
ಬೆಂಗಳೂರು: ಥೈಲ್ಯಾಂಡ್ನ ಥಾಯ್ ಗುಹೆಯಲ್ಲಿ ಸಿಲುಕಿದ್ದ 12 ಬಾಲಕರು ಮತ್ತು ಕೋಚ್ ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಾಯಿತು. ಆದರೆ, ಆ ಕಡಿದಾದ ಗುಹೆಯಲ್ಲಿ ಬಾಲಕರು ಯಾವುದೇ ಭೀತಿಯಿಲ್ಲದೆ 17 ದಿನಗಳ ಕಾಲ ಧೈರ್ಯವಾಗಿ ಇದ್ದಿದ್ದು ಹೇಗೆಂಬ ಅನುಮಾನ ನಿಮ್ಮನ್ನು ಕಾಡಿಯೇ ಕಾಡಿರುತ್ತೆ. ತನ್ನೊಡನಿದ್ದ ಬಾಲಕರಿಗೆ ಧೈರ್ಯ ತುಂಬಿ ಅವರನ್ನು ಮುತುವರ್ಜಿಯಿಂದ ನೋಡಿಕೊಂಡಿದ್ದ ಕೋಚ್ ಬಗ್ಗೆ ನಿಮಗೆಷ್ಟು ಗೊತ್ತು?
ಕಳೆದೆರಡು ದಿನಗಳಿಂದ ಒಬ್ಬೊಬ್ಬರಾಗಿ ಬಾಲಕರನ್ನು ಹೊರತರುತ್ತಿದ್ದಂತೆ ಇಡೀ ದೇಶವೇ ಅತ್ತ ಕಡೆ ಗಮನವಿಟ್ಟಿತ್ತು. ಆ 12 ಬಾಲಕರನ್ನು ಹೊರಗೆ ಕಳುಹಿಸಿದ ನಂತರ ಕೊನೆಯದಾಗಿ ಹೊರಬಂದ ಕೋಚ್ ಎಕ್ಕಾಪೋಲ್ ಚಂಟಾವೊಂಗ್ ಇದೀಗ ಎಲ್ಲರ ದೃಷ್ಟಿಯಲ್ಲಿ ಹೀರೋ ಎನಿಸಿಕೊಂಡಿದ್ದಾರೆ. ಗುಹೆವಾಸದಿಂದ ಹೊರಬರುವ ತನ್ನ ಸರದಿಗಾಗಿ ಆತ ಕಾಯುತ್ತಾ ನಿಂತಿದ್ದರೆ ಹೊರಭಾಗದಲ್ಲಿ ಕಾಯುತ್ತಿದ್ದ ಜನ ಆತನನ್ನು ಹೀರೋ ಮಾಡಿಬಿಟ್ಟಿದ್ದರು.
ಬೌದ್ಧ ಭಿಕ್ಕುವಾಗಿರುವ ಫುಟ್ಬಾಲ್ ಕೋಚ್ ಎಕ್ಕಾಪೋಲ್ ರಾತ್ರೋರಾತ್ರಿ ಹೀರೋ ಎನಿಸಿಕೊಂಡಿದ್ದು ಯಾಕೆ ಗೊತ್ತಾ? ಪ್ರವಾಹದ ನೀರಿನಿಂದ ಸುತ್ತುವರಿದಿದ್ದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಬಾಲಕರನ್ನು 17 ದಿನಗಳ ಕಾಲವೂ ಬಹಳ ಜಾಗ್ರತೆಯಿಂದ ನೋಡಿಕೊಂಡ ಎಕ್ಕಾಪೋಲ್ ಅವರೆಲ್ಲರೂ ಹೊರಬರುವವರೆಗೆ ಒಳಗೆ ಬೆಂಗಾವಲಾಗಿ ಕಾದಿದ್ದರು. ಹಾಗಂತ ಎಕ್ಕಾಪೋಲ್ ಅಷ್ಟೊಂದು ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಹ ವಯಸ್ಸಿನವರೇನೂ ಅಲ್ಲ. ಕೇವಲ 25 ವರ್ಷದ ಎಕ್ಕಾಪೋಲ್ ಆ ಗುಹೆಯಲ್ಲಿದ್ದ 11ರಿಂದ 16 ವರ್ಷದೊಳಗಿನ ಬಾಲಕರಿಗಿಂತ ದೊಡ್ಡವರು ಎಂಬುದನ್ನು ಬಿಟ್ಟರೆ ಬಾಲಕರೆಲ್ಲರ ಜವಾಬ್ದಾರಿಯನ್ನು ತೆಗೆದುಕೊಂಡು ಹೊರ ಕರೆದುಕೊಂಡುಬರುವಷ್ಟು ದೊಡ್ಡವರೇನಲ್ಲ.
ಜೂನ್ 23ರಂದು ಥಾಯ್ ಗುಹೆಯನ್ನು ಹೊಕ್ಕ ಈ 13 ಜನರಲ್ಲಿ ಎಕ್ಕಾಪೋಲ್ ಒಬ್ಬರೇ ವಯಸ್ಕರು. ಅದಾದ 9 ದಿನಗಳ ಬಳಿಕ ಗುಹೆಯೊಳಗೆ ಪತ್ತೆಯಾದರೂ ಆ 9 ದಿನಗಳು ಆಹಾರ, ನೀರಿಲ್ಲದೆ, ಸರಿಯಾಗಿ ಉಸಿರಾಡಲು ಗಾಳಿಯೂ ಇಲ್ಲದೆ ಹೇಗೆ ಬದುಕಿದ್ದರು ಎಂಬ ಆಶ್ಚರ್ಯ ಕಾಡುವುದು ಸಹಜ. ಎಕ್ಕಾಪೋಲ್ ಬೌದ್ಧ ಭಿಕ್ಕುವಾಗಿದ್ದರಿಂದ ಧ್ಯಾನ, ಉಸಿರಿನ ಮೇಲಿನ ಹಿಡಿತವನ್ನು ಕಲಿಸಿ ಬಾಲಕರನ್ನು ಬಚಾವ್ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಪೋಷಕರಿಗೆ ಪತ್ರ ಬರೆದಿದ್ದ ಎಕ್:
ಡೈವರ್ ಬಳಿ ಪತ್ರವೊಂದನ್ನು ಕೊಟ್ಟು ಕಳುಹಿಸಿದ್ದ ಎಕ್ಕಾಪೋಲ್, ಮಕ್ಕಳನ್ನು ಗುಹೆಯೊಳಗೆ ಕರೆದುಕೊಂಡು ಹೋಗಿದ್ದಕ್ಕೆ ಕ್ಷಮಾಪಣೆ ಕೋರಿದ್ದರು. ಅದಕ್ಕೆ ಜುಲೈ 7ರಂದು ಇನ್ನೊಂದು ಪತ್ರ ಕೊಟ್ಟು ಕಳುಹಿಸಿದ್ದ ಪೋಷಕರು, ‘ಎಲ್ಲ ಮಕ್ಕಳನ್ನೂ ಜಾಗ್ರತೆಯಿಂದ ನೋಡಿಕೊಳ್ಳಿ. ಯಾರೊಬ್ಬರ ಪ್ರಾಣಕ್ಕೂ ಅಪಾಯವಾಗದಂತೆ ಎಚ್ಚರವಹಿಸಿ. ಹಾಗೇ, ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ. ಧೈರ್ಯವಾಗಿರಿ’ ಎಂದು ಹೇಳಿದ್ದರು.
ಇಡೀ ಜಗತ್ತೇ ಭೇಷ್ ಎನ್ನುವಂತೆ ಮಾಡಿರುವ ಎಕ್ಕಾಪೋಲ್, 10ನೇ ವರ್ಷಕ್ಕೆ ಬೌದ್ಧ ಭಿಕ್ಕುವಾಗಲು ಮನೆ ಬಿಟ್ಟವರು. ಆದರೆ, ಪೂರ್ಣ ಪ್ರಮಾಣದ ಭಿಕ್ಕುವಾಗುವ ಮುನ್ನವೇ ತನ್ನ ಅಜ್ಜಿಯನ್ನು ನೋಡಿಕೊಳ್ಳುವ ಸಲುವಾಗಿ ಮತ್ತೆ ವಾಪಾಸು ಮನೆಗೆ ಹೋದರು. ಆನಂತರ ವೈಲ್ಡ್ ಬೋರ್ನಲ್ಲಿ ಅರೆಕಾಲಿಕ ಫುಟ್ಬಾಲ್ ಕೋಚ್ ಆಗಿ ಸೇರಿಕೊಂಡರು. ಧ್ಯಾನ, ಟ್ರೆಕ್ಕಿಂಗ್ ಮತ್ತು ಹೊರಾಂಗಣದ ಜೀವನಶೈಲಿಗೆ ಒಗ್ಗಿಕೊಂಡಿದ್ದ ಎಕ್ಕಾಪೋಲ್ ಆ ಕಾರಣದಿಂದಲೇ 17 ದಿನಗಳ ಕಾಲ ತಾನೂ ಬದುಕುಳಿದು, ತನ್ನ ತಂಡದ ಬಾಲಕರನ್ನೂ ಬದುಕಿಸಲು ಸಾಧ್ಯವಾಯಿತು.
Comments are closed.