
ಬೆಂಗಳೂರು: ದೇಶದಲ್ಲಿ ಪ್ರತಿ 45 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆಗೆ ಶರಣಾಗುತ್ತಿದ್ದು ಇದುವರೆಗೆ 75 ಲಕ್ಷ ರೈತರು ಪ್ರಾಣಕಳೆದುಕೊಂಡಿದ್ದಾರೆ. ರೈತರ ಆರ್ಥಿಕ ಸ್ವಾತಂತ್ರ್ಯ ಕಿತ್ತುಕೊಂಡು ಸಾವಿಗೆ ಶರಣಾಗುವಂತಹ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪುರಭವನದಲ್ಲಿ ಗುರುವಾರ ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನ ಹಮ್ಮಿಕೊಂಡಿದ್ದ “ಜನತಾ ಚಳವಳಿಯಾಗಿ ಮಾನವ ಹಕ್ಕುಗಳು’ ಕುರಿತ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಭಾಷೆಯಲ್ಲಿ ರೈತರದು ಆತ್ಮಹತ್ಯೆಯಾಗಿರಬಹುದು. ಆದರೆ, ವಾಸ್ತವವಾಗಿ ಇದು ಬದುಕುವ ಹಕ್ಕು ಕಿತ್ತುಕೊಂಡಂತಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಒಂದೆಡೆ ಶ್ರೀಮಂತರ ಸೃಷ್ಟಿಯಾಗುತ್ತಿದ್ದರೆ ಮತ್ತೂಂದೆಡೆ ಬಡವರ್ಗವನ್ನು ನಿರ್ಗತಿಕರನ್ನಾಗಿ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಸಮ ಸಮಾಜ ನಿರ್ಮಿಸುವ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಾಗರಿಕರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳಿದರು.
ಸಂವಿಧಾನ ಬದಲಾವಣೆ ಅಸಾಧ್ಯ: ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಮಾತನಾಡಿ, ಸಂವಿಧಾನದ ಬದಲಾವಣೆ ಕೂಗು ಕೇಳಿಬರುತ್ತಿದೆ. ಆದರೆ, ಇದು ಯಾವ ಕಾಲಕ್ಕೂ ಮತ್ತು ಯಾವ ಕಾರಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ತಿಳಿಸಿದರು. ಆಯಾ ಸಂದರ್ಭಕ್ಕೆ ಅನುಗುಣವಾಗಿ ಸಮಾಜದ ಎಲ್ಲ ವರ್ಗಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂವಿಧಾನದಲ್ಲಿ ತಿದ್ದುಪಡಿಗಳನ್ನು ಮಾಡಲು ಅವಕಾಶ ಇದೆ.
ಸಂವಿಧಾನದ ಉಲ್ಲಂಘನೆಯೇ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದು ಕೆಲವೊಮ್ಮೆ ಸರ್ಕಾರದಿಂದಲೂ ನಡೆಯುತ್ತಿದೆ ಎಂದರು. ಹಿರಿಯ ವಕೀಲ ಶಂಕರಪ್ಪ, ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಹಿರಿಯ ಉಪಾಧ್ಯಕ್ಷರಾದ ಪ್ರೊ. ಗಿರೀಶ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.
-ಉದಯವಾಣಿ
Comments are closed.