ರಾಷ್ಟ್ರೀಯ

ನಕಲಿ ವ್ಯಕ್ತಿಗೆ ಒರಿಜಿನಲ್ ಪಾಸ್‌ಪೋರ್ಟ್‌!

Pinterest LinkedIn Tumblr


ಚೆನ್ನೈ: ನಕಲಿ ಪಾಸ್‌ಪೋರ್ಟ್ ಪತ್ತೆ ಮತ್ತು ತಡೆಗೆ ಸರಕಾರ ಮತ್ತು ಭದ್ರತಾ ಏಜೆನ್ಸಿಗಳು ಕಠಿಣ ಕ್ರಮ ಕೈಗೊಳ್ಳುತ್ತಿರುವ ಬೆನ್ನಲ್ಲೇ ಅಕ್ರಮ ದಂಧೆಕೋರರು ರಂಗೋಲಿ ಕೆಳಗೆ ತೂರುತ್ತಿದ್ದು, ನಕಲಿ ವ್ಯಕ್ತಿಗೆ ಅಸಲಿ ಪಾಸ್‌ಪೋರ್ಟ್ ನೀಡುವ ಮೂಲಕ ಸಲೀಸಾಗಿ ವ್ಯವಹಾರ ನಡೆಸುತ್ತಿದ್ದಾರೆ.

ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ಇತ್ತೀಚಿಗೆ ಪಾಸ್‌ಪೋರ್ಟ್ ಅಕ್ರಮದ ದಂಧೆಯೊಂದನ್ನು ಬಯಲಿಗೆಳೆದಿದ್ದಾರೆ. ತಂತ್ರಜ್ಞಾನದ ಸಕ್ರಮ ಬಳಕೆ ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಬಳಸಿಕೊಳ್ಳುವ ದಂಧೆಕೋರರು ನಕಲಿ ವ್ಯಕ್ತಿಗೆ ಸಕ್ರಮವೆನಿಸುವ ಆಧಾರ್, ಬ್ಯಾಂಕ್ ಖಾತೆ, ವೋಟರ್ ಐಡಿ ಮತ್ತಿತರ ಅಗತ್ಯ ದಾಖಲೆಗಳನ್ನು ಸೃಷ್ಟಿಸಿ, ಅಸಲಿ ಪಾಸ್‌ಪೋರ್ಟ್ ಒದಗಿಸಿಕೊಡುತ್ತಿದ್ದಾರೆ.

ಹಿಂದೆ ನಕಲಿ ಪಾಸ್‌ಪೋರ್ಟ್ ಸೃಷ್ಟಿಸಿ, ಉದ್ಯೋಗಾಕಾಂಕ್ಷಿ, ಮತ್ತಿತರ ಉದ್ದೇಶಗಳಿಗೆ ಜನರನ್ನು ವಿದೇಶಕ್ಕೆ ಏಜೆನ್ಸಿಗಳು ಕಳುಹಿಸುತ್ತಿದ್ದವು. ಆದರೆ ಈಗ ಅಸಲಿ ಪಾಸ್‌ಪೋರ್ಟ್ ಮೂಲಕವೇ ನಕಲಿ ಜನರನ್ನು ಏಜೆನ್ಸಿಗಳು ವಿದೇಶಕ್ಕೆ ಕಳುಹಿಸುತ್ತಿವೆ.

ಹೇಗೆ ಕಾರ್ಯನಿರ್ವಹಿಸುತ್ತವೆ ಏಜೆನ್ಸಿಗಳು:

ಪಾಸ್‌ಪೋರ್ಟ್ ಬಯಸುವ ವ್ಯಕ್ತಿಯಿಂದ ಏಜೆನ್ಸಿಗಳು 3ರಿಂದ 5 ಲಕ್ಷ ರೂ. ಹಣ ಪಡೆಯುತ್ತವೆ. ನಂತರ ನಕಲಿ ಆಧಾರ್, ಮತದಾರರ ಚೀಟಿ, ವಿಳಾಸ ಪತ್ರ, ವಿದ್ಯುತ್ ಬಿಲ್, ಫೋನ್ ಬಿಲ್‌ ಇತ್ಯಾದಿ ದಾಖಲೆ ಸೃಷ್ಟಿಸಲಾಗುತ್ತದೆ. ಅಲ್ಲಿ ಪ್ರತಿ ಹಂತದಲ್ಲೂ ಪೊಲೀಸ್, ಕೆಳಹಂತದ ಸಿಬ್ಬಂದಿಗೆ ಲಂಚ ನೀಡಲಾಗುತ್ತದೆ.
ಹೀಗಾಗಿ ದಾಖಲೆ ಸಂಗ್ರಹ ಸುಲಭದಲ್ಲಿ ಸಾಧ್ಯವಾಗುತ್ತದೆ. ನಂತರ ಪಾಸ್‌ಪೋರ್ಟ್ ಪಡೆಯಲಾಗುತ್ತದೆ. ಪಾಸ್‌ಪೋರ್ಟ್ ಪಡೆಯುವ ಸಂದರ್ಭದಲ್ಲಿ ಪೊಲೀಸ್ ಪರಿಶೀಲನೆ, ಅಂಚೆ ಇಲಾಖೆ ಹೀಗೆ ಪ್ರತಿಯೊಬ್ಬರಿಗೂ ಲಂಚ ನೀಡಿ ಸುಲಭದಲ್ಲಿ ಅನುಮತಿ ಪಡೆಯಲಾಗುತ್ತದೆ.

ಪಾಸ್‌ಪೋರ್ಟ್ ಪಡೆದ ಬಳಿಕ ವಿದೇಶಿ ಏಜೆನ್ಸಿಗಳ ಸಂದರ್ಶನ ಮುಗಿಸಿ ಅವರ ಮೂಲಕ ವಿದೇಶಕ್ಕೆ ಕಳುಹಿಸಲಾಗುತ್ತದೆ. ಶ್ರೀಲಂಕಾ ತಮಿಳರ ಪೈಕಿ ಬಹುತೇಕರು ಇದೇ ಅಕ್ರಮದ ಮೂಲಕ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರು ಅಸಲಿ ಪಾಸ್‌ಪೋರ್ಟ್ ಹೊಂದಿದ್ದು, ಉಳಿದ ಎಲ್ಲವೂ ನಕಲಿಯಾಗಿರುತ್ತದೆ.
ಈ ದಂಧೆ ಸಂಬಂಧ 10 ಮಂದಿಯನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ದಂಧೆ ಕಳೆದ ಹಲವು ವರ್ಷಗಳಿಂದ ಸಕ್ರಿಯವಾಗಿದ್ದು, ಪ್ರತಿ ವರ್ಷ ನೂರಾರು ಮಂದಿಯನ್ನು ವಿದೇಶಕ್ಕೆ ಕಳುಹಿಸುತ್ತಿದೆ.

ವ್ಯವಸ್ಥೆಯಲ್ಲಿನ ಕೆಲ ಲೋಪದೋಷಗಳು, ಪಾಸ್‌ಪೋರ್ಟ್ ಪಡೆಯಲು ಇರುವ ಕೆಲವೊಂದು ಪ್ರಕ್ರಿಯೆಯಲ್ಲಿನ ಅನಾನುಕೂಲ, ಭ್ರಷ್ಟ ಅ‍ಧಿಕಾರಿಗಳನ್ನು ಸರಿಯಾಗಿ ಬಳಸಿಕೊಳ್ಳುವ ದಂಧೆಕೋರರು ನಕಲಿ ವ್ಯಕ್ತಿಗಳಿಗೆ ಅಸಲಿ ಪಾಸ್‌ಪೋರ್ಟ್ ಕೊಡಿಸುತ್ತಿದ್ದಾರೆ. ಕೆಲದಿನಗಳ ಹಿಂದೆ 3500 ರೂ. ಗೆ ಬಾಂಗ್ಲಾ ಪ್ರಜೆಗಳಿಗೆ ಭಾರತದ ಪೌರತ್ವ, ಆಧಾರ್, ವೋಟರ್ ಐಡಿ ಕೊಡಿಸುವ ಪ್ರಕರಣ ಪತ್ತೆಯಾದ ಬೆನ್ನಲ್ಲೇ, ಪಾಸ್‌ಪೋರ್ಟ್ ಅಕ್ರಮದ ಹಗರಣ ಬಯಲಾಗಿದೆ.

Comments are closed.