ಕರಾವಳಿ

ಮಂಗಳೂರಿನ ಕುರುಬರ ಸಂಘದ “ಕನಕಭವನ”ಕ್ಕೆ ಮಾಜಿ ಸಿ.ಎಂ ಸಿದ್ದರಾಮಯ್ಯ ಭೇಟಿ :ಮುಖಂಡರೊಂದಿಗೆ ಸಮಾಲೋಚನೆ

Pinterest LinkedIn Tumblr

ಮಂಗಳೂರು, ಜೂನ್.29: ಕಳೆದ ಕೆಲವು ದಿನಗಳಿಂದ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಚಿಕಿತ್ಸೆ ಗುರುವಾರ ಮುಗಿದ ಹಿನ್ನೆಲೆಯಲ್ಲಿ ಅವರು ನಿನ್ನೆ ಧರ್ಮಸ್ಥಳ ಮಂಜುನಾಥೇಶ್ವರ ದರ್ಶನ ಮಾಡಿ ಬಳಿಕ ನಗರದ ಕಾವೂರು ಶಾಂತಿ ನಗರದಲ್ಲಿ ಕುರುಬರ ಸಂಘದಿಂದ ನಿರ್ಮಿಸಲಾಗಿರುವ ಕನಕಭವನಕ್ಕೆ ಭೇಟಿ ನೀಡಿದರು.

ಗುರುವಾರ ಬೆಳಗ್ಗೆ ಪ್ರಕೃತಿ ಚಿಕಿತ್ಸೆ ಕೇಂದ್ರದಿಂದ ಡಿಸ್ಚಾರ್ಜ್ ಆಗಿದ್ದ ಅವರು ಬಳಿಕ ಧರ್ಮಸ್ಥಳ ಮಂಜುನಾಥೇಶ್ವರ ಕ್ಷೇತ್ರದಲ್ಲಿ ದರ್ಶನ ಪಡೆದರು. ಅಲ್ಲದೆ ಮಂಗಳೂರಿನ ಸರ್ಕ್ಯೂಟ್ ಹೌಸ್​ನಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳೊಂದಿಗೆ ಮಾತುಕತೆ ನಡೆಸಿದ್ದರು.

ಬಳಿಕ ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಮುಗಿಸಿ ಬೆಂಗಳೂರಿಗೆ ಹಿಂತಿರುಗುವ ಸಂದರ್ಭ ಕಾವೂರಿನಲ್ಲಿ ಕನಕ ಭವನಕ್ಕೆ ತೆರಳಿ ಕಟ್ಟಡ ವೀಕ್ಷಿಸಿ ಕುರುಬ ಸಮುದಾಯದ ಮುಖಂಡರೊಂದಿಗೆ ಕೆಲ ಸಮಯ ಕಳೆದರು.

ಕುರುಬರ ಭವನದಲ್ಲಿ ಸುಮಾರು ಒಂದು ಗಂಟೆ ಕಾಲ ಕಳೆದ ಸಿದ್ದರಾಮಯ್ಯ ಅವರು ಸಂಘವು ಇಲ್ಲಿ ನಡೆಸುತ್ತಿರುವ ಚಟುವಟಿಕೆಗಳ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ ಕುರುಬ ಸಮುದಾಯದ ಮಹಿಳೆ, ಸಿದ್ದರಾಮಯ್ಯನವರ ಹಿತೈಷಿ ಡಾ ವನಿತಾ, ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಕುರುಬ ಸಮುದಾಯ ಗುರುತಿಸಲ್ಪಟ್ಟಿದೆ. ಅದಕ್ಕಾಗಿ ನಮಗೆ ಹೆಮ್ಮೆಯಿದೆ ಎಂದರು.

ಈ ಸಂದರ್ಭದಲ್ಲಿ ಹಲವು ಕುರುಬ ಸಮುದಾಯದವರು ಸಿದ್ದರಾಮಯ್ಯ ಅವರ ಜೊತೆ ಫೋಟೋ ತೆಗೆಸಿಕೊಂಡರೆ, ಸಮುದಾಯದ ಮುಖಂಡರು ಅವರ ಗುಣಗಾನ ಮಾಡಿದರು.

ಈ ಸಂದರ್ಭ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಲು ನಿರಾಕರಿಸಿದ ಅವರು, ”ನಾನು ಚಿಕಿತ್ಸೆಗಾಗಿ ಬಂದಿದ್ದೆ. ಅದನ್ನು ಮುಗಿಸಿ ಹೊರಟಿರುವೆ. ಸುದ್ದಿ ಕೊಡಬೇಕಾದರೆ ನಾನೇ ನಿಮ್ಮನ್ನು ಕರೆಯುತ್ತೇನೆ” ಎಂದು ಹೇಳಿದರು.

ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಮೊಯ್ದಿನ್ ಬಾವಾ ಹಾಗೂ ಮತ್ತಿತ್ತರ ಮುಖಂಡರು ಉಪಸ್ಥಿತರಿದ್ದರು.

ಕಳೆದ 12 ದಿನಗಳ ಕಾಲ ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಂಡ ಸಿದ್ದರಾಮಯ್ಯ ಸಂಜೆ 7 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

Comments are closed.