ಕರ್ನಾಟಕ

ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಚಾಲ್ತಿ ಸಾಲಮನ್ನಾ ಗೊಂದಲ

Pinterest LinkedIn Tumblr


ಬೆಂಗಳೂರು: ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಚಾಲ್ತಿ ಸಾಲದಲ್ಲಿ 1 ಲಕ್ಷ ರೂ. ವರೆಗೆ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಘೋಷಿಸಿರುವ ಬೆನ್ನಲ್ಲೇ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿವೆ.

ಹಿಂದಿನ ಸರ್ಕಾರದಲ್ಲಿ ಘೋಷಿಸಲಾಗಿದ್ದ 50 ಸಾವಿರ ರೂ. ಮನ್ನಾ ಲಾಭ ಪಡೆದಿದ್ದರೆ ಈಗ 50 ಸಾವಿರ ರೂ. ಮಾತ್ರ ಮನ್ನಾ ಆಗಲಿದೆ ಎಂದು ಹೇಳಲಾಗಿದೆ.

ಆ ರೀತಿ ಆಗಿದ್ದೇ ಆದರೆ 2,500 ಕೋಟಿ ರೂ. ಮಾತ್ರ ಸರ್ಕಾರಕ್ಕೆ ಹೊರೆಯಾಗಲಿದೆ. 10,700 ಕೋಟಿ ರೂ. ಆಗುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಮುಖ್ಯಮಂತ್ರಿಯವರ ಕಚೇರಿಯಿಂದಲೇ 22.23 ಲಕ್ಷ ರೈತರಿಗೆ ಸಾಲ ಮನ್ನಾ ಅನುಕೂಲವಾಗಲಿದೆ ಎಂದು ತಿಳಿಸಲಾಗಿದೆ.

10,700 ಕೋಟಿ ರೂ. ಸಾಲಮನ್ನಾ ಆಗಲಿದೆ ಎಂದೂ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಣಕಾಸು ಇಲಾಖೆಯಲ್ಲೂ ಸಾಲಮನ್ನಾ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಸಹಕಾರ ಇಲಾಖೆ ಅಧಿಕಾರಿಗಳಿಗೂ ಇನ್ನೂ ಪೂರ್ಣ ಮಾಹಿತಿ ಇಲ್ಲ. ಮುಖ್ಯಮಂತ್ರಿ ಘೋಷಿಸಿರುವ ಸಾಲಮನ್ನಾದ ಮಾರ್ಗಸೂಚಿ ಹೊರಡಿಸಿದರೆ ಮಾತ್ರ ಸ್ಪಷ್ಟತೆ ಸಿಗಬಹುದು ಎಂದು ಹೇಳಲಾಗಿದೆ.

ಇಲಾಖೆಗಳ ಹಣ ಸಾಲಮನ್ನಾಗೆ?
ಸಾಲಮನ್ನಾಗೆ ಬಜೆಟ್‌ನಲ್ಲಿ 6,500 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಇದೀಗ 10,700 ಕೋಟಿ ರೂ. ಮೊತ್ತ ಸಾಲ ಮನ್ನಾ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಉಳಿದ 4,200 ಕೋಟಿ ರೂ. ಯಾವ ಬಾಬಿ¤ನಿಂದ ತುಂಬಲಾಗುವುದು ಎಂಬುದರ ಬಗ್ಗೆಯೂ ತಿಳಿಸಿಲ್ಲ.

ಹಣಕಾಸು ಇಲಾಖೆ ಮೂಲಗಳ ಪ್ರಕಾರ, ಸರ್ಕಾರದ ವಿವಿಧ ಇಲಾಖೆಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿರುವ ಮೊತ್ತ ಅಪೆಕ್ಸ್‌ ಬ್ಯಾಂಕ್‌ಗೆ ವರ್ಗಾವಣೆ ಮಾಡಿ ಅಲ್ಲಿಂದ ಆ ಹಣ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಮೂಲಕ ಸಾಲಮನ್ನಾ ಹಾಗೂ ಹೊಸ ಸಾಲ ವಿತರಣೆಗೆ ಬಳಕೆ ಮಾಡಲಾಗುವುದು. ಆ ರೀತಿಯ ಮೊತ್ತ ಸುಮಾರು 5 ಸಾವಿರ ಕೋಟಿ ರೂ. ಇದೆ ಎಂದು ಹೇಳಲಾಗುತ್ತಿದೆ.

20ಕ್ಕೆ ಬ್ಯಾಂಕ್‌ ಅಧಿಕಾರಿಗಳ ಸಭೆ:
ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಕುರಿತು ಜು.20 ರಂದು ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಯಲಿದ್ದು, ಅಂದು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

ಮಾವಿಗೆ ಬೆಂಬಲ ಬೆಲೆ ಆದೇಶ
ಬೆಂಗಳೂರು: ಮಾವು ಬೆಲೆ ಕುಸಿತ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಬೆಂಬಲ ಬೆಲೆಯಡಿ ಖರೀದಿಗೆ ಮುಂದಾಗಿರುವ ಸರ್ಕಾರ ಈ ಕುರಿತಂತೆ ಶುಕ್ರವಾರ ಆದೇಶ ಹೊರಡಿಸಿದೆ. ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ದರ
ಕುಸಿದಿರುವುದರಿಂದ ಸರ್ಕಾರ ಪ್ರತಿ ಕೆ.ಜಿ. ಮಾವಿಗೆ 2.50 ರೂ.ನಂತೆ (ಟನ್‌ಗೆ 2,500 ರೂ) ಬೆಂಬಲ ಬೆಲೆ ನೀಡಿ ಮಾವು ಖರೀದಿಸುವುದಾಗಿ ಜುಲೈ 10ರಂದು ಸದನದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಅದರಂತೆ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಮಾವು ಖರೀದಿ ಕೇಂದ್ರಗಳನ್ನು ಸ್ಥಾಪಿಸಲೂ ತೀರ್ಮಾನಿಸಲಾಗಿದೆ.

Comments are closed.