ಕರಾವಳಿ

ಪಶ್ಚಿಮ ಘಟ್ಟ ಉಳಿಸಲು ಸಹ್ಯಾದ್ರಿ ಸಂಚಯದಿಂದ ವಿಶಿಷ್ಟ ರೀತಿಯ ಅಭಿಯಾನ : ಗಾಂಜಾ ಮಾಫಿಯಾ ಆರೋಪ

Pinterest LinkedIn Tumblr

ಮಂಗಳೂರು, ಜನವರಿ.27: ಪಶ್ಚಿಮ ಘಟ್ಟ ಹೊತ್ತಿ ಉರಿಯುತ್ತಿದ್ದು, ನದಿ ಮೂಲಗಳು ಬರಡಾಗುತ್ತಿರುವ ಹಿನ್ನೆಲೆಯಲ್ಲಿ ಸಹ್ಯಾದ್ರಿ ಸಂಚಯ ಹಮ್ಮಿಕೊಂಡಿರುವ ‘ಪಶ್ಚಿಮ ಘಟ್ಟ ಉಳಿಸಿ’ ಅಭಿಯಾನವು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ವಿಶಿಷ್ಟ ರೀತಿಯಲ್ಲಿ ನಡೆಯಿತು.

ಈ ಸಂದರ್ಭ ಕಾರ್ಯಕ್ರಮದ ರೂವಾರಿ ದಿನೇಶ್ ಹೊಳ್ಳ ಅವರು ಮಾತನಾಡಿ, ಪಶ್ಚಿಮ ಘಟ್ಟ ಹೊತ್ತಿ ಉರಿಯುತ್ತಿದ್ದು, ನದಿ ಮೂಲಗಳು ಬರಡಾಗುತ್ತಿವೆ. ನೇತ್ರಾವತಿ ಬರಿದಾಗುತ್ತಿದೆ. ಆದರೆ ಸರಕಾರ ಕಾಡನ್ನು ರಕ್ಷಿಸುವುದನ್ನು ಬಿಟ್ಟು ಇರುವ ಕಾಡನ್ನೂ ಅಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜನರ ಮೂಲಕ ಸರಕಾರದ ಗಮನ ಸೆಳೆಯಲು ಸಹ್ಯಾದ್ರಿ ಸಂಚಯವು ಕಾನನ ರೋದನ ಎಂಬ ವಿಭಿನ್ನ ಪ್ರತಿಭಟನೆಯನ್ನು ಆಯೋಜಿಸಿದೆ ಎಂದರು.

ಪಶ್ಚಿಮ ಘಟ್ಟದಲ್ಲಿ ಸಾಮಾನ್ಯವಾಗಿ ಮಾರ್ಚ್ ನಂತರ ಬೀಳುತ್ತಿದ್ದ ಬೆಂಕಿ ಈ ಬಾರಿ ಡಿಸೆಂಬರ್ನಲ್ಲೇ ಬಿದ್ದಿದೆ. ಇಂತಹ ಕೃತ್ಯಗಳ ಹಿಂದೆ ಗಾಂಜಾ, ಎಸ್ಟೇಟ್ ಮಾಫಿಯಾಗಳ ಕೈವಾಡವಿದೆ. ಘಟ್ಟದುದ್ದಕ್ಕೂ ಇರುವ ದೊಡ್ಡೇರಿಬೆಟ್ಟ, ರಾಮನ ಬೆಟ್ಟ, ಸೊಪ್ಪಿನಬೆಟ್ಟ, ಬಾರಿಮಲೆ, ಬಂಜಾರಮಲೆ, ಸೋಮನಕಾಡು, ಅಳಿಯೂರು, ವೆಂಕಟಗಿರಿ, ಅರಮನೆಗುಡ್ಡ ಪ್ರದೇಶಗಳಲ್ಲಿ ಸಹಸ್ರಾರು ಎಕರೆ ಜಾಗ ಈ ಮಾಫಿಯಾಗಳ ಕೈಯಲ್ಲಿದೆ. ಅರಣ್ಯ ಇಲಾಖೆಗೆ ನಿಯಂತ್ರಿಸಲು ಸಾಧ್ಯವಾಗದಷ್ಟು ದೊಡ್ಡ ಮಾಫಿಯಾ ಅಲ್ಲಿ ಕಾರ್ಯಾಚರಿಸುತ್ತಿವೆ. ನಿತ್ಯ ಅರಣ್ಯ ಬೇಟೆ ನಡೆಯುತ್ತಿದೆ. ಸಂರಕ್ಷಿತ ಅರಣ್ಯಗಳಲ್ಲಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಇವುಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳನ್ನು ಸಚಿವರು ವರ್ಗಾವಣೆ ಮಾಡುತ್ತಿದ್ದಾರೆ ಎಂದು ಹೊಳ್ಳ ಆರೋಪಿಸಿದರು.

ಪಶ್ಚಿಮ ಘಟ್ಟದಲ್ಲಿ ರೆಸಾರ್ಟ್ ಮಾಫಿಯಾದಂತೆಯೇ ಗಾಂಜಾ ಮಾಫಿಯಾ ಕೂಡ ಬೇರೂರಿದೆ. ನೂರಾರು ಎಕರೆ ಪ್ರದೇಶಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಸಲಾಗುತ್ತಿದೆ. ಅಲ್ಲದೆ ಕಾಡುಕೋಣ ಬೇಟೆ ಅವ್ಯಾಹತವಾಗಿದೆ. ಅಲ್ಲಿಗೆ ಜನರು, ಹೊರಗಿನ ಚಾರಣಿಗರು ಹೋಗದಂತೆ ಭಯ ಹುಟ್ಟಿಸುವ ಕೆಲಸಕ್ಕೆ ಮಾಫಿಯಾಗಳು ನಡೆಸುತ್ತಿವೆ. ಇತ್ತೀಚೆಗೆ ಅಡ್ಡಹೊಳೆಗೆ ನಕ್ಸಲೀಯರು ಬಂದಿದ್ದರು ಎನ್ನುವ ಸುದ್ದಿಯಾಗಿತ್ತು. ಆದರೆ ವಾಸ್ತವದಲ್ಲಿ ಯಾವ ನಕ್ಸಲರೂ ಅಲ್ಲಿಗೆ ಬರಲಿಲ್ಲ. ಇದೆಲ್ಲ ಗಾಂಜಾ ಮಾಫಿಯಾಗಳು ಜನರಲ್ಲಿ ಭಯ ಹುಟ್ಟಿಸಲು ಎಸಗಿದ ಕೃತ್ಯ ಎಂದು ದಿನೇಶ್ ಹೊಳ್ಳ ದೂರಿದರು.

ಇನ್ನೋರ್ವ ಮುಖಂಡ ಶಶಿಧರ್ ಶೆಟ್ಟಿ ಮಾತನಾಡಿ, ಅರಣ್ಯ ಇಲಾಖೆ ಭಾವನೆಗಳೇ ಇಲ್ಲದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅರಣ್ಯಕ್ಕೆ ಬೆಂಕಿ ಬಿದ್ದಾಗ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಅನುಕೂಲ ವಾಗುವಂತೆ ಹೆಲಿಕಾಪ್ಟರ್ ಬೇಡಿಕೆಯನ್ನು ಅರಣ್ಯ ಸಚಿವರ ಮುಂದಿಟ್ಟರೆ ‘ನಮ್ಮ ದೇಶ ಶ್ರೀಮಂತ ದೇಶವಲ್ಲ’ ಎಂದು ಹಾಸ್ಯ ಮಾಡುತ್ತಾರೆ. ಆನೆಗಳನ್ನು ಸಾಕಲು ಆಗದ ಇಲಾಖೆ ದಿವಾಳಿಯಾಗಿದೆ. ಅವುಗಳನ್ನು ಜೀತದಾಳುಗಳಾಗಿ ದುಡಿಸಲಾಗುತ್ತದೆ. ಆನೆಗಳನ್ನು ಸಾಕಲಾಗುತ್ತಿಲ್ಲ ಎನ್ನುವ ಅರಣ್ಯ ಇಲಾಖೆಯನ್ನು ಮಾಫಿಯಾಗಳು ನಿಯಂತ್ರಿಸುತ್ತಿವೆ. ಪ್ರಾಮಾಣಿಕ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದರು.

ದಿನೇಶ್ ಹೊಳ್ಳ ಕಪ್ಪು ಬಟ್ಟೆ ಧರಿಸಿದರೆ ಇತರರು ಮುಖವಾಡ ಧರಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸರ ಪ್ರೇಮಿಗಳ ವಿರೋಧದ ಮಧ್ಯೆ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲು ಮುಂದಾದ ಕ್ರಮವನ್ನು ಖಂಡಿಸಿ ಮುರಿದು ಬಿದ್ದ ಮರದ ಕೊಂಬೆ, ಮೊಟ್ಟೆ ಒಡೆದು ಹೊರಗೆ ಬಂದ ಹಕ್ಕಿ ಮರಿಗಳ ಸಾವಿನ ದೃಶ್ಯವನ್ನು ಪ್ರದರ್ಶಿಸಿ ಅಣಕಿಸಲಾಯಿತು.

ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಸಂಘಟನೆಯ ಮುಖಂಡರಾದ ಹರೀಶ್ ಅಡ್ಯಾರ್, ದಿನೇಶ್ ಕೋಡಿಯಾಲ್ ಬೈಲ್, ಯತೀಶ್ ಸಾಲ್ಯಾನ್, ಡಾ. ಅಣ್ಣಯ್ಯ ಕುಲಾಲ್, ರಾಜೇಶ್ ದೇವಾಡಿಗ, ಪವನ್, ಜಗದೀಶ್ ಸಾಲ್ಯಾನ್ ಮತ್ತಿತರರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Comments are closed.