ಕರ್ನಾಟಕ

ಕಾವೇರಿ ಉಳಿವಿಗೆ ಕಾಫಿ ಬಿಡಿ: ಡಾ. ಖಾದರ್‌ ಸಲಹೆ

Pinterest LinkedIn Tumblr


ಬೆಂಗಳೂರು: “ಕಾವೇರಿ ನದಿ ಉಳಿಸಿಕೊಳ್ಳಬೇಕಾದರೆ ಕನ್ನಡಿಗರು ಕಾಫಿ ಕುಡಿಯುವುದನ್ನು ಬಿಡಬೇಕು’ ಎಂದು
ಆಹಾರ ತಜ್ಞ ಹಾಗೂ ಹೊಮಿಯೋಪಥಿ ವೈದ್ಯ ಡಾ. ಖಾದರ್‌ ಪರಿಹಾರ ಸೂತ್ರ ಮುಂದಿಟ್ಟಿದ್ದಾರೆ.

ಭಾನುವಾರ ನಗರದ ವಿಜಯ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ಉಪನ್ಯಾಸ ನೀಡಿದ ಅವರು,”ಭವಿಷ್ಯದಲ್ಲಿ ಕಾವೇರಿ ನದಿ ನಾವು ಕಾಣಬೇಕಾದರೆ ಕಾಫಿ ಕುಡಿಯುವುದನ್ನು ಬಿಡಬೇಕೆಂದು ಮನವಿ ಮಾಡಿದರು.

ನಾಡಿನ ಪಶ್ಚಿಮಘಟ್ಟ ಪರ್ವತ ಶ್ರೇಣಿ ಔಷಧೀಯ ಸಸ್ಯಗಳ ಕಣಜ ಆಗಿತ್ತು. ದೊಡ್ಡ ಸಂಖ್ಯೆಯಲ್ಲಿ ನೇರಳೆ ಮರಗಳು ನಮಗೆ ಕಾಣಸಿಗುತ್ತಿತ್ತು. ಅದರಿಂದ ಮಳೆ ನೀರು ಸಹಜವಾಗಿ ನದಿಗೆ ಹರಿದು ಹೋಗಲು ಅವಕಾಶವಿತ್ತು. ಬ್ರಿಟಿಷರು ಪಶ್ವಿ‌ಮ ಪರ್ವತ ಶ್ರೇಣಿಯಲ್ಲಿ ಕಾಫಿ ಗಿಡಗಳನ್ನು ನೆಟ್ಟರು. ಅದೊಂದು ವಾಣಿಜ್ಯ ಬೆಳೆ ಆಯಿತು. ಅದಕ್ಕಾಗಿ ಮಂಡಳಿಯೊಂದು ಸ್ಥಾಪನೆಯಾಯಿತು.

ಈಗ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದೆ. ಈ ಕಾಫಿ ಗಿಡಗಳು, ನೇರಳೆ ಸೇರಿ ಇನ್ನಿತರ ಔಷಧೀಯ ಸಸ್ಯಗಳ ಜಾಗ ಆಕ್ರಮಿಸಿಕೊಂಡಿರುವುದರಿಂದ ಕಾವೇರಿಗೆ ಕುತ್ತು ಬಂದಿದೆ. ಭವಿಷ್ಯದಲ್ಲಿ ಕಾವೇರಿ ಉಳಿಯಬೇಕು ಎಂದಾದರೆ, ಕಾಫಿ ಕುಡಿಯುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.

ಹಾಲು, ಅಲ್ಕೋಹಾಲ್‌, ಮಾಂಸ ವರ್ಜಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಆಹಾರ ಪದ್ಧತಿ ಸರಿ ಇದ್ದರೆ ಔಷಧಿ ಬೇಕಿಲ್ಲ. ಆಹಾರ ಪದ್ಧತಿ ಹಾದಿ ತಪ್ಪಿದರೆ ಯಾವ ಔಷಧಿಯೂ ಕೆಲಸ ಮಾಡಲ್ಲ. ಆರ್ಯುವೇದ ಅನ್ನುವುದು ವೈದ್ಯಕೀಯ ಪದ್ಧತಿ ಅಲ್ಲ. ಅದೊಂದು ಜೀವನ ಕ್ರಮ ಹೇಳಿಕೊಡುವ ಸಿದ್ಧಾಂತ. ಆದರೆ, ಅಲೋಪ ಥಿಯ ಭರಾಟೆಯಲ್ಲಿ ಆಯುರ್ವೇದ ಪಂಡಿತರು ಸಹ ಇದೊಂದು ವೈದ್ಯಕೀಯ ಪದ್ಧತಿ ಎಂದು ಹೇಳುವಂತಾಗಿದೆ.

ಆರೋಗ್ಯ ಕ್ಷೇತ್ರದಲ್ಲಿನ ಅತಿರೇಕದ ವ್ಯಾಪಾರೀಕರಣ ಅಧ್ಯಾತ್ಮ ಕ್ಷೇತ್ರಕ್ಕೂ ಪ್ರವೇಶಿಸಿದೆ ಎಂದು ಡಾ. ಖಾದರ್‌ ವಿಷಾದ ವ್ಯಕ್ತಪಡಿಸಿದರು.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಮಾತನಾಡಿ, ವಿಜ್ಞಾನದ ಸಾಧನೆಗಳು
ಮತ್ತು ಅವಿಷ್ಕಾರಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಬಳಸಿಕೊಂಡಿರುವುದೇ ಇಂದಿನ ಕೃಷಿ ಬಿಕ್ಕಟ್ಟಿಗೆ ಕಾರಣವಾಗಿದೆ.
ಕೃಷಿ ಕ್ಷೇತ್ರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾದರೆ ವಿಜ್ಞಾನದ ಬಳಕೆಯಲ್ಲಿ ನಿಯಂತ್ರಣ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ ಎಂದರು.

ಇದೇ ವೇಳೆ ಡಾ. ಖಾದರ್‌ ಅವರ ಸಿರಿಧಾನ್ಯಗಳ ಪ್ರಯೋಜನ ಮತ್ತು ಮಹತ್ವ ಅರಿತು “ತಿಳಿದು ತಿನ್ನೋಣ ಬನ್ನಿ’ ಪುಸ್ತಕದ ನಾಲ್ಕನೇ ಮುದ್ರಣದ ಪರಿಷ್ಕೃತ ಆವೃತ್ತಿ ಬಿಡುಗಡೆಗೊಳಿಸಲಾಯಿತು.

-ಉದಯವಾಣಿ

Comments are closed.