚಬಾರದು ಎಂದು ಈ ಸಿನಿಮಾ ಮಾಡಿದ್ವಿ- ರಿಷಬ್ ಶೆಟ್ಟಿ

Pinterest LinkedIn Tumblr


ಧಾರವಾಡ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರ ತಂಡ ಇಂದು ಧಾರವಾಡಕ್ಕೆ ಆಗಮಿಸಿತ್ತು. ಈ ವೇಳೆ ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಚಲನಚಿತ್ರ ಮಾಡಿದ್ದೇವೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

ಈ ವೇಳೆ ನಗರದ ಕೆಸಿಡಿ ಕಾಲೇಜ್ ಬಳಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ತಂಡದ ಸದಸ್ಯರು ಸಿನಿಮಾಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದರು. ನಂತರ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಜೊತೆ ಮಾಧ್ಯಮಗೋಷ್ಠಿ ನಡೆಸಿದ ಸಿನಿಮಾ ನಿರ್ದೇಶಕ ರಿಷಬ್ ಶಟ್ಟಿ, ಕನ್ನಡ ಶಾಲೆಗಳನ್ನು ಮುಚ್ಚಬಾರದು ಎಂಬ ವಿಷಯದ ಮೇಲೆ ಈ ಚಲನಚಿತ್ರ ಮಾಡಿದ್ದೇವೆ ಎಂದು ಹೇಳಿದರು. ಕನ್ನಡ ಶಾಲೆಗಳಿಗೆ ಮಕ್ಕಳಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂಬ ವಿಷಯದ ಮೇಲೆ ಈ ಚಿತ್ರ ಮಾಡಲಾಗಿದೆ ಎಂದ ಅವರು, ಸರ್ಕಾರಿ ಶಾಲೆಯ ಮಕ್ಕಳು ರ‍್ಯಾಂಕ್ ಬರ್ತಾರೆ ಎಂದು ಹೇಳಿದರು.

ಕಾಸರಗೋಡಿನ ಒಂದು ಸರ್ಕಾರಿ ಶಾಲೆ ಅದು ಶಿಥಿಲಾವಸ್ಥೆಯಲ್ಲಿದೆ ಎಂಬ ನೆಪ ಹೇಳಿ ಕೇರಳದ ಶಿಕ್ಷಣ ಅಧಿಕಾರಿಯೊಬ್ಬ ಶಾಲೆಯನ್ನು ಮುಚ್ಚಿಸುತ್ತಾನೆ. ಮಕ್ಕಳು ಮತ್ತು ಊರ ಮಂದಿ ದಿಕ್ಕು ಕಾಣದಂತಾಗುತ್ತಾರೆ. ಕಡೆಗೆ ಮಕ್ಕಳೆಲ್ಲ ಸೇರಿ ಸಮಾಜಸೇವಕ ಅನಂತಪದ್ಮನಾಭ ಪಿ.(ಅನಂತನಾಗ್) ಅವರನ್ನು ಕರೆತರುತ್ತಾರೆ. ಅನಂತ್ ಬರೋತನಕ ಮಕ್ಕಳ ಕೀಟಲೆ, ಸಣ್ಣ ವಯಸ್ಸಿನಲ್ಲೇ ಶುರುವಾಗುವ ಪ್ರೀತಿಯ ಸೆಳೆತ ಮುಂತಾದವುಗಳ ಜೊತೆಗೆ ಸಾಗುವ ಕಥೆ ಅನಂತ್ ನಾಗ್ ಅವರು ಬರುತ್ತಿದ್ದಂತೇ ಬೇರೆಯದ್ದೇ ಆಯಾಮ ಪಡೆಯುತ್ತದೆ. ಅನಂತ್ ನಾಗ್ ಕೋರ್ಟ್ ನಲ್ಲಿ ವಾದ ಮಂಡಿಸುವ ಸಂದರ್ಭದಲ್ಲಂತೂ ಎಂಥವರಿಗಾದರೂ ನಗು ಮತ್ತು ಅಳು ಒಟ್ಟೊಟ್ಟಿಗೆ ಒತ್ತರಿಸಿಕೊಂಡು ಬರುತ್ತದೆ.

ಬಹುಶಃ ಇದೇ ಕಥೆಯನ್ನೇ ತೀರಾ ಗಂಭೀರವಾಗಿ ಹೇಳಿದ್ದಿದ್ದರೆ ಅದು ಮಾಮೂಲಿ ಕಲಾತ್ಮಕ ಸಿನಿಮಾವಾಗಿ ಅಥವಾ ಡಾಕ್ಯುಮೆಂಟರಿ ರೀತಿಯ ಚಿತ್ರವಾಗಿಯಷ್ಟೇ ದಾಖಲಾಗುತ್ತಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಗಡಿನಾಡು ಮತ್ತು ಭಾಷೆಯ ಸಮಸ್ಯೆಯನ್ನು ಹೊಂದಿರುವ ತೀರಾ ಗಂಭೀರವಾದ ವಿಚಾರವನ್ನು ಪಕ್ಕಾ ಮನರಂಜನಾ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಮೂಲಕ ರಂಜಿಸುತ್ತಲೇ ಸೀರಿಯಸ್ಸಾದ ವಿಚಾರವನ್ನು ನೋಡುಗರ ಮನಸ್ಸಿಗೆ ದಾಟಿಸಿದ್ದಾರೆ.

ಪ್ರಮೋದ್ ಶೆಟ್ಟಿ, ಅನಂತ್ ನಾಗ್ ಮತ್ತು ಎಲ್ಲ ಮಕ್ಕಳೂ ಅದ್ಭುತವಾಗಿ ನಟಿಸಿದ್ದಾರೆ. ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ ಕಣ್ಣೆದುರೇ ಕಾಸರಗೋಡನ್ನು ಕಟ್ಟಿಕೊಟ್ಟಿದೆ. ರಾಜ್ ಬಿ. ಶೆಟ್ಟಿ ಅವರ ಸಂಭಾಷಣೆ ಮನಸ್ಸಿಗೆ ಹತ್ತಿರವಾಗಿದೆ.

Comments are closed.