
ಮಂಗಳೂರು: ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಬ್ಬಕ್ಕ ಉತ್ಸವ ಸಮಿತಿಯು ಮಾರ್ಚ್11 ರಿಂದ ಬಹುಭಾಷಾ ಕಾರ್ಯಕ್ರಮಗಳೊಂದಿಗೆ ವಿಶಿಷ್ಟ ಪರಿಕಲ್ಪನೆಯಲ್ಲಿ ಆಯೋಜಿಸಿರುವ ‘ತುಳುನಾಡ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವ’ ಸಮಾರೋಪ ಸಮಾರಂಭ ಇದೇ ಮಾರ್ಚ್18 ರಂದು ಕರ್ನಾಟಕ ಸಂಘದ ಸಭಾಂಗಣದಲ್ಲಿ ಜರಗಲಿದೆ.
ಪೂರ್ವಾಹ್ನ ನಡೆಯುವ *’ರಾಣಿ ಅಬ್ಬಕ್ಕ ರಾಷ್ಟ್ರೀಯ ವಿಚಾರ ಸಂಕಿರಣ’ದ ಅಧ್ಯಕ್ಷತೆಯನ್ನು ಹಿರಿಯ ಸಂಶೋಧಕ ಹಾಗೂ ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ.ನಾವಡ ವಹಿಸುವರು. ಬಂಟ್ವಾಳದ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ತುಕಾರಾಮ ಪೂಜಾರಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಬಂಧ ಮಂಡಿಸುವರು. ಅದೇ ದಿನ ಬೆಳಿಗ್ಗೆ ಇಂಡಿಯಾ ಗೇಟ್ ನಲ್ಲಿರುವ ‘ಅಮರ್ ಜವಾನ್ ಜ್ಯೋತಿ’ಗೆ ನಮನ ಸಲ್ಲಿಸುವುದರೊಂದಿಗೆ ತುಳುನಾಡಿನ ಹುಲಿವೇಷಧಾರಿಗಳ ನೃತ್ಯ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ.
ಸಮಾರೋಪ- ಸಾಂಸ್ಕೃತಿಕ ರಂಜನೆ :
ಸಾಯಂಕಾಲ ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಅನಿತಾ ಸುರೇಂದ್ರ ಹೆಗ್ಗಡೆ ವಹಿಸುವರು. ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಸಂಸದ ಡಾ.ಎಂ.ವೀರಪ್ಪ ಮೊಯಿಲಿ, ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಭಯಚಂದ್ರ ಜೈನ್, ಶಕುಂತಳಾ ಟಿ.ಶೆಟ್ಟಿ ಮತ್ತು ಧರ್ಮಸ್ಥಳದ ಸುರೇಂದ್ರ ಕುಮಾರ್ ಹೆಗ್ಡೆ ಅತಿಥಿಗಳಾಗಿ ಪಾಲ್ಗೊಳ್ಳುವರು. ದ.ಕ. ಜಿಲ್ಲಾಡಳಿತದ ಪರವಾಗಿ ನೋಡೆಲ್ ಅಧಿಕಾರಿಗಳಾದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಬಿ. ಮತ್ತು ಉಳ್ಳಾಲ ಪುರಸಭಾ ಆಯುಕ್ತೆ ವಾಣಿ ವಿ.ಆಳ್ವ ಉಪಸ್ಥಿತರಿರುವರು .
ಉತ್ಸವದ ಅಂಗವಾಗಿ ರಾಜ್ಯದ ಕಲಾತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ತಿಳಿಸಿದ್ದಾರೆ.
Comments are closed.