
ಬೆಂಗಳೂರು: ಬೆಂಗಳೂರಿನ ಮಾಣೆಕ್ ಷಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ರಾಜ್ಯಪಾಲ ವಜುಬಾಯಿ ವಾಲಾ ರಾಜ್ಯದ ಅಭಿವೃದ್ದಿಯನ್ನು ಕೊಂಡಾಡಿದ್ದಾರೆ.
ಎಲ್ಲರಿಗೂ ನನ್ನ ನಮಸ್ಕಾರಗಳು ಎನ್ನುವ ಮೂಲಕ ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು ಹಿಂದಿಯಲ್ಲಿ ಸಂದೇಶ ನೀಡಿದ್ದಾರೆ.
ಭಾರತದ ಅಖಂಡತೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದ ಅವರು ಕರ್ನಾಟಕ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದೆ. ರಸ್ತೆಗಳ ಅಭಿವೃದ್ಧಿಗೆ ಕರ್ನಾಟಕ ಪ್ರಥಮ ಆದ್ಯತೆ ನೀಡಿದೆ ಎಂದಿದ್ದಾರೆ.
ಭಾಷಣದ ಮುಖ್ಯಾಂಶಗಳು
* ರಾಜ್ಯದ ಎಲ್ಲೆಡೆ ವೈಫೈ ಸಂಪರ್ಕ ಸಾಧಿಸುವಲ್ಲಿ ಸಫಲವಾಗಿದೆ. ಡಿಜಿಟಲ್ ಆಡಳಿತದ ಅಂಗವಾಗಿ 5353 ಗ್ರಾಮ ಪಂಚಾಯತ್ ಗಳಲ್ಲಿ ವೈಫೈ ಸೇವೆ ಒದಗಿಸಲಾಗಿದೆ
* ರಸ್ತೆ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಿದ್ದು, ವಿವಿಧ ಯೋಜನೆಗಳಡಿ 2,147ಕಿ.ಮೀ. ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗಿದೆ. 4014 ಕಿ.ಮೀ. ಜಿಲ್ಲಾ ರಸ್ತೆಗಳು ಸಹ ಅಭಿವೃದ್ಧಿಯಾಗಿವೆ.
* ದಲಿತರು, ಅಲ್ಪ ಸಂಖ್ಯಾತರ ಕಲ್ಯಾಣಕ್ಕೆ ವಿಶೇಷ ಯೋಜನೆಗಳನ್ನು ಸರ್ಕಾರ ರೂಪಿಸಿದೆ.
* ಎಲ್ಲ ಜಿಲ್ಲೆಗಳಲ್ಲೂ ಉದ್ಯೋಗ, ಕೌಶಲ್ಯ ಅಭಿವೃದ್ದಿಗೆ ಶ್ರಮಿಸಿದೆ
* ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕದ ಸಾಧನೆ ಅಪೂರ್ವವಾಗಿದೆ
* ಬೆಂಗಳೂರಿನಲ್ಲಿ 198 ಇಂದಿರಾ ಕ್ಯಾಂಟೀನ್ ಸ್ಥಾಪಿಸಿ ರಿಯಾಯಿತಿ ದರದಲ್ಲಿ ತಿಂಡಿ, ಊಟ ನೀಡಲಾಗುತ್ತಿದೆ. ಈ ಯೋಜನೆಯನ್ನು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ವಿಸ್ತರಿಸಲು ತೀರ್ಮಾನಿಸಲಾಗಿದ್ದು, ಹಸಿವು ಮುಕ್ತ ಕರ್ನಾಟಕದತ್ತ ಹೆಜ್ಜೆ ಹಾಕಲಾಗಿದೆ.
* ರಾಜ್ಯದ ಜನರ ಹಸಿವು ನೀಗಿಸುವಲ್ಲಿ ಇಂದಿರಾ ಕ್ಯಾಂಟೀನ್ ಯಶಸ್ವಿಯಾಗಿದೆ. ಇಂದಿರಾ ಕ್ಯಾಂಟೀನ್‍ನಲ್ಲಿ ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
* ಮಹಿಳೆಯರ ಸಬಲೀಕರಣ ಮತ್ತು ಘನತೆಯ ರಕ್ಷಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ.
* ಎರಡನೇ ಬಾರಿಯೂ ಬಂಡವಾಳ ಆಕರ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.
* ನಗರದ ಜನಸಂಖ್ಯೆಗೆ ಅನುಗುಣವಾಗಿ ಸೇವೆ ಒದಗಿಸಲು ಮೆಟ್ರೋ 2ನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 72 ಕಿ.ಮೀ. ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ.
* ಇವತ್ತು ನಾವು ಸ್ವಾತಂತ್ರ್ಯ ಸೇನಾನಿಗಳ ತ್ಯಾಗವನ್ನು ನೆನಪು ಮಾಡಿಕೊಳ್ಳುತ್ತೇವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ, ಸೈನಿಕರ ಮತ್ತು ಸಿಬ್ಬಂದಿಗಳ ತ್ಯಾಗ ಮನೋಭಾವನೆಗೆ ಕೃತಜ್ಞತೆ ಸಲ್ಲಿಸುವುದಾಗಿ ರಾಜ್ಯಪಾಲರು ಹೇಳಿದ್ದಾರೆ
Comments are closed.