
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಾಗ ಈಗ ಬರೀ ಗಿಫ್ಟ್‌ಗಳದ್ದೇ ಹವಾ. ರಾಜಕಾರಣಿ ಗಳಿಂದ ಗಿಫ್ಟ್ ತೆಗೆದುಕೊಂಡವರು ಹಾಗೂ ಅದರಿಂದ ದೂರ ಇದ್ದವರು ಇದನ್ನು ಸಾಮಾಜಿಕ ಜಾಲತಾಣದೊಳಗೆ ಹರಿಬಿಟ್ಟು ಅದರಿಂದ ಬರೋ ಆರೋಪ-ಪ್ರತ್ಯಾರೋಪಗಳಿಂದ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಚುನಾವಣೆ ದಿನಾಂಕ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬರೋದರೊಳಗೆ ಎಲ್ಲ ಕೆಲಸ ಮಾಡಿ ಮುಗಿಸಬೇಕು ಎಂಬುದು ಟಿಕೆಟ್ ಆಕಾಂಕ್ಷಿ ಗಳ ಅಸೆ.
ಅದಕ್ಕಾಗಿ ಮತದಾರರ ಮನೆಯ ಬಳಿ ಗಿಫ್ಟ್ಗಳು ಬರುತ್ತಿವೆ. ಇದನ್ನು ಯಾರು ನೀಡಿದರು, ಯಾರು ಪಡೆದರು ಎಂಬುದು ಕೊಟ್ಟವರಿಗೆ ಮತ್ತು ಪಡೆದವರಿಗೆ ಮಾತ್ರ ಗೊತ್ತು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಐದಾರು ತಿಂಗಳಿಂದ ಇದು ನಡೆದಿದೆ. ರಾಜಕಾರಣಿಗಳಿಗೆ, ರಾಜಕೀಯ ಪಕ್ಷಗಳಿಗೆ ಜನರು ಎಷ್ಟೇ ಬೈಯ್ದರೂ ಅವರಿಂದ ಗಿಫ್ಟ್ ತೆಗೆದುಕೊಳ್ಳುವದನ್ನು ಮಾತ್ರ ಬಿಟ್ಟಿಲ್ಲ. “ಆಮಿಷ ರಾಜಕಾರಣ’ ಅಂದುಕೊಂಡಷ್ಟು ಸಲೀಸಾಗಿ ಮುಗಿಯುವಂತೆ ಕಾಣುತ್ತಿಲ್ಲ.
ಕಾಂಗ್ರೆಸ್ ಹಾಗೂ ಬಿಜೆಪಿ ಸಂಭವನೀಯ ಅಭ್ಯರ್ಥಿಗಳು ಈಗಾಗಲೇ ಇದರ ಸುಳಿವು ಸಹ ನೀಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರೆ ಇನ್ನೊಂದು ಕಡೆ ಸಾಮಾಜಿಕ ಜಾಲತಾಣಗಳ ಮೂಲಕ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಕಾಲೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ವಿವಾದಗಳ ಹೇಳಿಕೆಗಳನ್ನು ಹರಿಬಿಟ್ಟು ಅದರ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಬಿಜೆಪಿ ಪರಿವರ್ತನಾ ಯಾತ್ರೆ ಸಮಯದಲ್ಲಿ ಶಾಸಕ ಸಂಜಯ ಪಾಟೀಲ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಟೀಶರ್ಟ್ ಮತ್ತು ಸೀರೆ ಮತ್ತಿತರ ವಸ್ತುಗಳನ್ನು ಹಂಚಿದ್ದಾರೆ ಎಂಬ ಆರೋಪ ಸಾಕಷ್ಟು ಸುದ್ದಿ ಮಾಡಿದ್ದರೆ ಇಅದಕ್ಕೆ ಪೈಪೋಟಿ ಎನ್ನುವಂತೆ ಕಾಂಗ್ರೆಸ್‌ನಿಂದ ಈ ಬಾರಿಯೂ ಬಹುತೇಕ ಟಿಕೆಟ್ ಖಾತ್ರಿ ಪಡಿಸಿ ಕೊಂಡಿರುವ ಲಕ್ಷ್ಮಿ ಹೆಬ್ಟಾಳಕರ ತಾವೇನು ಕಡಿಮೆ ಇಲ್ಲ ಎನ್ನುವಂತೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ್ ಭಾಗದಲ್ಲಿ ಮತದಾರರಿಗೆ ಪ್ರಶರ್ ಕುಕ್ಕರ್ ಹಂಚಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚುನಾವಣೆ ಸಮಯದಲ್ಲಿ ಇನ್ನೂ ಏನೇನು ಕಾಣಿಕೆಗಳು ಬರಲಿವೆ ಎಂಬ ಕುತೂಹಲ ಜನರಲ್ಲಿ ಕಾಣುತ್ತಿದೆ. ಮತದಾರರಿಗೆ ಸೀರೆಗಳನ್ನು ಹಂಚಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಶಾಸಕ ಸತೀಶ ಜಾರಕಿಹೊಳಿ ಮತದಾರರನ್ನು ಆಕರ್ಷಿಸಲು ಸೀರೆ ಹಂಚುವುದು ನಮಗೂ ಬರುತ್ತದೆ. ಆದರೆ ಹಂಚಿದ ಸೀರೆಗಳು ಚೆನ್ನಾಗಿರಬೇಕು. ಒಂದು ಸಲ ಉಟ್ಟರೆ ಹರಿಯು ವಂತಿರಬಾರದು ಎಂದು ತಮ್ಮ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಿಂದ ಸೋತಿದ್ದ ಲಕ್ಷ್ಮೀ ಹೆಬ್ಟಾಳಕರ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪ್ರತಿಜ್ಞೆ ಮಾಡಿದವರಂತೆ ಕ್ಷೇತ್ರದ ತುಂಬಾ ನಿತ್ಯ ಓಡಾಡುತ್ತಿದ್ದಾರೆ. ಕ್ಷೇತ್ರದ ವಿವಿಧ ಕಡೆಗಳಲ್ಲಿ ತಮ್ಮ ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡು ಮತದಾರರಿಗೆ ಇನ್ನೂ ಹತ್ತಿರವಾಗಲು ಪ್ರಯತ್ನ ಮಾಡುತ್ತಿದ್ದಾರೆ. ಹಿರೇಬಾಗೇವಾಡಿಯಲ್ಲಿ ಇತ್ತೀಚೆಗಷ್ಟೇ ಕಾಂಗ್ರೆಸ್ ಸಮಾವೇಶವನ್ನು ಬಹಳ ಯಶಸ್ವಿಯಾಗಿ ಮಾಡಿದ್ದ
ಹೆಬ್ಟಾಳಕರ ಈಗ ಉಚಗಾವ್ ಭಾಗದಲ್ಲಿ ತಮ್ಮ ಫೌಂಡೇಶನ್ ವತಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಿ ಸುದ್ದಿ ಮಾಡಿದ್ದಾರೆ. ಹೆಬ್ಟಾಳಕರ ಅವರ ಈ ರಾಜಕೀಯ ಕಾರ್ಯತಂತ್ರ ಸಹಜವಾಗಿಯೇ ಬಿಜೆಪಿ ಹಾಲಿ ಶಾಸಕ ಸಂಜಯ ಪಾಟೀಲರ ನಿದ್ದೆಗೆಡಿಸಿದೆ. ಹೆಬ್ಟಾಳಕರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಂಜಯ ಪಾಟೀಲ ಬೆಳಗಾವಿ ಗ್ರಾಮಿಣ ಭಾಗದಲ್ಲಿ ಹೆಬ್ಟಾಳಕರ ಅಭಿವೃದ್ಧಿ ಕಾರ್ಯಕ್ರಮ ಮಾಡಿದ್ದರೆ ಮತದಾರರಿಗೆ ಗಿಫ್ಟ್‌ಗಳ ಮೂಲಕ ಆಮಿಷ ಒಡ್ಡಿ ಅವರನ್ನು ಸೆಳೆಯುವ ಅಗತ್ಯವೇನಿದೆ ಎಂದು ಟೀಕಿಸಿದ್ದಾರೆ.
ಕಳೆದ ತಿಂಗಳು ಹಿರೇಬಾಗೇವಾಡಿಯ ಸಮೀಪ ಸಿದ್ದನಬಾವಿ ಕೆರೆ ತುಂಬಿಸುವ ಯೋಜ ನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಗುದ್ದಲಿ ಪೂಜೆ ನೆರವೇರಿಸಲು ಬಂದಾಗ ಹೆಬ್ಟಾಳಕರ ಹಾಗೂ ಸಂಜಯ ಪಾಟೀಲ ಬೆಂಬಲಿಗರ ಮಧ್ಯೆ ವಾಗ್ವಾದ, ಆರೋಪಗಳ “ಜಗಳ ಬಂದಿ’ಯೇ ನಡೆದಿತ್ತು. ಈಗ ಇದಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಮೂಲಕ ಜೆಡಿಎಸ್ ಸಹ ಸೇರಿಕೊಂಡಿದೆ.
* ಕೇಶವ ಆದಿ
-ಉದಯವಾಣಿ
Comments are closed.