ರಾಷ್ಟ್ರೀಯ

ಪಾಕ್‌ ಅಪ್ರಚೋದಿತ ದಾಳಿ: ಮೂವರು ಯೋಧರು ಹುತಾತ್ಮ

Pinterest LinkedIn Tumblr


ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನ ಭಾನುವಾರ ನಡೆಸಿದ ಶೆಲ್‌ ದಾಳಿಗೆ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘಿಸಿ ರಜೌರಿ ಜಿಲ್ಲೆಯ ಭಿಂಬರ್ ಗಾಲಿ ಸೆಕ್ಟರ್‌ನಲ್ಲಿ ಭಾನುವಾರ ಸಂಜೆ ಶೆಲ್‌ ದಾಳಿ ಆರಂಭಿಸಿದರು. ತಕ್ಷಣ ಭಾರತೀಯ ಸೇನೆ ಬಲವಾದ ಪ್ರತಿದಾಳಿ ನಡೆಸಿತು. ಈಗಲೂ ಗುಂಡಿನ ಚಕಮಕಿ ಮುಂದುವರಿದಿದೆ ಎಂದು ಸೇನಾಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಇದಕ್ಕೆ ಮೊದಲು ಪೂಂಚ್‌ ಜಿಲ್ಲೆಯಲ್ಲಿ ಪಾಕ್‌ ದಾಳಿಯಿಂದ ಒಬ್ಬ ಜವಾನ ಹಾಗೂ ಇಬ್ಬರು ನಾಗರಿಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಇಸ್ಲಾಮಾಬಾದ್ ಗ್ರಾಮದ ಶಹಜಾಝ್ ಬಾನೊ (15) ಮತ್ತು ಯಾಸಿನ್ ಆರಿಫ್‌ (14) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಕ್‌ ಸೇನೆ ಅಪ್ರಚೋದಿತವಾಗಿ ಬೆಳಗ್ಗೆ 11:10ರ ವೇಳೆಗೆ ಮನಬಂದಂತೆ ಸಣ್ಣ ಶಸ್ತ್ರಾಸ್ತ್ರಗಳು, ಮೋರ್ಟರ್‌ಗಳು, ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ಆರಂಭಿಸಿತು. ಕೂಡಲೇ ಭಾರತೀಯ ಸೇನೆ ಪ್ರತಿದಾಳಿ ನಡೆಸಿತು ಎಂದು ರಕ್ಷಣಾ ವಕ್ತಾರ ತಿಳಿಸಿದರು.

ಜಮ್ಮು ಪ್ರಾಂತ್ಯದಲ್ಲಿ 9 ಭದ್ರತಾ ಸಿಬ್ಬಂದಿ ಸೇರಿದಂತೆ ಈ ವರ್ಷ ಒಟ್ಟು 17 ಮಂದಿ ಪಾಕ್‌ ದಾಳಿಗೆ ಬಲಿಯಾಗಿದ್ದಾರೆ. ಇತರ 70ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

Comments are closed.