
ಫ್ರಾಂಕ್ಫುರ್ಟ್: ಎಪತ್ತು ವರ್ಷಗಳ ಹಿಂದೆ ಎರಡನೇ ವಿಶ್ವ ಮಹಾಯುದ್ಧದ ವೇಳೆ ಹಾಕಲಾಗಿದ್ದ ಬಾಂಬುಗಳು ಈಗಲೂ ಜರ್ಮನಿಯನ್ನು ಬಾಧಿಸುತ್ತಿವೆ. ಆ ದೇಶದಲ್ಲಿ ಪ್ರತೀ ವರ್ಷವೂ ಒಂದಿಲ್ಲೊಂದು ಬಾಂಬುಗಳು ಪತ್ತೆಯಾಗುತ್ತಲೇ ಇವೆ. ಕಳೆದ ವಾರ ಲುಡ್ವಿಶಫೆನ್ ನಗರದಲ್ಲಿ 1,100 ಪೌಂಡ್ (500 ಕಿಲೋ) ತೂಕದ ಬೃಹತ್ ಬಾಂಬ್ವೊಂದು ಪತ್ತೆಯಾಗಿತ್ತು. ನಿನ್ನೆ ಭಾನುವಾರ ತಜ್ಞರು ಈ ಬಾಂಬನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು. ಆದರೆ, ಈ ಕಾರ್ಯ ಮಾಡುವ ಮುನ್ನ ಸ್ಥಳದಿಂದ ಕೆಲ ಕಿಲೋಮೀಟರ್ವರೆಗಿನ ವ್ಯಾಪ್ತಿ ಪ್ರದೇಶದ 18,500 ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು. ಒಂದೆರಡು ಗಂಟೆಯಲ್ಲೇ ನುರಿತ ತಜ್ಞರು ಈ ಬೃಹತ್ ಬಾಂಬ್ ಡಿಪ್ಯೂಸ್ ಮಾಡಿದರು.
ಎರಡನೇ ವಿಶ್ವ ಮಹಾಸಮರದಲ್ಲಿ ಹಿಟ್ಲರ್ ಆಡಳಿತದ ಜರ್ಮನಿಯ ಮೇಲೆ ಅಮೆರಿಕ ನೇತೃತ್ವದ ಮಿತ್ರ ರಾಷ್ಟ್ರಗಳು ಬಾಂಬ್ಗಳ ಸುರಿಮಳೆಯನ್ನೇ ಮಾಡಿದ್ದರು. ಆದರೆ ಅಂಥ ಶೇ. 15ರಷ್ಟು ಬಾಂಬ್ಗಳು ಸಿಡಿಯದೇ ಉಳಿದುಬಿಟ್ಟಿವೆ. ಕಾಲಾಂತರದಲ್ಲಿ ಆ ಬಾಂಬ್ಗಳು ಭೂಮಿಯೊಳಗೆಯೇ ಹುದುಗಿಹೋಗಿವೆ. ಕಳೆದ ಹಲವಾರು ವರ್ಷಗಳಿಂದ ಈ ಬಾಂಬುಗಳು ಜರ್ಮನಿಯಾದ್ಯಂತ ಪತ್ತೆಯಾಗುತ್ತಲೇ ಇವೆ. ಕಟ್ಟಡ ನಿರ್ಮಾಣಕ್ಕೆಂದು ನೆಲ ಅಗೆದಾಗ ಹಲವು ಸಿಕ್ಕಿವೆ. ಕೈ ಮುಷ್ಟಿಯಷ್ಟು ಗಾತ್ರದಿಂದ ಹಿಡಿದು ಐದಾರು ಅಡಿಯವರೆಗೂ ಈ ಬಾಂಬ್ಗಳಿವೆ. ಕಳೆದ ವರ್ಷವಂತೂ ಫ್ರಾಂಕ್ಫುರ್ಟ್ ನಗರದಲ್ಲಿ 1,800 ಕಿಲೋ ತೂಕದ ಭಾರೀ ಗಾತ್ರದ ಬಾಂಬ್ ಸಿಕ್ಕಿತ್ತು. 60 ಸಾವಿರ ಜನರನ್ನು ತೆರವುಗೊಳಿಸಿ ನಂತರ ಆ ಬಾಂಬನ್ನು ನಿಷ್ಕ್ರಿಯಗೊಳಿಸಲಾಗಿತ್ತು.
ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಹಲವು ಬಾರಿ ಬಾಂಬ್ ಸಿಡಿದು ತಜ್ಞರು ಸಾವನ್ನಪ್ಪಿದ ದುರಂತಗಳು ನಡೆದಿವೆ. ಹಾಗೆಯೇ ಕಾಡ್ಗಿಚ್ಚು ಹಬ್ಬಿದಾಗ ಅಲ್ಲಲ್ಲಿ ಹುದುಗಿದ ಬಾಂಬ್ಗಳು ಬೆಂಕಿಯ ಶಾಖದಿಂದಾಗಿ ಸ್ಫೋಟಗೊಂಡ ಪ್ರಕರಣಗಳು ಹಲವಾರು ಇವೆ. ಹೀಗಾಗಿ, ಕಾಡ್ಗಿಚ್ಚಿನ ವೇಳೆ ಬೆಂಕಿ ನಂದಿಸಲು ಹೋಗುವ ಅಗ್ನಿಶಾಮಕ ಸಿಬ್ಬಂದಿಗೆ ಯಾವಾಗಲೂ ಈ ಬಾಂಬ್ಗಳದ್ದೇ ಚಿಂತೆಯಾಗಿರುತ್ತದೆ.
Comments are closed.