
ವೆಲ್ಲಿಂಗ್ಟನ್: ಹೈನುಗಾರಿಕೆಯನ್ನು ಮುಖ್ಯ ಉದ್ದಿಮೆಯಾಗಿ ಹೊಂದಿರುವ ನ್ಯೂಜಿಲೆಂಡ್ ದೇಶ ತನ್ನ ಹೈನೋದ್ಯಮಕ್ಕೆ ಪೆಟ್ಟು ನೀಡುತ್ತಿರುವ ಬ್ಯಾಕ್ಟೀರಿಯಾವೊಂದನ್ನು ಸಂಪೂರ್ಣವಾಗಿ ನಾಶಪಡಿಸಲು 1.5 ಲಕ್ಷ ಹಸುಗಳನ್ನು ಕೊಲ್ಲಲು ಮುಂದಾಗಿದೆ.
ಒಂದರಿಂದ ಎರಡು ವರ್ಷದ ಅವಧಿಯಲ್ಲಿ ಇಷ್ಟುಹಸುಗಳನ್ನು ಕೊಲ್ಲಲು ಸರ್ಕಾರ ಯೋಜನೆ ರೂಪಿಸಿದೆ. ಈಗಾಗಲೇ 24 ಸಾವಿರ ಹಸುಗಳನ್ನು ಕೊಲ್ಲಲಾಗಿದೆ. ದೇಶದಲ್ಲಿರುವ 38 ಫಾಮ್‌ರ್‍ಗಳಲ್ಲಿ ಮೈಕೋ ಪ್ಲಾಸ್ಮಾ ಬೋವಿಸ್ ಎಂಬ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, ಇದು ಸುಮಾರು 140 ಫಾಮ್‌ರ್‍ಗಳಿಗೆ ಹರಡಿಸುವ ಸಾಧ್ಯತೆಯಿದೆ. ಆ ಎಲ್ಲಾ ಫಾಮ್‌ರ್‍ಗಳಲ್ಲಿರುವ ಎಲ್ಲಾ ಹಸುಗಳನ್ನೂ, ಅವುಗಳಲ್ಲಿ ಆರೋಗ್ಯವಂತ ಹಸುಗಳಿದ್ದರೆ ಅವುಗಳನ್ನೂ, ಕೊಲ್ಲಲು ನಿರ್ಧರಿಸಲಾಗಿದೆ.
ಸರ್ಕಾರ ಹಾಗೂ ಹೈನೋದ್ದಿಮೆ ಸಂಘದವರು ಸೋಮವಾರ ಈ ನಿರ್ಧಾರ ಪ್ರಕಟಿಸಿದ್ದಾರೆ. ಅಮೆರಿಕ ಮತ್ತು ಯುರೋಪ್‌ನಲ್ಲಿ ಸಾಮಾನ್ಯವಾಗಿ ಹಸುಗಳನ್ನು ಬಾಧಿಸುವ ಮೈಕೋಪ್ಲಾಸ್ಮಾ ಬೋವಿಸ್ ಬ್ಯಾಕ್ಟೀ ರಿಯಾ ನ್ಯೂಜಿಲೆಂಡ್‌ನಲ್ಲಿ ಕಳೆದ ವರ್ಷ ಮೊದಲ ಬಾರಿ ಪತ್ತೆಯಾಗಿದೆ. ಅದರಿಂದ ಹಸುಗಳಿಗೆ ಕೆಚ್ಚಲು ಬಾವು, ನ್ಯುಮೋನಿಯಾ, ಸಂಧಿವಾತ ಹಾಗೂ ಇನ್ನೂ ಅನೇಕ ರೋಗಗಳು ಬಾಧಿಸುತ್ತವೆ. ಆಹಾರ ಭದ್ರತೆಗೆ ಅಥವಾ ಮನುಷ್ಯರಿಗೆ ಇದರಿಂದ ತೊಂದರೆ ಇಲ್ಲವಾದರೂ ಡೈರಿ ಉದ್ದಿಮೆಗೆ ಇದು ನಷ್ಟಉಂಟುಮಾಡುತ್ತದೆ. ಹೀಗಾಗಿ ಈ ಬ್ಯಾಕ್ಟೀರಿಯಾಪೀಡಿತ ಫಾಮ್‌ರ್‍ಗಳಲ್ಲಿರುವ ಎಲ್ಲಾ ಹಸುಗಳನ್ನೂ ಕೊಂದು ನ್ಯೂಜಿಲೆಂಡನ್ನು ಮೈಕೋಪ್ಲಾಸ್ಮಾ ಬೋವಿಸ್ ಬ್ಯಾಕ್ಟೀರಿಯಾಮುಕ್ತ ದೇಶವನ್ನಾಗಿ ಮಾಡಲು ನಿರ್ಧರಿಸಲಾಗಿದೆ.
ನ್ಯೂಜಿಲೆಂಡ್ ಸುಮಾರು 50 ಲಕ್ಷ ಜನಸಂಖ್ಯೆ ಹೊಂದಿದ್ದು, 1 ಕೋಟಿ ಹಸುಗಳನ್ನು ಹೊಂದಿದೆ. ಮುಖ್ಯವಾಗಿ ಇಲ್ಲಿನ ಹೈನೋತ್ಪನ್ನಗಳು ಚೀನಾಕ್ಕೆ ರಫ್ತಾಗುತ್ತವೆ. ಮೈಕೋಪ್ಲಾಸ್ಮಾ ಬ್ಯಾಕ್ಟೀರಿಯಾಪೀಡಿತ ಫಾಮ್‌ರ್‍ಗಳಲ್ಲಿರುವ ಆರೋಗ್ಯವಂತ ಹಸುಗಳನ್ನು ಕಸಾಯಿಖಾನೆಗಳಲ್ಲಿ ಕೊಂದು ಮಾಂಸಕ್ಕೆ ಬಳಸಲಾಗುತ್ತದೆ. ಬ್ಯಾಕ್ಟೀರಿಯಾದಿಂದ ಅನಾರೋಗ್ಯಕ್ಕೊಳಗಾದ ಹಸುಗಳನ್ನು ಕೊಂದು ಹೂಳಲಾಗುತ್ತದೆ. ಇದಕ್ಕೆ ನ್ಯೂಜಿಲೆಂಡ್ ಸುಮಾರು 4200 ಕೋಟಿ ರು. ಖರ್ಚು ಮಾಡಲಿದೆ! ರೋಗಪೀಡಿತ ಫಾರ್ಮ್ ಮಾಲೀಕ ರೈತರು ತಮ್ಮ ಹಸುಗಳನ್ನು ಕೊಲ್ಲಲು ಬಿಡದಿದ್ದರೆ ಬಲವಂತವಾಗಿ ಹಸುಗಳನ್ನು ಸರ್ಕಾರ ವಶ ಪಡಿಸಿಕೊಂಡು ಕೊಲ್ಲಲಿದೆ. ಅದಕ್ಕೆ ಪರಿಹಾರವನ್ನೂ ನೀಡಲಿದೆ.
Comments are closed.