ರಾಷ್ಟ್ರೀಯ

ತಾನೇ ಶೂಟ್ ಮಾಡಿಕೊಂಡು ಅಣ್ಣನ ತಲೆಗೆ ಕಟ್ಟಲು ಹೊಂಚು ಹಾಕಿ, ಜೈಲು ಪಾಲಾದ ತಮ್ಮ!

Pinterest LinkedIn Tumblr


ನವದೆಹಲಿ: ಅಣ್ಣನನ್ನು ಜೈಲಿಗೆ ಕಳುಹಿಸಿ ಪಿತ್ರಾರ್ಜಿತ ಆಸ್ತಿಗೆ ತಾನೊಬ್ಬನೆ ವಾರಸುದಾರನಾಗೋ ಹೊಂಚು ಹಾಕಿದ ತಮ್ಮನೊಬ್ಬ ತನಗೆ ತಾನೇ ಗುಂಡು ಹಾರಿಸಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ.

ತನಗೆ ಶೂಟ್ ಮಾಡುವಂತೆ ಸ್ನೇಹಿತರಿಗೆ ಸೂಚಿಸಿದ್ದ ಅಜಯ್ (32), ಆರೋಪವನ್ನು ಸಹೋದರನ ತಲೆಗೆ ಕಟ್ಟಿ ಜೈಲಿಗೆ ಕಳುಹಿಸುವ ಹುನ್ನಾರ ನಡೆಸಿದ್ದ. ಆದರೆ ಸತ್ಯ ಬೆಳಕಿಗೆ ಬಂದ ಬಳಿಕ ನಗರದಿಂದ ಪರಾರಿಯಾಗುತ್ತಿದ್ದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ

ಘಟನೆ ವಿವರ: ನನ್ನ ಸ್ನೇಹಿತನಿಗೆ ಶೂಟ್ ಮಾಡಲಾಗಿದೆ ಎಂದು ಸಂದೀಪ್ ಎಂಬಾತ ಪೊಲೀಸ್ ಠಾಣೆಗೆ ಕರೆ ಮಾಡಿದ್ದ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದರು. ಗುಂಡೇಟಿನಿಂದ ಗಾಯಗೊಂಡಿದ್ದ ಆತ ಕೆಲ ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ. ಪೊಲೀಸ್ ವಿಚಾರಣೆ ವೇಳೆ ಅಜಯ್ ತಾನು ಅಂಗಡಿ ಬಾಗಿಲು ಮುಚ್ಚಿ ಹೊರಬರುವಾಗ ತನ್ನಣ್ಣ ಮತ್ತು ಆತನ ಸ್ನೇಹಿತ ಬೈಕ್ ಮೇಲೆ ಬಂದಿದ್ದಾರೆ. ದೂರದಲ್ಲಿ ನಿಂತು ಅಣ್ಣನೇ ಗುಂಡು ಹಾರಿಸಿದ್ದಾನೆ. ಹೊಟ್ಟೆಗೆ ಗುಂಡು ಹಾರಿದ್ದರಿಂದ ನಾನು ಪ್ರಜ್ಞಾಹೀನನಾಗಿ ನೆಲಕ್ಕುರುಳಿದೆ, ಎಂದಿದ್ದ.

ಅಣ್ಣನನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಆತನದೇನು ತಪ್ಪಿಲ್ಲ ಎಂದನ್ನಿಸಿದೆ. ಹೀಗಾಗಿ ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾರೆ. ಆಗ ಸತ್ಯ ಬೆಳಕಿಗೆ ಬಂದಿದೆ.

ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಅಜಯ್ ಅಣ್ಣನನ್ನು ಜೈಲಿಗೆ ಕಳುಹಿಸುವ ಕುತಂತ್ರ ರೂಪಿಸಿದ್ದ. ಠಾಣೆಗೆ ಕರೆ ಮಾಡಿದ್ದ ಸಂದೀಪ್ ಎಂಬ ಸ್ನೇಹಿತನಿಂದ ಗುಂಡು ಹಾರಿಸಿಕೊಂಡಿದ್ದ. ಅಣ್ಣನ ಹೆಸರಿನಲ್ಲಿರುವ ಮೂರು ಬೆಡ್ ರೂಮ್‌ನ ಮನೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಆತ ಈ ನೀಚತನಕ್ಕೆ ಕೈ ಹಾಕಿದ್ದ, ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.