ರಾಷ್ಟ್ರೀಯ

ಸಮಸ್ಯೆ ಇತ್ಯರ್ಥಕ್ಕೆ ಹೊರಗಿನವರ ಮದ್ಯಪ್ರವೇಶ ಬೇಕಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್

Pinterest LinkedIn Tumblr

ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಗಳ ವಿರುದ್ಧ ಸುದ್ದಿಗೋಷ್ಠಿ ಕರೆದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಮೂರ್ತಿಗಳು ಇದೀಗ ತಮ್ಮ ಸಮಸ್ಯೆ ಇತ್ಯರ್ಥಕ್ಕೆ ಹೊರಗಿನವರ ಮದ್ಯಪ್ರವೇಶ ಬೇಕಿಲ್ಲ ಎಂದು ಹೇಳಿದ್ದಾರೆ.

ಅತ್ತ ದೇಶದ ಸರ್ವೋಚ್ಛ ನ್ಯಾಯಾಲಯದಲ್ಲಿನ ಬಿಕ್ಕಟ್ಟು ಶಮನಕ್ಕೆ ಕೇಂದ್ರ ಸರ್ಕಾರದ ಸತತ ಪ್ರಯತ್ನಗಳು ನಡೆಯುತ್ತಿರುವಂತೆಯೇ ಇತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿನ ಸಮಸ್ಯೆಯನ್ನು ನಾವು ಆಂತರಿಕವಾಗಿ ಇತ್ಯರ್ಥಪಡಿಸಿಕೊಳ್ಳುತ್ತೇವೆ. ಇದರಲ್ಲಿ ಹೊರಗಿನವರ ಮದ್ಯ ಪ್ರವೇಶ ಬೇಕಿಲ್ಲ ಎಂದು ಹೇಳಿದ್ದಾರೆ. “ಸರ್ವೋಚ್ಚ ನ್ಯಾಯಾಲಯದಲ್ಲಿ ಯಾವುದೇ ಸಾಂವಿಧಾನಿಕ ಬಿಕ್ಕಟ್ಟಿಲ್ಲ; ಕೇವಲ ನಿಯಮಾನುಸರಣೆಯಲ್ಲಿನ ತೊಂದರೆಗಳನ್ನು ಮಾತ್ರವೇ ನಾವು ಆಕ್ಷೇಪಿಸಿದ್ದೇವೆ’ ಎಂದು ಹೇಳಿದರು.

ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರಿಗೆ ಎರಡು ತಿಂಗಳ ಹಿಂದೆಯೇ ನಾವು ಒಪ್ಪಿಸಿದ ಪತ್ರವನ್ನು ನಿನ್ನೆ ನಾವು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ನಾವು ಹೇಳಬೇಕಾದ ಎಲ್ಲ ವಿಷಯಗಳು ಅದರಲ್ಲಿವೆ’ ಎಂದು ನ್ಯಾ. ಕುರಿಯನ್‌ ಹೇಳಿದರು. ಇನ್ನು ಭಾರತದ ಬಾರ್‌ ಕೌನ್ಸಿಲ್‌, ಸರ್ವೋಚ್ಚ ನ್ಯಾಯಾಲಯದಲ್ಲಿನ ಬಿಕ್ಕಟ್ಟನ್ನು ದುರದೃಷ್ಟಕರ ಎಂದು ಹೇಳಿತ್ತು.. ಅಲ್ಲದೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಸುಪ್ರೀಂ ಕೋರ್ಟ್ ಬಂಡಾಯ ಶಮನಕ್ಕಾಗಿ 7 ಮಂದಿಯ ಸಮಿತಿ ರಚನೆ ಮಾಡಿತ್ತು.

ಇನ್ನು ಇದಕ್ಕೆ ಉಲ್ಟಾ ಹೊಡೆದಿರುವ ಮತ್ತಿಬ್ಬರು ನ್ಯಾಯಾಧೀಶರು ನ್ಯಾಯಾಂಗ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಮುಖ್ಯ ನ್ಯಾಯಾಧೀಶರ ವಿರುದ್ಧ ಬಂಡಾಯವೂ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ನಡೆ ಬೆನ್ನಲ್ಲೇ ಈ ಹಿಂದೆ ಬಂಡಾಯ ನ್ಯಾಯಮೂರ್ತಿಗಳ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ನ್ಯಾ. ರಂಜನ್‌ ಗೊಗೋಯಿ ಅವರು ಇಂದು “ನ್ಯಾಯಾಂಗದಲ್ಲಿ ಯಾವುದೇ ಬಿಕ್ಕಟ್ಟಿಲ್ಲ’ ಎಂದು ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಗಗೋಯಿ ಅವರು, ನಮ್ಮಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಎಂದು ಹೇಳಿದರು. ಅಂತೆಯೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಕೃತ್ಯ ಶಿಸ್ತನ್ನು ಉಲ್ಲಂಘನೆ ಮಾಡಿದಂತಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಗೊಗೋಯಿ ಯಾವುದೇ ಪ್ರತಿಕ್ರಿಯೆ ನೀಡದೆ, “ನನಗೀಗ ಲಕ್ನೋ ವಿಮಾನವನ್ನು ಹಿಡಿಯುವುದಿದೆ; ನಾನೀಗ ಏನನ್ನೂ ಹೇಳಲಾರೆ’ ಎಂದು ಹೇಳುವ ಮೂಲಕ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು.

Comments are closed.