
ನವದೆಹಲಿ: ಈ ವರ್ಷದ ಭಾರೀ ಮಳೆಗೆ ದೇಶದಲ್ಲಿ 1,276 ಜನರು ಸಾವನ್ನಪ್ಪಿದ್ದಾರೆ. ಈ ಬಾರಿ ಸಂಭವಿಸಿದ ಪ್ರವಾಹದಲ್ಲಿ ಕೇರಳವೊಂದರಲ್ಲೇ 443 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಗೃಹ ಸಚಿವಾಲಯದ ಎನ್ಇಆರ್ಸಿ ಪ್ರಕಾರ, ಕೇರಳದಲ್ಲಿ 443 ಜನ ಜೀವ ಕಳೆದುಕೊಂಡಿದ್ದಾರೆ. ಇಲ್ಲಿನ 14 ಜಿಲ್ಲೆಗಳ 54.11 ಲಕ್ಷ ಜನರು ಮಳೆ ಮತ್ತು ಪ್ರವಾಹದ ಹೊಡೆತಕ್ಕೆ ನಲುಗಿಹೋಗಿದ್ದಾರೆ. 47,727 ಹೆಕ್ಟೇರ್ ಪ್ರದೇಶದ ಕೃಷಿ ಜಮೀನು ಕೊಚ್ಚಿಹೋಗಿದೆ ಎಂದು ವರದಿ ನೀಡಿದೆ. ಇಲ್ಲಿನ 14.52 ಲಕ್ಷ ಜನರು ನಿರಾಶ್ರಿತ ಕೇಂದ್ರಗಳಲ್ಲಿ ಆಸರೆ ಪಡೆದಿದ್ದಾರೆ.
ಉಳಿದಂತೆ, ಉತ್ತರ ಪ್ರದೇಶದಲ್ಲಿ 218, ಪಶ್ಚಿಮ ಬಂಗಾಳದಲ್ಲಿ 198, ಕರ್ನಾಟಕದಲ್ಲಿ 166, ಮಹಾರಾಷ್ಟ್ರದಲ್ಲಿ 139, ಗುಜರಾತ್ನಲ್ಲಿ 52, ಅಸ್ಸಾಂನಲ್ಲಿ 49 ಮತ್ತು ನಾಗಾಲ್ಯಾಂಡ್ನಲ್ಲಿ 11 ಜನರು ಮಳೆಯಿಂದಾಗಿ ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಮಳೆಯ ಕಾರಣದಿಂದ 37 ಜನ ನಾಪತ್ತೆಯಾಗಿದ್ದಾರೆ. ಕೇರಳದಲ್ಲಿ 15, ಉತ್ತರಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದಲ್ಲಿ 5, ಕರ್ನಾಟಕದಲ್ಲಿ ಮೂವರು ಕಾಣೆಯಾಗಿದ್ದಾರೆ. 349 ಜನರಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
2005ರವರೆಗೆ ಪ್ರವಾಹಕ್ಕೆ ಪ್ರತಿವರ್ಷ 1,600 ಜನರು ಬಲಿಯಾಗಿದ್ದಾರೆ. 4,745 ಕೋಟಿ ಮೌಲ್ಯದ ಬೆಳೆ, ಆಸ್ತಿ-ಪಾಸ್ತಿ ನಷ್ಟವಾಗಿದೆ.
Comments are closed.