ಕರಾವಳಿ

ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನಿಗೆ ಪ್ರಿಯವಾದ ಹೆಮ್ಮಾಡಿ ಸೇವಂತಿಗೆ!

Pinterest LinkedIn Tumblr

ಕುಂದಾಪುರ: ಎತ್ತ ನೋಡಿದರೂ ಕಣ್ಮನ ಸೆಳೆಯುವ ಹಳದಿ ಬಣ್ಣದ ಹೂವಿನ ದರ್ಶನ. ಹೆಮ್ಮಾಡಿಯಲ್ಲಿನ ಗದ್ದೆಗಳಿಗೆ ಬಂದ್ರೇ ಸೇವಂತಿ ಹೂವಿನ ಘಮಘಮ ಸುವಾಸನೆ ಮನಸ್ಸಿಗೆ ಮುದ ನೀಡುತ್ತೆ. ಈ ಬಾರಿ ಸೇವಂತಿ ಬೆಳೆ ಉತ್ತಮವಾಗಿಯೇ ಬಂದಿದ್ದು ಕೃಷಿಕನ ಮುಖದಲ್ಲಿ ನಗು ಹೆಚ್ಚಿದೆ. ಹೆಮ್ಮಾಡಿ ಸೇವಂತಿಗೆ ಜಿಲ್ಲೆಗೆ ಫೇಮಸ್.

ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮ ಸೇವಂತಿಗೆ ಹೂವು ಬೆಳೆಗೆ ಬಾರೀ ಫೆಮಸ್ಸು. ಹೆಮ್ಮಾಡಿ ಗ್ರಾಮದ ಸುಳ್ಸೆ, ಹೊಸ್ಕಳಿ, ಹರೆಗೋಡು, ಕಟ್ಟು ಸೇರಿದಂತೆ ಈ ಭಾಗದಲಿ 25 ಎಕ್ರೆಗೂ ಅಧಿಕ ಭೂಮಿಯಲ್ಲಿ ಸೇವಂತಿಗೆ ಹೂವನ್ನು ವರ್ಷವೂ ಬೆಳೆಯಲಾಗುತ್ತೆ. ಕರಾವಳಿಯ ಬೇರೆಡೆಗಳಲ್ಲಿ ಎಲ್ಲಿಯೂ ಕಂಡುಬರದ ಈ ಸೇವಂತಿಗೆ ಹೂವಿನ ಬೆಳೆ ಹೆಮ್ಮಾಡಿಯಲ್ಲಿ ಹೇರಳವಾಗಿ ಸಿಗುತ್ತೆ. ಸೇವಂತಿಗೆ ಹೂವಿನ ಸಾಮ್ರಾಜ್ಯವೇ ಧರೆಗಿಳಿದಂತೆ ಈ ಗದ್ದೆಗಳನ್ನು ಕಂಡು ಕಣ್ತುಂಬಿಕೊಳ್ಳುವುದೇ ಒಂದು ಆನಂದವಾದರೆ ಇವುಗಳನ್ನು ಪೋಣಿಸಿ ಹೂಮಾಲೆ ಮಾಡಿ ಹೂವಿಗೆ ಇನ್ನಷ್ಟು ಅಂದ ನೀಡುವ ಮಹಿಳೆಯರ ಕುಸುರಿ ಕೆಲಸ ಇನ್ನೂ ಅಪರೂಪದ್ದು. ಸ್ಥಳೀಯ ಆಡು ಭಾಷೆ ಕುಂದಾಪುರ ಕನ್ನಡದಲ್ಲಿ ಈ ಹೂವನ್ನು ’ಹೆಮ್ಮಾಡಿ ಶ್ಯಾವಂತಿ’ ಎಂದು ಕರಿತಾರೆ.

ನೂರಾರು ವರ್ಷಗಳಿಂದಲೂ ಇಲ್ಲಿ ಸೇವಂತಿಗೆ ಬೆಳೆಯುವ ಮೂಲಕ ಕೃಷಿಕರು ಲಾಭದಾಯಕ ಬೆಳೆಯನ್ನಾಗಿಸಿಕೊಂಡಿದ್ದಾರೆ. ಭತ್ತದ ಕ್ರಷಿ ಬಳಿಕ ಖಾಲಿ ಬೀಳುವ ಗದ್ದೆಯಲ್ಲಿ ಸೇವಂತಿ ಹೂವನ್ನು ಬೆಳೆಯಲಾಗುತ್ತೆ. ಜುಲೈ ತಿಂಗಳಿಂದ ಸೇವಂತಿ ಗಿಡಗಳನ್ನು ನೆಟ್ಟು, ನೀರುಣಿಸಿ ಹಗಲಿರುಳು ತಮ್ಮ ಗದ್ದೆಗಳಲ್ಲಿ ಗಿಡಗಳನ್ನು ಪೋಣಿಸಿ ಬೇಕಾದ ರಸಗೊಬ್ಬರಗಳನ್ನು ಹಾಕಿ ಬೆಳೆಸಿದ ಸೇವಂತಿ ಕೃಷಿಯ ಫಸಲು ಚೆನ್ನಾಗಿ ಬೆಳೆಯಲು ಇಲ್ಲಿನ ಜನರು ಬಿಸಿಲು, ಮಳೆ ಗಾಳಿ ಎನ್ನದೇ ಪರಿಶ್ರಮ ಪಡುತ್ತಾರೆ.

(ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ)

ಹೆಮ್ಮಾಡಿಯಲ್ಲಿ ಬೆಳೆಯುವ ಅಪರೂಪದ ಸೇವಂತಿಗೆ ಹೂವಿಗೆ ಇನ್ನೊಂದು ಐತಿಹಾಸಿಕ ಪುರಾಣವಿದೆ. ಜಿಲ್ಲೆಯ ಕಾರಣಿಕ ಕ್ಷೇತ್ರವಾದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಈ ಸೇವಂತಿಗೆ ಪ್ರಿಯವಾದುದು. ಜನವರಿ ತಿಂಗಳಿನ 14ನೇ ತಾರೀಖಿನಂದು ಬರುವ ಮಕರ ಸಂಕ್ರಮಣ ಕಾಲದಲ್ಲಿ ಶ್ರೀ ಬ್ರಹ್ಮಲಿಂಗನಿಗೆ ಕೆಂಡಸೇವೆಯ ಸಂಭ್ರಮ. ಆ ಸಮಯದಲ್ಲಿ ಸೇವಂತಿಗೆ ಪುಷ್ಪವನ್ನು ಶ್ರೀ ದೇವರಿಗೆ ಅರ್ಪಿಸಿ ಬೇಡಿಕೊಂಡರೇ ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆಯೂ ಇದ್ದು ಸೇವಂತಿಗೆ ಪುಷ್ಪವನ್ನು ಕೆಂಡಕ್ಕೆ ಹಾಕುವ ಹರಕೆ ಹೂವೆಂದು ಕರೆಯಲಾಗುತ್ತೆ. ಮಕರ ಸಂಕ್ರಮಣದಂದು ಬ್ರಹ್ಮಲಿಂಗನಿಗೆ ಹೂವು ಅರ್ಪಿಸಿದ ನಂತರ ಹೆಮ್ಮಾಡಿ ಸೇವಂತಿ ರಾಜ್ಯದ ವಿವಿದೆಡೆಗಳಿಗೆ ಮಾರಾಟಕ್ಕಾಗಿ ಕಳುಹಿಸಲಾಗುತ್ತೆ. ತಮ್ಮ ಗದ್ದೆಗಳಲ್ಲಿ ಮೊದಲು ಬೆಳೆದ ಹೂವನ್ನು ಬ್ರಹ್ಮಲಿಂಗನ ಮುಡಿಗೇರಿದ ಮೇಲೆ ವಿವಿಧ ದೈವಸ್ಥಾನಗಳ ವಾರ್ಷಿಕ ಪೂಜೆಗೆ ಮಾರಾಟ ಮಾಡುವುದು ಇಲ್ಲಿನ ಕೃಷಿಕರ ರೂಢಿ.

ಕಳೆದ ಬಾರಿ ಹೆಮ್ಮಾಡಿ ಸೇವಂತಿಗೆ ಅವಧಿಗೆ ಮುನ್ನವೇ ಅರಳಿದ್ದರಿಂದ ಸೇವಂತಿ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿತ್ತು. ಮಾತ್ರವಲ್ಲದೇ ಸೊಳ್ಳೆರೋಗದಿಂದ ಬೆಳೆಗಾರರು ನಷ್ಟ ಅನುಭವಿಸಿದ್ರು. ಅಂದಾಜು ಸೇವಂತಿ ಬೆಳೆಗಾರರಿಗೆ ೧೦ ಲಕ್ಷಕ್ಕೂ ಅಧಿಕ ನಷ್ಟವಾಗಿತ್ತು. ಆದರೇ ಇದಕ್ಕೆ ಮಾತ್ರ ಯಾವುದೇ ಪರಿಘಾರ ಮಾತ್ರ ಇನ್ನೂ ಈ ಕಷ್ಟ ಜೀವಿಗಳಿಗೆ ಸಿಕ್ಕಿಲ್ಲ.

ಒಟ್ಟಿನಲ್ಲಿ ಹೆಮ್ಮಾಡಿಯ ಸೇವಂತಿ ಹೂ ಕಳೆದ ಬಾರಿ ರೈತನ ಕಿಸೆಗೆ ಕತ್ತರಿ ಹಾಕಿತ್ತು. ಈ ಬಾರಿಯಾದರೂ ಅವರ ಕಠಿಣ ಪರಿಶ್ರಮಕ್ಕೆ ಬೆಲೆ ಸಿಗಲಿ. ಬೆಳೆಗಾರರ ಮುಖದಲ್ಲಿ ಮಂದಹಾಸ ಹೆಚ್ಚಲಿ.

ಚಿತ್ರ, ವರದಿ- ಯೋಗೀಶ್ ಕುಂಭಾಸಿ

Comments are closed.