ಕರಾವಳಿ

ಕುಂಭಾಶಿಯ ‘ಡೇಂಜರ್ ವೇ’ಯಲ್ಲಿ ಸ್ಕಾರ್ಪಿಯೋ ಸ್ಕೂಟಿ ಅಪಘಾತ; ಪುಟಾಣಿಗಳಿಬ್ಬರ ತಾಯಿ ಬಲಿ

Pinterest LinkedIn Tumblr

ಕುಂದಾಪುರ: ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ರಸ್ತೆ ದಾಟುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಸವಾರೆ ಮಹಿಳೆ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಕುಂಭಾಸಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕುಂಭಾಸಿ ಮೂಲದ ಹರೀಶ್ ಎನ್ನುವವರ ಪತ್ನಿ ಸುಜಾತಾ ಮೊಗವೀರ (28) ಮೃತ ದುರ್ದೈವಿಯಾಗಿದ್ದಾರೆ.

ಘಟನೆ ವಿವರ: ಕಾಂಕ್ರಿಟ್ ಕೆಲಸದ ಮೇಸ್ತ್ರಿಯಾಗಿರುವ ಹರೀಶ್ ಐದಾರು ವರ್ಷದ ಹಿಂದೆ ಸುಜಾತಾ ಎನ್ನುವವರನ್ನು ವಿವಾಹವಾಗಿದ್ದು ಬಳಿಕ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಗ್ರಹಿಣಿಯಾಗಿದ್ದ ಸುಜಾತಾ ಅವರಿಗೆ ನಾಲ್ಕು ವರ್ಷ ಹಾಗೂ ಮೂರು ವರ್ಷ ಪ್ರಾಯದ ಇಬ್ಬರು ಪುತ್ರರಿದ್ದು ಅವರಲ್ಲಿ ಓರ್ವ ಪುತ್ರನನ್ನು ತನ್ನ ದ್ವಿಚಕ್ರ ವಾಹನದಲ್ಲಿ ಕುಳ್ಳೀರಿಸಿಕೊಂಡು ಕುಂಭಾಶಿ ಬಸ್ಸು ನಿಲ್ದಾಣ ಸಮೀಪದ ದ್ವಿಭಾಜಕದಲ್ಲಿನ ಕಿರಿದಾದ ತೋಡಿನಲ್ಲಿ ಇನ್ನೊಂದು ಭಾಗದ ರಸ್ತೆಗೆ ಬರಲು ಆಗಮಿಸುತ್ತಿದ್ದಾಗ ಕುಂದಾಪುರದಿಂದ ಉಡುಪಿಯತ್ತ ವೇಗವಾಗಿ ಸಾಗಿಬಂದ ಸ್ಕಾರ್ಪಿಯೋ ಕಾರು ಸ್ಕೂಟಿಗೆ ಡಿಕ್ಕಿಯಾಗಿದೆ. ಇದೇ ವೇಳೆ ಮಗು ಹುಲ್ಲುಹಾಸಿನ ಮೇಲೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿದ್ದು ಸುಜಾತಾ ಮಾತ್ರ ಕೆಲವು ದೂರ ಕಾರಿನಿಂದ ಎಳೆಯಲ್ಪಟ್ಟು ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಕಣ್ಣೇದುರೇ ತಾಯಿಗಾದ ಅಪಘಾತವನ್ನು ಕಂಡ ಪುತ್ರನ ಶೋಕ ಮುಗಿಲುಮುಟ್ಟಿತ್ತು.

ಘಟನಾ ಸ್ಥಳಕ್ಕೆ ಕುಂದಾಪುರ ಸಿ.ಪಿ.ಐ. ಮಂಜಪ್ಪ, ಸಂಚಾರಿ ಠಾಣೆ ಉಪನಿರೀಕ್ಷಕ ರತ್ನಾಕರ ವಿ. ನಾಗೇಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯ ಸಮಾಜಸೇವಕಾರದ ಗಣೇಶ್ ಪುತ್ರನ್, ಮಹೇಶ್ ಶೆಣೈ ಈ ಸಂದರ್ಭ ಇದ್ದರು.

ಗುತ್ತಿಗೆ ಕಂಪೆನಿ ನಿರ್ಲಕ್ಷ್ಯ…
ಕುಂದಾಪುರ-ಸುರತ್ಕಲ್ ಹೆದ್ದಾರಿ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿರುವ ನವಯುಗ ಕಂಪೆನಿಯ ವಿರುದ್ಧ ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ದ್ವಿಭಾಜಕದಲ್ಲಿ ಅವೈಜ್ನಾನಿಕವಾಗಿ ನೀರು ಹರಿಯುವ ತೋಡು ನಿರ್ಮಿಸಿ ಅದರಲ್ಲಿ ದ್ವಿಚಕ್ರ ವಾಹನ ತೆರಳಲು ಅವಕಾಶ ಮಾಡಿಕೊಟ್ಟಿದ್ದು ತಪ್ಪು ಎಂದು ಸಾರ್ವಜನಿಕರು ಆರೋಪಿಸಿದ್ದು ಈ ಹಿಂದೆ ಹಲವು ಬಾರಿ ಸಂಬಂದಪಟ್ಟವರಿಗೆ ಇದನ್ನು ಮುಚ್ಚುವಂತೆಯೂ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈಗಾಗಲೇ ಹಲವು ಜೀವಗಳು ಬಲಿಯಾಗಿದ್ದಾರೆ. ಕೂಡಲೇ ಅವೈಜ್ನಾನಿಕ ತೋಡು ಶಾಶ್ವತವಾಗಿ ಬಂದ್ ಮಾಡಬೇಕೆಂದು ಆಗ್ರಹ ಮಾಡಿದ್ದಾರೆ.

Comments are closed.