
ನವದೆಹಲಿ: ಸೇತುಸಮುದ್ರಂ ಹಡಗು ನಾಲೆ ಯೋಜನೆಗಾಗಿ ಪೌರಾಣಿಕ ರಾಮ ಸೇತುವೆಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಪ್ರೀಂಕೋರ್ಟ್ ಗೆ ಶುಕ್ರವಾರ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದೆ.
ರಾಷ್ಟ್ರದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ರಾಮಸೇತುವೆಯನ್ನು ಧ್ವಂಸ ಮಾಡುವ ಉದ್ದೇಶದಿಂದ ಹಿಂದೆ ಸರಿದಿರುವುದಾಗಿ ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಕೇಂದ್ರ ನೌಕಾ ಸಾರಿಗೆ ಸಚಿವಾಲಯ ಸುಪ್ರೀಂಕೋರ್ಟ್ ಗೆ ಈ ಕುರಿತು ಅಫಿಡವಿಟ್ ಅನ್ನು ಸಲ್ಲಿಸಿದೆ.
ರಾಮಸೇತು ವಿಚಾರದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿರುವ ಕೇಂದ್ರ ಸರಕಾರ ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಸೇತುಸಮುದ್ರಂ ಯೋಜನೆ ವಿರುದ್ಧ ಬಿಜೆಪಿ ಮುಖಂಡ ಸುಬ್ರಹ್ಮಣ್ಯಯನ್ ಸ್ವಾಮಿ ಸಲ್ಲಿಸಿದ್ದ ಪಿಐಎಲ್ ಅನ್ನು ಇತ್ಯರ್ಥಗೊಳಿಸುವಂತೆ ಅಫಿಡವಿಟ್ ನಲ್ಲಿ ಹೇಳಿದೆ.
ಸೇತುಸಮುದ್ರಂ ಯೋಜನೆಯ ವಿರುದ್ಧ ಅರ್ಜಿ ಸಲ್ಲಿಸಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಯೋಜನೆಗಾಗಿ ರಾಮಸೇತುಗೆ ಹಾನಿ ಮಾಡದಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು. ಈ ಹಿಂದೆ ಕೇಂದ್ರ ಹಡಗು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕಾಲುವೆ ಯೋಜನೆ ನಿರ್ಮಾಣಕ್ಕಾಗಿ ಯಾವುದೇ ಕಾರಣಕ್ಕೂ ರಾಮಸೇತುವೆಯನ್ನ ಒಡೆದು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
-ಉದಯವಾಣಿ
Comments are closed.