
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ರಚನೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಕರಾಳ ದಿನವನ್ನಾಗಿ ಆಚರಿಸುತ್ತಿದ್ದು, ಪಕ್ಷದ ಪ್ರಮುಖರು ಮೈತ್ರಿ ಸರ್ಕಾರದ ವಿರುದ್ಧ ವಾಗ್ಬಾಣಗಳ ಸುರಿಮಳೆಗೈದಿದ್ದಾರೆ.
ಮೈತ್ರಿಯನ್ನು ಯಾವ ಗುಂಪಿಗೆ ಸೇರಿಸೋದು
ನಾವು ಲೌ ಮ್ಯಾರೇಜ್, ಅರೇಂಜ್ ಮ್ಯಾರೇಜ್ ಬಗ್ಗೆ ಕೇಳಿದ್ದೆವು. ಈಗ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ಯಾವ ಗುಂಪಿಗೆ ಸೇರಿಸೋದು ಎಂದು ಅಬ್ದುಲ್ ಅಜೀಮ್ ವ್ಯಂಗ್ಯವಾಡಿದ್ದಾರೆ.
ಬೃಂದಾವನದಲ್ಲಿ ರಾಯರೇ ಇಲ್ಲ
ಮೋದಿ ಎಂಬ ಸಿಂಹವನ್ನು ಅಡ್ಡಗಟ್ಟಲು ನಾಯಿ ನರಿ ತಿಗಣೆಗಳೆಲ್ಲಾ ಹೇಗೆ ಒಂದಾಗಿವೆ ಅಂತಾ ಗೊತ್ತಿದೆಯಲ್ಲಾ. ಮೂರು ತಿಂಗಳಲ್ಲಿ ಈ ಸರ್ಕಾರ ಬಿದ್ದು ಹೋಗಲಿಲ್ಲ ಅಂದರೆ ಬೃಂದಾವನದಲ್ಲಿ ರಾಯರೇ ಇಲ್ಲ ಎಂದಂತಾಗುತ್ತದೆ ಎಂದು ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಟಿಎಂ ಉಳಿಸಿಕೊಳ್ಳಲು ಅಪವಿತ್ರ ಮೈತ್ರಿ
ಜನರು ಕಾಂಗ್ರೆಸ್ ಮತ್ತು ಜೆಡಿಎಸ್ನ್ನು ತಿರಸ್ಕರಿಸಿ ಮನೆಗೆ ಕಳುಹಿಸಿದ್ದರು. ಆದರೆ, ಯಡಿಯೂರಪ್ಪನವರು ಅಧಿಕಾರಕ್ಕೆ ಬರಬಾರದು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿವೆ. ಕರ್ನಾಟಕ ಕಾಂಗ್ರೆಸ್ಗೆ ಎಟಿಎಂ ಕಾರ್ಡ್ ಆಗಿತ್ತು. ಆ ಎಟಿಎಂ ಉಳಿಸಿಕೊಳ್ಳಲು ಅಪವಿತ್ರ ಮೈತ್ರಿ ಮಾಡಿಕೊಂಡಿದೆ. ಕೇವಲ ಶೇಕಡಾ 18 ರಷ್ಟು ಮತ ಪಡೆದು 64 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಜೆಡಿಎಸ್ ಅಧಿಕಾರ ನಡೆಸಲು ಮುಂದಾಗಿದೆ ಎಂದರು.
ಜೆಡಿಎಸ್ ಸಿಎಂ ಕುರ್ಚಿಯನ್ನು ಕಾಂಗ್ರೆಸ್ ಕಿತ್ತುಕೊಳ್ಳಲಿದೆ
ಕಾಂಗ್ರೆಸ್ನವರು ಹಿಂದೆ ಜೆಡಿಎಸ್ ಕಚೇರಿ ಕಿತ್ತುಕೊಂಡಿದ್ದರು. ಸ್ವಲ್ಪ ದಿನದಲ್ಲಿ ಜೆಡಿಎಸ್ ಸಿಎಂ ಕುರ್ಚಿಯನ್ನು ಕಾಂಗ್ರೆಸ್ ಕಿತ್ತುಕೊಳ್ಳಲಿದೆ. ಆ ಕುರ್ಚಿಯಲ್ಲಿ ಬಿಎಸ್ವೈ ಕುಳಿತುಕೊಳ್ಳುವುದು ನಿಶ್ಚಿತವಾಗಿದ್ದು, ರಾಜ್ಯದಿಂದ ಕಾಂಗ್ರೆಸ್ ನಿರ್ಣಾಮ ಆಗಲಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ವಾಗ್ದಾಳಿ ನಡೆಸಿದರು.
ಸರ್ಕಾರ ಬಿದ್ದು ಹೋಗದಿದ್ರೆ ರಾಜಕೀಯ ನಿವೃತ್ತಿ
ಕಾಲೇಳೆಯೋದೇ ಕಾಂಗ್ರೆಸ್ ಕೆಲಸ. ಈ ಸರ್ಕಾರಕ್ಕೆ ಭವಿಷ್ಯವಿಲ್ಲ. ಬಹುಮತ ಸಾಬೀತಿನ ವೇಳೆಯೇ ಸರ್ಕಾರ ಬಿದ್ದು ಹೋಗಲಿದೆ. ಬಿದ್ದು ಹೋಗದೇ ಇದ್ರೇ ನಾನು ರಾಜಕೀಯ ನಿವೃತ್ತಿ ಪಡೆಯುವೆ. ಇದೊಂದು ಅಪವಿತ್ರ ಮೈತ್ರಿ ಬಹಳ ದಿನ ಉಳಿಯಲ್ಲ. ಈಗಾಗಲೇ 20 ಶಾಸಕರು ಅಸಮಾಧಾನ ಗೊಂಡಿದ್ದಾರೆ ಎಂದು ಶಾಸಕ ಸೋಮಶೇಖರರೆಡ್ಡಿ ಹೇಳಿದರು.
ಕಿಚಡಿ ಸರ್ಕಾರದ ವಿರುದ್ಧ ಜನಾಕ್ರೋಶ
ಕಾಂಗ್ರೆಸ್-ಜೆಡಿಎಸ್‍ನದ್ದು ಅಪವಿತ್ರ ಮೈತ್ರಿ. ಅನೈತಿಕವಾಗಿ ಮಾಡಿಕೊಂಡಿರುವ ಕಿಚಡಿ ಸರ್ಕಾರ. ಜನಾದೇಶದ ವಿರುದ್ಧ ಕಾಂಗ್ರೆಸ್-ಜೆಡಿಎಸ್ ನಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಎದುರು ಮಂಡಿಯೂರಿದೆ. ಜನರ ಆಕ್ರೋಶಕ್ಕೆ ಈ ಸರ್ಕಾರ ತುತ್ತಾಗುತ್ತೆ. ಅಧಿಕಾರ ಹಂಚಿಕೆ ವಿಚಾರದಲ್ಲಿ ಗೊಂದಲ ಆಗುತ್ತೆ. ಕೆಲವೇ ತಿಂಗಳಲ್ಲಿ ಸರ್ಕಾರದ ಪತನ ಪ್ರಾರಂಭವಾಗುತ್ತೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.
Comments are closed.