ಕರ್ನಾಟಕ

ಗೌರಿ ಹತ್ಯೆ: ಎಸ್‌ಐಟಿ ವಶಕ್ಕೆ ನವೀನ್‌ ಕುಮಾರ್‌

Pinterest LinkedIn Tumblr


ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜನನ್ನು ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡ ಎಸ್‌ಐಟಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಫೆ.18ರಂದು ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ನವೀನ್‌ ಕುಮಾರ್‌ನನ್ನು ಅಕ್ರಮ ಶಸ್ತ್ರಾಸ್ತ್ರ ಮಾರಾಟ ಆರೋಪದಲ್ಲಿ ಬಂಧಿಸಿದ್ದರು. ಮದ್ದೂರು ತಾಲೂಕಿನಲ್ಲಿರುವ ಈತನ ಮನೆ ಮೇಲೆ ದಾಳಿ ನಡೆಸಿ ಆರೋಪಿಯಿಂದ .32 ಎಂಎಂನ 15ಕ್ಕೂ ಅಧಿಕ ಗುಂಡುಗಳು ಮತ್ತು ನಾಲ್ಕೈದು ಗನ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂಬಂಧ ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ನಂತರ ವಿಶೇಷ ತನಿಖಾ ತಂಡದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಐಟಿ ತನಿಖಾಧಿಕಾರಿ ಎಂ.ಎನ್‌.ಅನುಚೇತ್‌ ತಿಳಿಸಿದ್ದಾರೆ.

ಗೌರಿ ಹಂತಕರ ಸುಳಿವು: ಆರೋಪಿಯು ಮದ್ದೂರು ತಾಲೂಕಿನವನಾಗಿದ್ದು, ಅಕ್ರಮವಾಗಿ ಗುಂಡುಗಳು ಹಾಗೂ ಗನ್‌ಗಳನ್ನು ದಾಸ್ತಾನು ಹಾಗೂ ಮಾರಾಟ ಮಾಡುವುದನ್ನು ಕಸುಬನ್ನಾಗಿಸಿಕೊಂಡಿದ್ದಾನೆ ಎಂಬುದು ತನಿಖೆ ವೇಳೆ ಗೊತ್ತಾಗಿತ್ತು. ಈ ಸಂಬಂಧ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರಿಗೆ ನವೀನ್‌ ಕುಮಾರ್‌ ಗೌರಿ ಹಂತಕರ ಬಗ್ಗೆ ಸುಳಿವು ನೀಡಿದ್ದ. ಅಲ್ಲದೇ, ಹಂತಕರು ಕರ್ನಾಟಕಕ್ಕೆ ಬಂದಾಗ ಸಹಾಯ ಮಾಡಿರುವ ಬಗ್ಗೆಯೂ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮತ್ತೂಂದೆಡೆ ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿ ಹಾಗೂ ಶಂಕಿತರ ಮೂರು ರೇಖಾಚಿತ್ರಕ್ಕೂ ಬಂಧಿತ ಆರೋಪಿಯ ಚಹರೆಗೂ ಸಾಮ್ಯತೆ ಕಂಡು ಬರುತ್ತಿದೆ. ಇದರೊಂದಿಗೆ ಮೈಸೂರಿನ ವಿಚಾರವಾದಿ ಭಗವಾನ್‌ ಚಲನವಲನಗಳ ಬಗ್ಗೆ ನಿಗಾ ವಹಿಸಿದ್ದ ಯುವಕನಿಗೂ ನವೀನ್‌ ಕುಮಾರ್‌ಗೂ ಸಂಪರ್ಕ ಇರುವ ಬಗ್ಗೆ ಪೊಲೀಸ್‌ಗೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.

-ಉದಯವಾಣಿ

Comments are closed.