ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿರುವ ತನ್ವೀರ್ ಸೇಠ್ ಅವರ ಸ್ವಕ್ಷೇತ್ರ ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳಮುಖಿಯೊಬ್ಬರು ಸ್ಪರ್ಧೆಗಿಳಿದಿದ್ದಾರೆ. ತನ್ವೀರ್ ಸೇಠ್ ವಿರುದ್ಧ ಸ್ಪರ್ಧಿಸುವ ಮೂಲಕ ಇಡೀ ದೇಶದ ಗಮನ ಸೆಳೆಯುತ್ತಿದ್ದಾರೆ. 2013ರ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಅಸ್ಲಂಪಾಷ ಅಲಿಯಾಸ್ ಚಾಂದಿನಿ, ಈ ಬಾರಿಯೂ ಸ್ಪರ್ಧೆಗೆ ತಯಾರಿ ನಡೆಸಿದ್ದು, ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.
* ಚುನಾವಣೆಯಲ್ಲಿ ಸ್ಪರ್ಧಿಸಬೇಕು ಅನಿಸಿದ್ದೇಕೆ?
ರಾಜಕೀಯದಲ್ಲಿ ಗಂಡಸರು, ಹೆಂಗಸರಿಗೆ ಅವಕಾಶ ಸಿಕ್ಕಿದೆ. ಆದರೆ, ಮಂಗಳಮುಖಿಯರಿಗೆ ಅವಕಾಶವೇ ಇಲ್ಲ. ನಮ್ಮ ನೋವನ್ನು ಕೇಳುವವರು ಯಾರು? ಅದಕ್ಕಾಗಿ ನನ್ನ ಸಮುದಾಯಕ್ಕಾಗಿ ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿರ್ಧರಿಸಿದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಟಿವಿ ಚಿಹ್ನೆಯಡಿ ಸ್ಪರ್ಧಿಸಿದ್ದೆ.
* ಈ ಬಾರಿಯೂ ಚುನಾವಣೆಗೆ ನಿಲ್ಲುವ ಆಲೋಚನೆ ಇದೆಯೇ?
ಇಂಡಿಯನ್ ನ್ಯೂ ಕಾಂಗ್ರೆಸ್ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಯೂಬ್ ಖಾನ್, ಟಿಕೆಟ್ ಕೊಡುತ್ತೇನೆ ನಮ್ಮ ಪಕ್ಷಕ್ಕೆ ಬನ್ನಿ ಎಂದು ಪತ್ರ ಬರೆದಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ನಮ್ಮ ಸಮುದಾಯಕ್ಕೆ ಮೈತ್ರಿ ಯೋಜನೆ ಜಾರಿ ಸೇರಿದಂತೆ ಸಾಕಷ್ಟು ಪ್ರೋತ್ಸಾಹ ನೀಡಿ ಮಂಗಳಮುಖಿಯರು ಸಮಾಜದಲ್ಲಿ ತಲೆ ಎತ್ತಿ ಓಡಾಡುವಂತೆ ಮಾಡಿದೆ. ಹೀಗಾಗಿ, ಸಿದ್ಧರಾಮಯ್ಯ ಅವರಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡಬೇಕು ಅಂದು ಕೊಂಡಿದ್ದೇನೆ. ಅವರು ಅವಕಾಶ ಮಾಡಿಕೊಡದಿದ್ದರೆ ಅವರ ವಿರುದ್ಧವೇ ಸ್ಫರ್ಧೆ ಮಾಡುತ್ತೇನೆ.
* ಮತಕೇಳಲು ಹೋದಾಗ ಜನರ ಪ್ರತಿಕ್ರಿಯೆ ಹೇಗಿತ್ತು?
ಕಳೆದ ಬಾರಿ ನಾನು ಚುನಾವಣೆಗೆ ನಿಂತು ಮನೆ ಮನೆಗೆ ಓಟು ಕೇಳಲು ಹೋದಾಗ ಜನ ಆಶ್ಚರ್ಯಪಟ್ಟರು. ಏನಪ್ಪಾ, ಇದುವರೆಗೆ ಗಂಡಸು ಇಲ್ಲಾ ಹೆಂಗಸರು ನಿಲ್ತಿದ್ರು. ಈ ವರ್ಷ ಮಂಗಳಮುಖಿ ನಿಂತವೆ, ಒಳ್ಳೆ ಕೆಲಸ ಮಾಡ್ತಾರೆ ಅಂತಾ ಜನರು ವಿಶ್ವಾಸದಿಂದ ನನಗೆ ಮತ ಹಾಕಿದ್ದಾರೆ.
* ರಾಜಕೀಯವಾಗಿ ನಿಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗುತ್ತಿದೆಯಾ?
ನಮ್ಮನ್ನು ದುಡಿಸಿಕೊಳ್ಳುತ್ತಾರೆ. ಆದರೆ, ಯಾರೂ ಪರಿಗಣಿಸು ವುದಿಲ್ಲ. ಭೂಪಾಲ್‌ನಲ್ಲಿ ನಮ್ಮ ಸಮುದಾಯದವರೊಬ್ಬರು ಮೇಯರ್ ಆಗಿದ್ದಾರೆ. ಉತ್ತರ ಪ್ರದೇಶದಲ್ಲಿ ಒಬ್ಬರು ಶಾಸಕ ರಾಗಿದ್ದಾರೆ. ನಮ್ಮ ಬಳ್ಳಾರಿಯಲ್ಲಿ ಒಬ್ಬರು ಕಾರ್ಪೋರೇಟರ್ ಆಗಿರುವುದನ್ನು ಬಿಟ್ಟರೆ, ಅಂತಹ ಪ್ರಾತಿನಿಧ್ಯ ಸಿಗುತ್ತಿಲ್ಲ.
* ಮಂಗಳಮುಖಿಯರನ್ನು ಸಮಾಜ ಹೇಗೆ ಕಾಣುತ್ತದೆ?
ಸುಪ್ರೀಂಕೋರ್ಟ್ ನಮ್ಮನ್ನು 3ನೇ ವರ್ಗ ಎಂದು ಪರಿಗಣಿಸಿ ಸ್ಥಾನಮಾನ ನೀಡಿದೆ. ನಮ್ಮ ಸಮುದಾಯದಲ್ಲೂ ಅನೇಕರು ಪದವಿವರೆಗೆ ಓದಿದವರಿದ್ದಾರೆ. ಆದರೆ, ಸಮಾಜ ಸರಿಯಾಗಿ ನಡೆಸಿಕೊಳ್ಳದ ಕಾರಣ ಭಿಕ್ಷೆ ಬೇಡಿ ಜೀವನ ಸಾಗಿಸಬೇಕಾಗಿ ಬಂದಿದೆ. ನಮಗೂ ಅರ್ಹತೆ ಆಧಾರದ ಮೇಲೆ ಸರ್ಕಾರಿ ನೌಕರಿ ಕೊಡಬೇಕು. ರಾಜಕೀಯದಲ್ಲೂ ಗಂಡು-ಹೆಣ್ಣಿಗೆ ಪ್ರಾತಿನಿಧ್ಯ ಇರುವಂತೆ ಮಂಗಳಮುಖಿಯರಿಗೂ ಮೀಸ ಲಾತಿ ಕೊಟ್ಟು ತೃತೀಯಲಿಂಗಿಗಳೆಂದು ಪರಿಗಣಿಸಿ ನಮ್ಮನ್ನೂ ಮನುಷ್ಯರಂತೆ ಕಾಣುವಂತಾಗಬೇಕು.
ಸಂದರ್ಶನ: ಗಿರೀಶ್ ಹುಣಸೂರು
-ಉದಯವಾಣಿ
Comments are closed.