ರಾಷ್ಟ್ರೀಯ

ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಟ್ಟ ಕೊರೆದು ರಸ್ತೆ ಮಾಡಿ ಸುದ್ದಿಯಾಗಿರುವ ತಂದೆ !

Pinterest LinkedIn Tumblr

ಭುವನೇಶ್ವರ: ಪತ್ನಿಯ ಆಸ್ಪತ್ರೆಗೆ ಸೇರಿಸಲಾಗದೇ ಆಕೆಯ ಕಳೆದುಕೊಂಡಿದ್ದ ಬಿಹಾರದ ಮೌಂಟೇನ್ ಮ್ಯಾನ್ ದಶರಥ್ ಮಾಂಜಿ ಕಥೆ ಬಾಲಿವುಡ್ ಸಿನಿಮಾ ಆದ ಬೆನ್ನಲ್ಲೇ ಒಡಿಶಾದ ವ್ಯಕ್ತಿಯೋರ್ವ ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಟ್ಟ ಕೊರೆದು ರಸ್ತೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.

ಒಡಿಶಾದ ಕಂದಮಾಲ್ ಜಿಲ್ಲೆಯ ಜಲಂಧರ್ ನಾಯಕ್ ಇದೀಗ ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಬೆಟ್ಟ ಕೊರೆದು ಬರೊಬ್ಬರಿ 8 ಕಿ.ಮೀ ರಸ್ತೆ ನಿರ್ಮಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ. ಕಂದಮಾಲ್ ಜಿಲ್ಲೆಯ ಗುಮ್ಸಾಹಿ ಎಂಬ ಕುಗ್ರಾಮದಲ್ಲಿ ಜಲಂಧರ್ ನಾಯಕು ಕುಟುಂಬವಿದ್ದು, ಆತನ ಮಕ್ಕಳು ಶಾಲೆಗೆ ತೆರಳಲು ಸೂಕ್ತ ರಸ್ತೆ ಸೌಲಭ್ಯವಿಲ್ಲ. ಸಮೀಪದ ಫುಲ್ಬಾನಿ ಟೌನ್ ನಲ್ಲಿರುವ ಶಾಲೆಗೆ ತೆರಳಲು ಮಕ್ಕಳು ಬೆಟ್ಟಗುಡ್ಡಗಳನ್ನು ಹತ್ತಿಳಿಯಬೇಕಿತ್ತು. ಮೂಲತಃ ತರಕಾರಿ ವ್ಯಾಪಾರಿಯಾಗಿರುವ ಜಲಂಧರ್ ನಾಯಕ್ ತನ್ನ ಮಕ್ಕಳಿಗಾಗಿ ವ್ಯಾಪರ ಬಿಟ್ಟು ರಸ್ತೆ ಅಗೆಯಲು ಆರಂಭಿಸಿದ್ದ. ಗುಮ್ಸಾಹಿ ಗ್ರಾಮದಲ್ಲಿ ಕೇವಲ ಜಲಂಧರ್ ನಾಯಕ್ ಕುಟುಂಬ ಮಾತ್ರ ವಾಸವಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಈ ಗ್ರಾಮದಲ್ಲಿ ಹಲವು ಕುಟುಂಬಗಳಿತ್ತಾದರೂ ಇಲ್ಲಿ ಜೀವಿಸಲಾಗದೇ ಹಲವು ಕುಟುಂಬಗಳ ಬೇರೆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದವು.

ಮಕ್ಕಳ ಸಂಕಷ್ಟವನ್ನು ಅರಿತಿದ್ದ ಜಲಂಧರ್ ನಾಯಕ್ ತನ್ನ ಗುಮ್ಸಾಹಿ ಗ್ರಾಮದಿಂದ ಫುಲ್ಬಾನಿ ಟೌನ್ ಗೆ ಸಂಪರ್ಕ ಕಲ್ಪಿಸಲು ಅಡ್ಡವಾಗಿ ಇದ್ದ ಬೆಟ್ಟದಲ್ಲಿ ರಸ್ತೆಕೊರೆಯಲು ಆರಂಭಿಸಿದ್ದನಂತೆ. ಕಳೆದೆರಡು ವರ್ಷಗಳ ಹಿಂದೆ ಜಲಂಧರ್ ನಾಯಕ್ ಏಕಾಂಗಿಯಾಗಿ ರಸ್ತೆ ತೋಡಲು ಆರಂಭಿಸಿದ್ದು, ಇದೀಗ ಗುಮ್ಸಾಹಿ ಗ್ರಾಮಕ್ಕೆ ರಸ್ತೆ ನಿರ್ಮಾಣವಾಗಿದೆ. ಜಲಂಧರ್ ನಾಯಕ್ ಪ್ರತೀ ನಿತ್ಯ ಸುಮಾರು 8 ಗಂಟೆಗಳ ಕಾಲ ಸತತವಾಗಿ 2 ವರ್ಷ ರಸ್ತೆ ಅಗೆದು ಇದೀಗ ಸುಮಾರು 8.ಕಿ,ಮೀ ರಸ್ತೆ ನಿರ್ಮಾಣ ಮಾಡಿದ್ದಾನೆ.

ಇದೀಗ ಜಲಂಧರ್ ನಾಯಕ್ ರಸ್ತೆ ನಿರ್ಮಾಣ ವಿಚಾರ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಸ್ಥಳೀಯ ಜಿಲ್ಲಾ ಆಡಳಿತ ಜಲಂಧರ್ ನಾಯಕ್ ಅವರಿಗೆ ಬೇಕಾದ ಎಲ್ಲ ನೆರವನ್ನೂ ನೀಡಲು ಸಿದ್ಧ ಎಂದು ಹೇಳಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಡಿಒ ಅಧಿಕಾರಿ ಎಸ್ ಕೆ ಜೆನಾ ಗುಮ್ಸಾಹಿ ಗ್ರಾಮಕ್ಕೆ ಸೂಕ್ತ ಮೂಲಭೂತ ಸೌಕರ್ಯ ಒದಗಿಸುವುದಾಗಿ ಹೇಳಿದ್ದಾರೆ.

Comments are closed.