ಕರಾವಳಿ

ಲಾರಿ-ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರರಿಬ್ಬರು ದಾರುಣ ಸಾವು

Pinterest LinkedIn Tumblr

ಉಡುಪಿ: ಲಾರಿ, ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದ ಪುತ್ತಿಗೆ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಪೆರ್ಡೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಬೈಕ್‌ಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಸವಾರರಿಬ್ಬರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡಿಬೈಲು ನಿವಾಸಿ ವರುಣ್ ರಾವ್ (22) ಹಾಗೂ ವಿಶ್ವಾಸ್ ಬಲ್ಲಾಳ್ (21) ಮೃತ ಸವಾರರು.

ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳಿಬ್ಬರು ಪೆರ್ಡೂರಿನಲ್ಲಿ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಅಡುಗೆ ಬಡಿಸುವ ಕೆಲಸ ಮುಗಿಸಿ ವಾಪಾಸಾಗುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಮೃತದೇಹವನ್ನು ಮಣಿಪಾಲ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಇದೇ ವೇಳೆ ಶಿವಮೊಗ್ಗಕ್ಕೆ ವೇಗವಾಗಿ ತೆರಳುತ್ತಿದ್ದ ಬಸ್‌ ರಸ್ತೆಗೆ ಬಿದ್ದಿದ್ದ ಸವಾರರ ಮೇಲೆ ಹರಿಯುವುದನ್ನು ತಪ್ಪಿಸಲು ಹೋಗಿ ಗದ್ದೆಗೆ ಉರುಳಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Comments are closed.