ಕರ್ನಾಟಕ

ಪ್ರಧಾನಿ ಮೋದಿ ಹೇಳಿದ್ದೆಲ್ಲ ಸುಳ್ಳು: ’10 ಪರ್ಸೆಂಟ್‌ ಸರಕಾರ’ ಆರೋಪಕ್ಕೆ ಸಿಎಂ ತಿರುಗೇಟು

Pinterest LinkedIn Tumblr


ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸುಳ್ಳುಗಳನ್ನು ಹೇಳಿ ಜನತೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಭಾನುವಾರ ನಡೆದ ಬಿಜೆಪಿ ಪರಿವರ್ತನಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದಲ್ಲಿ ಹೇಳಿದ್ದೆಲ್ಲವೂ ಸುಳ್ಳುಗಳೇ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಪ್ರಧಾನಿ ಪ್ರಸ್ತಾಪಿಸಿದ ಪ್ರತಿಯೊಂದು ವಿಷಯಕ್ಕೂ ಪ್ರತ್ಯುತ್ತರ ನೀಡಿದರು.

‘ನಮ್ಮದು 10 ಪರ್ಸೆಂಟ್‌ ಸರಕಾರ ಎಂದು ಪ್ರಧಾನಿ ಮೋದಿ ಆಧಾರರಹಿತ ಆರೋಪ ಮಾಡಿದ್ದಾರೆ. ಭ್ರಷ್ಟಾಚಾರದಲ್ಲಿ ನಂ.1 ಎಂದೂ ಟೀಕಿಸಿದ್ದಾರೆ. ಆದರೆ ಪ್ರಧಾನಿ ಅವರ ಪಕ್ಕದಲ್ಲಿ ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರನ್ನೇ ಕೇಳಿದ್ದರೆ ಯಾರು ಭ್ರಷ್ಟಾಚಾರಿ ಎಂಬುದು ಗೊತ್ತಾಗುತ್ತಿತ್ತು’ ಎಂದು ಸಿದ್ದರಾಮಯ್ಯ ತೀಕ್ಷ್ಣವಾಗಿ ನುಡಿದರು.

‘ಚೆಕ್‌ನಲ್ಲಿ ಲಂಚ ತೆಗೆದುಕೊಂಡು ಸಿಕ್ಕಿಬಿದ್ದು ಜೈಲಿಗೆ ಹೋಗಿಬಂದವರು ಯಡಿಯೂರಪ್ಪ. ಅವರ ಸಂಪುಟದಲ್ಲಿ ಸಚಿವರಾಗಿದ್ದ ಹಲವರು ನಾನಾ ಕೇಸುಗಳಲ್ಲಿ ಜೈಲಿಗೆ ಹೋಗಿದ್ದಾರೆ. ಇಂಥವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಪ್ರಧಾನಿ ಮೋದಿ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಸಿಎಂ ಕಿಡಿಕಾರಿದರು.

Dear @narendramodi ರವರೆ, being the PM of the country your words should carry high credibility. I would therefore request you to substantiate your allegation “corruption & misgovernance are rampant” with facts. Let us fight this election with dignity & based on #justfacts . https://t.co/D9gHyxWr61
— Siddaramaiah (@siddaramaiah) February 5, 2018

‘ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ಅದಕ್ಕೆ ಮೊದಲು ಬಿಜೆಪಿ ಆಡಳಿತವಿರುವ ಉತ್ತರಪ್ರದೇಶ, ಮಹಾರಾಷ್ಟ್ರ, ಹರ್ಯಾಣ, ರಾಜಸ್ಥಾನದಂತಹ ರಾಜ್ಯಗಳನ್ನು ಮೊದಲು ನೋಡಲಿ. ಅಲ್ಲಿ ನಡೆಯುವಷ್ಟು ಅಪರಾಧ ಕೃತ್ಯಗಳು ನಮ್ಮಲ್ಲಿ ನಡೆದಿಲ್ಲ. ಹಿಂದೆ ಬಿಜೆಪಿ ಸರಕಾರವಿದ್ದಾಗ ಇದ್ದುದಕ್ಕಿಂತಲೂ ಕಾನೂನು ಸುವ್ಯವಸ್ಥೆ ಸಾಕಷ್ಟು ಸುಧಾರಿಸಿದೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

‘ಬಂಡವಾಳ ಹೂಡಿಕೆಯಲ್ಲಿ, ಐಟಿಬಿಟಿ ಉತ್ಪನ್ನಗಳ ರಫ್ತು ವ್ಯವಹಾರದಲ್ಲಿ, ಸ್ಟಾರ್ಟಪ್‌ ಕಂಪನಿಗಳ ಸ್ಥಾಪನೆಯಲ್ಲಿ ಕರ್ನಾಟಕವೇ ನಂಬರ್‌ 1 ಆಗಿದೆ. ಸಾರಿಗೆ ವ್ಯವಸ್ಥೆಯಲ್ಲೂ ನಾವೇ ನಂ.1, ಸಾರಿಗೆ ಕ್ಷೇತ್ರದ ಸಾಧನೆಗಾಗಿ ರಾಜ್ಯಕ್ಕೆ 207 ಪ್ರಶಸ್ತಿಗಳು ಬಂದಿವೆ. ಇವೆಲ್ಲ ಕೇಂದ್ರ ಸರಕಾರದ್ದೇ ಅಂಕಿ-ಅಂಶಗಳಿಂದ ಸಾಬೀತಾಗುತ್ತದೆ. ಕಾನೂನು ಸುವ್ಯವಸ್ಥೆ ಕುಸಿದಿದ್ದರೆ ಈ ಸಾಧನೆಗಳು ಆಗುತ್ತಿರಲಿಲ್ಲ’ ಎಂದು ಸಿದ್ದರಾಮಯ್ಯ ನುಡಿದರು.

ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತವನ್ನೇ ನೇಮಕ ಮಾಡಿರಲಿಲ್ಲ. ಹೀಗಿರುವಾಗ ಲೋಕಾಯುಕ್ತವನ್ನು ದುರ್ಬಲಗೊಳಿಸಿದೆ ಎಂದು ಕರ್ನಾಟಕದ ಮೇಲೆ ಗೂಬೆ ಕೂರಿಸಲು ಅವರಿಗೆ ನೈತಿಕತೆ ಇಲ್ಲ ಎಂದು ಸಿಎಂ ಟೀಕಿಸಿದರು.

‘ಸ್ಟೀಲ್‌ ಬ್ರಿಡ್ಜ್‌ ಯೋಜನೆಯಲ್ಲಿ ರಾಜ್ಯ ಸರಕಾರ ಪರ್ಸೆಂಟೇಜ್‌ ಹೊಡೆದಿದೆ ಎಂದು ಮೋದಿ ಆರೋಪಿಸುತ್ತಾರೆ. ವಾಸ್ತವದಲ್ಲಿ ಆ ಯೋಜನೆಯನ್ನೇ ನಾವು ಕೈಬಿಟ್ಟಿದ್ದೇವೆ. ಹೀಗಿರುವಾಗ ಪರ್ಸೆಂಟೇಜ್ ಮಾತು ಎಲ್ಲಿಂದ ಬರಬೇಕು? ಪ್ರಧಾನಿಯನ್ನು ಬಿಜೆಪಿ ಮುಖಂಡರು ದಾರಿ ತಪ್ಪಿಸಿದ್ದಾರೆ’ ಎಂದರು ಸಿದ್ದರಾಮಯ್ಯ.

‘ಕಾಂಗ್ರೆಸ್‌ ಸರಕಾರದ ಕೌಂಟ್‌ಡೌನ್‌ ಶುರುವಾಗಿದೆ ಎಂದರು ಪ್ರಧಾನಿ. ಆದರೆ ರಾಜಸ್ಥಾನದ ಉಪಚುನಾವಣೆಯಲ್ಲಿ ಬಿಜೆಪಿ ಬಳಿ ಇದ್ದ ಮೂರೂ ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದೆ. ಗುಜರಾತ್‌ನಲ್ಲೂ ಬಿಜೆಪಿಯ ಬಹುಮತ ಕುಸಿದಿದ್ದು ಕಾಂಗ್ರೆಸ್‌ ಬಲವೃದ್ಧಿಸಿದೆ. ಹೀಗಿರುವಾಗ ಕೌಂಟ್‌ಡೌನ್‌ ಶುರುವಾಗಿರುವುದು ಬಿಜೆಪಿಯದ್ದೇ ಹೊರತು ಕಾಂಗ್ರೆಸ್‌ನದ್ದಲ್ಲ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು. ಪ್ರಧಾನಿಯಾಗಿ ಇಂತಹ ಸುಳ್ಳುಗಳನ್ನು ಹೇಳುವುದು ಅವರ ಘನತೆಗೆ ತಕ್ಕುದಲ್ಲ ಎಂದೂ ಸಿಎಂ ನುಡಿದರು.

Comments are closed.