ತುಳುಭಾಷೆ ಮತ್ತು ಕಲಾಸೇವೆಯಿಂದ ಸಮಾಜ ಋಣದಿಂದ ಮುಕ್ತರಾಗ ಬಹುದು : ಲಕ್ಷ್ಮೀ ನಾರಾಯಣ ಆಸ್ರಣ್ಣ

ಮಂಗಳೂರು: ‘ಮನುಷ್ಯನಾಗಿ ಹುಟ್ಟಿದ ಮೇಲೆ ಮೂರು ಋಣಗಳಿಂದ ಮುಕ್ತರಾಗಬೇಕು ದೇವಋಣ, ಪಿತೃ ಋಣ ಮತ್ತು ಸಮಾಜ ಋಣ; ದೇವರ ಮತ್ತು ಪಿತೃಗಳ ಸೇವೆ ಮತ್ತು ಆರಾಧನೆಯಿಂದ ಋಣಮುಕ್ತರಾದರೆ ನಾವು ತುಳುನಾಡಿಗರು ತುಳುಭಾಷೆ ಮತ್ತು ಕಲಾಸೇವೆಯಿಂದ ಸಮಾಜ ಋಣದಿಂದ ಮುಕ್ತರಾಗ ಬಹುದು ‘ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಪ್ರಧಾನ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಹೇಳಿದರು.
ಮಂಗಳೂರು ತುಳುಭವನದ ಸಿರಿಚಾವಡಿಯಲ್ಲಿ ನಡೆದ ‘ತುಳುನಾಡು ಯಕ್ಷಯಾನ ಫೌಂಡೇಶನ್ ಕುಡ್ಲ’ ಪ್ರಾಯೋಜಿಸುವ ‘ರಾಷ್ಟ್ರೀಯ ತುಳು ಯಕ್ಷಯಾನ – 2018’ ಇದರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ತುಳುನಾಡಿನಲ್ಲಿ ತುಳುಭಾಷೆಯ ಬೆಳವಣಿಗೆಗೆ ತುಳುಭಾಷೆ, ಸಾಹಿತ್ಯ,ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಅತೀ ಅಗತ್ಯವಾಗಿದೆ. ಭಾಷೆ, ಸಾಹಿತ್ಯ ಮತ್ತು ಜನಪದ ಸಂಸ್ಕೃತಿಯ ಒಟ್ಟು ರೂಪವೇ ನಮ್ಮ ತುಳುನಾಡಿನ ಯಕ್ಷಗಾನ(ಆಟ). ಆದರೆ ಇಂದು ಯಕ್ಷಗಾನವು ತುಳುಭಾಷೆಯಿಂದ ತುಂಬಾ ದೂರವಾದಂತಿದೆ. ಹಾಗೆಯೇ ತುಳುಭಾಷೆಯ ಯಕ್ಷಗಾನಗಳು ತುಂಬಾ ಕಡಿಮೆಯಾಗುತ್ತಿವೆ. ಅಲ್ಲದೆ ಕೇವಲ ಹಾಸ್ಯಕ್ಕೆ ಮಾತ್ರ ಇದು ಸೀಮಿತಗೊಳ್ಳುತ್ತಿದೆ.
ಯಕ್ಷಗಾನಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು, ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದೊರಕುವ ಪಿಂಚಣಿ, ಸಂಬಳ ಹಾಗೂ ಇನ್ನಿತರ ಸಹಾಯ- ಸೌಲಭ್ಯಗಳನ್ನು ಯಕ್ಷಗಾನ ಕಲಾವಿದರಿಗೆ ಲಭಿಸುವಂತೆ ಪ್ರಯತ್ನಿಸುವುದು, ಯಕ್ಷಗಾನ ಕಲಾವಿದ ಮತ್ತು ಕಲಾವಿದ ನೌಕರರನ್ನು ಉದ್ಯೊಗ ಖಾತ್ರಿ ಯೋಜನೆಯಡಿ ತರುವುದು, ಪೌರಾಣಿಕ ಹಾಗೂ ಚಾರಿತ್ರಿಕ ಆಟಗಳು, ಯಕ್ಷಗಾನದ ಸಾಹಿತ್ಯ ಛಂದಸ್ಸುಗಳು ತುಳುಭಾಷೆಯಲ್ಲಿಯೂ ಬರಬೇಕು ಎನ್ನುವ ಉದ್ದೇಶದಿಂದ ‘ತುಳುನಾಡು ಯಕ್ಷಯಾನ ಫೌಂಡೇಶನ್ ಕುಡ್ಲ’ ಎಂಬ ಸಂಘಟನೆಗೆ ರೂಪುನೀಡಲಾಗಿದೆ.
ಇದರ ಪ್ರಥಮ ಹೆಜ್ಜೆಯಾಗಿ ‘ರಾಷ್ಟ್ರೀಯ ತುಳು ಯಕ್ಷಯಾನ – 2018′ ಎಂಬ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆಯೋಜಿಸಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ತುಳು ಯಕ್ಷಗಾನ ಪ್ರದರ್ಶನದ ತಿರುಗಾಟವನ್ನು ನಡೆಸಬೇಕೆಂದು ತೀರ್ಮಾನಿಸಲಾಗಿದೆ’ ಎಂದು ಯಕ್ಷಗಾನ ಕಲಾವಿದ ಮತ್ತು ಸಂಘಟಕ ಸರಪಾಡಿ ಆಶೋಕ್ ಶೆಟ್ಟಿ ಪ್ರಾಸ್ತಾವಿಕವಾಗಿ ನುಡಿದರು.
*ರಾಷ್ಟ್ರವ್ಯಾಪಿ ಅಭಿಯಾನ*:
ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿ ಹಾಗೂ ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಯಕ್ಷಗಾನವನ್ನು ರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಈ ಕಾರ್ಯ ಅತ್ಯಂತ ಶ್ಲಾಘನೀಯ. ರಾಷ್ಟ್ರವ್ಯಾಪಿ ಅಭಿಯಾನದ ಮೂಲಕ ತುಳುನಾಡಿನ ಸಾಂಸ್ಕೃತಿಕ ಸಿರಿವಂತಿಕೆಯನ್ನು ಇತರ ರಾಜ್ಯಗಳಿಗೆ ಪರಿಚಯಿಸುವ ಯೋಜನೆಯಿಂದ ತುಳು ಭಾಷೆಯ ಸಂವರ್ಧನೆ ಮತ್ತು ಸಾಂವಿಧಾನಿಕ ಮಾನ್ಯತೆಗೆ ಸಹಕಾರಿಯಾಗಲಿದೆ ‘ಎಂದರು. ಸಭೆಯಲ್ಲಿ ಮಂಗಳಾದೇವಿ ಮೇಳದ ಸಂಚಾಲಕ ಎಸ್.ಎ. ವರ್ಕಾಡಿ, ತುಳು ಆಕಾಡೆಮಿ ಸದಸ್ಯ ಎ.ಶಿವಾನಂದ ಕರ್ಕೇರ, ಸಂಘಟಕ ಡಾ. ರಾಜೇಶ ಆಳ್ವ ಬದಿಯಡ್ಕ ಮೊದಲಾದವರು ಮಾತನಾಡಿದರು.
ಯಕ್ಷಗಾನ ಕಲಾವಿದ ದೀನೇಶ್ ರೈ ಕಡಬ ಸ್ವಾಗತಿಸಿ, ಸಂಜಯ ಕುಮಾರ್ ಶೆಟ್ಟಿ, ಗೋಣಿಬೀಡು ವಂದಿಸಿದರು.
*ಸಮಿತಿ ರಚನೆ*:
‘ರಾಷ್ಟ್ರೀಯ ತುಳು ಯಕ್ಷಯಾನ ಕುಡ್ಲ ‘ ಇದರ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಒಡಿಯೂರು ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಅಧ್ಯಕ್ಷರಾಗಿ ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರಾಗಿ ಭಾಸ್ಕರ ರೈ ಕುಕ್ಕುವಳ್ಳಿ , ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಶೆಟ್ಟಿ, ಎಸ್. ಎ ವರ್ಕಾಡಿ ಮತ್ತು ಚಿದಾನಂದ ಶೆಟ್ಟಿ; ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಕಾರ್ಯದರ್ಶಿಗಳಾಗಿ ಪ್ರಸಾದ್ ಕೊಂಚಾಡಿ, ಮಧುಸೂಧನ ಅಲೆವೂರಾಯ; ಪ್ರಧಾನ ಸಂಚಾಲಕರಾಗಿ ಸರಪಾಡಿ ಅಶೋಕ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಡಾ. ರಾಜೇಶ್ ಆಳ್ವ ಬದಿಯಡ್ಕ, ಸಹಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಮಂಗಲ್ಪಾಡಿ, ಕೋಶಾಧಿಕಾರಿಯಾಗಿ ಕಡಬ ದಿನೇಶ್ ರೈ, ಸಹ ಸಂಚಾಲಕರಾಗಿ ಸಿ.ಕೆ. ಪ್ರಶಾಂತ್,ಪ್ರತಾಪ ಶೆಟ್ಟಿ, ಭೂಷಣ್ ಕುಲಾಲ್, ನಾಗರಾಜ್ ಕುದ್ರೋಳಿ, ಕೋಡಪದವು, ರಾಹುಲ್ ಶೆಟ್ಟಿ ಕುಡ್ಲ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ; ಸಲಹಾ ಮಂಡಳಿ ಸದಸ್ಯರಾಗಿ ಎ.ಸಿ. ಭಂಡಾರಿ, ಪಿ.ರಮಾನಾಥ ಹೆಗ್ಡೆ, ಹರಿಕೃಷ್ಣ ಪುನರೂರು, ದಾಮೋದರ ನಿಸರ್ಗ, ಎ.ಶಿವಾನಂದ ಕರ್ಕೇರ, ಕದ್ರಿ ನವನೀತ ಶೆಟ್ಟಿ,ಜಗದೀಶ ಶೆಟ್ಟಿ ಫಜೀರು, ವಿಕ್ರಮ್ ಶೆಟ್ಟಿ ಸರಪಾಡಿ, ಎಮ್. ಎಸ್. ಶೆಟ್ಟಿ ಸರಪಾಡಿ, ಜೆ.ವಿ ಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.ಅಲ್ಲದೆ ಮಹಿಳೆಯರನ್ನೂ ಒಳಗೊಂಡಂತೆ 50ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಮಾಡಲಾಯಿತು.
Comments are closed.