ಕರ್ನಾಟಕ

ಮುಖ್ಯಮಂತ್ರಿ ಕುಮಾರಸ್ವಾಮಿಯ ಪ್ರಥಮ ಜನತಾ ದರ್ಶನ!

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಇಂದು (ಮಂಗಳವಾರ) ತಮ್ಮ ಕಚೇರಿ ಕೃಷ್ಣಾದಲ್ಲಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಜನತಾ ದರ್ಶನ ನಡೆಸಿದರು.

ಹಿರಿಯ ನಾಗರಿಕರು ನಿವೇಶನ, ಮಾಸಾಶನಕ್ಕಾಗಿ ಮನವಿ ಸಲ್ಲಿಸಿದರು. ಯುವ ವರ್ಗ ಉದ್ಯೋಗಕ್ಕಾಗಿ ಮನವಿ ಸಲ್ಲಿಸಿತು. ಇನ್ನು ಕುಮಾರಸ್ವಾಮಿ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ್ದ ಜನತಾ ದರ್ಶನದಲ್ಲಿ ಪರಿಹಾರ ಕಂಡು ಕೊಂಡವರು ಅವರನ್ನು ಭೇಟಿಯಾಗಿ ಅಭಿನಂದನೆಗಳನ್ನೂ ಸಲ್ಲಿಸಿದರು.

ಅತಿಥಿ ಸತ್ಕಾರ
ಜನತಾ ದರ್ಶನಕ್ಕೆ ಅಹವಾಲು ಹಿಡಿದು ಬರುವ ನಾಗರಿಕರನ್ನು ಇದೇ ಮೊದಲ ಬಾರಿಗೆ ಅತಿಥಿಗಳಂತೆ ಸತ್ಕರಿಸಲಾಯಿತು. ಮಜ್ಜಿಗೆ, ಬಿಸ್ಕೆಟ್​ ನೀಡಿ ಜನರಿಗೆ ಅಧಿಕಾರಿಗಳು ಉಪಚರಿಸಿದರು.

ಚಿಕಿತ್ಸೆ ವೆಚ್ಚ ನೋಡಿಕೊಳ್ಳುತ್ತೇನೆ
ರಾಜಾಜಿನಗರದಿಂದ ಬಂದ ಮಹಿಳೆಯೊಬ್ಬರು ತಮ್ಮ ಪತಿಗೆ ಕ್ಯಾನ್ಸರ್ ಬಂದಿರುವುದಾಗಿಯೂ, ನೆರವು ನೀಡಬೇಕಾಗಿಯೂ ಕೋರಿದರು. ಕುಮಾರಸ್ವಾಮಿ ಅವರು ನಾನು ನೆರವು ಕಲ್ಪಿಸುತ್ತೇನೆ ಎಂದು ಭರವಸೆ ನೀಡಿದರು. ಇದರಿಂದ ಮಹಿಳೆ ಮುನಿಯಮ್ಮ ಸಂತಸಪಟ್ಟರು.

ನಾನೇ ಓದಿಸುತ್ತೇನೆ
ಗ್ರಾಮ ಸಹಾಯಕ ಹುದ್ದೆ ಪರೀಕ್ಷೆ ಬರೆದು, ಕೆಲಸಕ್ಕೆ ಆಯ್ಕೆಯಾಗಿಯೂ ಕಡೆ ಹಂತದಲ್ಲಿ ನೌಕರಿಯಿಂದ ವಂಚಿತರಾಗಿದ್ದ ಚನ್ನಪಟ್ಟಣದ ಸಂಗೀತಾ ಎಂಬುವವರು ನೌಕರಿ ವಿಚಾರವಾಗಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕೂಡಲೇ ರಾಮನಗರ ಜಿಲ್ಲಾಧಿಕಾರಿಗೆ ಕರೆ ಮಾಡಿದ ಸಿಎಂ ಮಾಹಿತಿ ಪಡೆದರು. ಇನ್ನೂ 18 ತುಂಬದ ಕಾರಣಕ್ಕೆ ಕೆಲಸಕ್ಕೆ ಆಯ್ಕೆಯಾಗಿಲ್ಲ ಎಂದು ರಾಮನಗರ ಜಿಲ್ಲಾಧಿಕಾರಿ ಸಿಎಂಗೆ ತಿಳಿಸಿದರು. ನಂತರ ಸಂಗೀತ ಪಾಲಕರೊಂದಿಗೆ ಮಾತನಾಡಿದ ಸಿಎಂ, ಸಂಗೀತಾ ಇನ್ನೂ ಓದಲಿ. ವಿದ್ಯಾಭ್ಯಾಸದ ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು.

ಹಿರಿಯ ನಾಗರಿಕರಿಗೆ ಸಹಾಯ ಮಾಡಿ
ಮಾಸಾಶನ ಹೆಚ್ಚಳ, ನಿವೇಶನ ಸೌಲಭ್ಯ, ರಿಯಾಯ್ತಿ ಬಸ್ ಪಾಸ್ ನೀಡುವಂತೆ ವಿಜಯಪುರದಿಂದ ಬಂದಿದ್ದ ಹಿರಿಯ ನಾಗರಿಕರು ಮನವಿ ಮಾಡಿದರು. ಮುಖ್ಯಮಂತ್ರಿಗಳೂ ಸಕಾರಾತ್ಮಕವಾಗಿ ಸ್ಪಂದಿಸಿದರು.

ಕಾಯಿರಿ, ನೀವೇಶನ ಒದಗಿಸುತ್ತೇನೆ
ಕುಣಿಗಲ್ ಮೂಲದ ಗೋವಿಂದಪ್ಪ ಎಂಬುವವರು ನನಗೊಂದು ನಿವೇಶನ ಒದಗಿಸುವಂತೆ ಮನವಿ ಮಾಡಿದರು. ಅಲ್ಲದೆ, 5 ಮುಖ್ಯಮಂತ್ರಿಗಳ ಬಳಿ ಸಹಾಯ ಕೇಳಿದ್ದೇನೆ. ಯಾರು ಸಹಾಯ ಮಾಡಿಲ್ಲ. ನೀವಾರೂ ಸಹಾಯ ಮಾಡಿ ಎಂದು ಕೇಳಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಎರಡ್ಮೂರು ದಿನ ಕಾಯಿರಿ ಎಂದು ಭರವಸೆ ನೀಡಿದರು.

ಜನತಾದರ್ಶನ ಫಲಾನುಭವಿಯಿಂದ ಉಡುಗೊರೆ
2006ರಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಜನತಾದರ್ಶನದ ಮೂಲಕ ಉದ್ಯೋಗ ಪಡೆದಿದ್ದ ಸರಿತಾ ಎಂಬ ಮಹಿಳೆ ಇಂದಿನ ಜನತಾದರ್ಶನಕ್ಕೆ ಆಗಮಿಸಿ ಮುಖ್ಯಮಂತ್ರಿಗೆ ಗಣೇಶನ ಮೂರ್ತಿಯ ಉಡುಗೊರೆ ನೀಡಿದರು.
ಇದೆಲ್ಲದರ ನಡುವೆ ಹಲವರು ಕಚೇರಿ ಕೃಷ್ಣಾ ಬಳಿ ಆಗಮಿಸಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರಿಗೆ ಶುಭಾಶಯ ಕೋರುತ್ತಿದ್ದರು. ಚಲನಚಿತ್ರ ಮಂಡಳಿ ಅಧ್ಯಕ್ಷ ಸಾ ರಾ.ಗೋವಿಂದು ಮತ್ತು ಪಧಾದಿಕಾರಿಗಳು ಸಿಎಂಗೆ ಸನ್ಮಾನ ಮಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಕೂಡ ಶುಭ ಕೋರಿದರು.

Comments are closed.