ಇತ್ತೀಚಿನ ದಿನಗಳಲ್ಲಿ ದೊಡ್ಡವರು ,ಚಿಕ್ಕವರು ಎನ್ನುವ ಭೇದಭಾವವಿಲ್ಲದೆ ಎಲ್ಲರೂ ಸೆಲ್ ಫೋನ್ ಗಳನ್ನು ಉಪಯೋಗಿಸುತ್ತಿದ್ದಾರೆ. ಬೆಳಿಗ್ಗೆ ನಿದ್ದೆಯಿಂದ ಎದ್ದಾಗಿನಿಂದ ಹಿಡಿದು ಮಲಗುವವರೆಗೂ ಸೆಲ್ ಫೊನ್ ಉಪಯೋಗಿಸುವವರೇ ಅಧಿಕ. ಚಿಕ್ಕ ಮಕ್ಕಳಿಗಂತೂ ಸೆಲ್ ಫೋನ್ ಗಳೆಂದರೆ ಪಂಚಪ್ರಾಣ. ಒಂದು ವೇಳೆ ಚಿಕ್ಕ ಮಕ್ಕಳ ಕಿವಿ, ತಲೆಯ ಬಳಿ ಸೆಲ್ ಫೋನ್ ಗಳಿದ್ದರೆ ಅಪಾಯವೇ ಎಂದು ಅನೇಕ ಪೋಷಕರು ಪ್ರಶ್ನಿಸುತ್ತಾರೆ. ಬನ್ನಿ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳೋಣ.
ರೇಡಿಯೇಷನ್ ಇದ್ದೇ ಇರುತ್ತದೆ.
ನಾವು ಸೆಲ್ ಫೋನ್ ಮೂಲಕ ಇತರರನ್ನು ಸಂಪರ್ಕಿಸದರೂ, ಮೆಸೇಜ್ ಗಳನ್ನು ಕಳುಹಿಸಿದರೂ ರೇಡಿಯೇಷನ್ ಅನ್ನುವುದು ಆಗಲೇ ಬೇಕು. ರೇಡಿಯೇಷನ್ ಸೆಲ್ ಫೋನ್ ಗಳಿಂದಲೂ ಹಾಗು ಟವರ್ ಗಳಿಂದಲೂ ಹೊರಹೊಮ್ಮುತ್ತದೆ. ಮಾತನಾಡುತ್ತಿರು ವಾಗ ಸೆಲ್ ಫೋನ್ ಬಿಸಿಯಾಗುತ್ತಿದ್ದರೆ ರೇಡಿಯೇಷನ್ ಹೊರಹೊಮ್ಮುತ್ತಿದೆ ಎಂದು ಅರ್ಥ.
ಮಕ್ಕಳಿಗೆ ಅಪಾಯಕಾರಿಯೇ..?
ಮಾತನಾಡುವಾಗ ಸೆಲ್ ಫೋನ್ ಅನ್ನು ಕಿವಿಯ ಬಳಿ ಇರಿಸಿಕೊಳ್ಳುವುದು ಸಹಜ. ಮಕ್ಕಳ ವಿಷಯಕ್ಕೆ ಬಂದಲ್ಲಿ ಇದು ಬಹಳ ಅಪಾಯಕಾರಿ. ಯಾಕೆಂದರೆ… ರೇಡಿಯೇಷನ್ ನಿಂದ ಮೆದುಳಿಗೆ ಹಾನಿಯಾಗುತ್ತದೆ. ಕಿವಿ ನೋವಿಗೆ ಕಾರಣವಾಗುತ್ತದೆ. ರೇಡಿಯೇಷನ್ ಮಟ್ಟ ಅಧಿಕವಾದಲ್ಲಿ ಬಾಯಲ್ಲಿ ಹುಣ್ಣುಗಳಾಗುವ ಸಾಧ್ಯತೆಯಿದೆ. ಅದೇ ರೀತಿ ಶರೀರದ ಬೆಳವಣಿಗೆಯಲ್ಲಿ ದುಷ್ಪರಿಣಾಮ ಬೀರುತ್ತದೆ. ಆದುದರಿಂದ ಸೆಲ್ ಫೋನ್ ಗಳನ್ನು ಸಾಧ್ಯವಾದಷ್ಟು ಮಕ್ಕಳ ಕಿವಿ ಹಾಗೂ ತಲೆಯಿಂದ ದೂರವಿಡುವುದು ಉತ್ತಮ. ರೇಡಿಯೇಷನ್ ನಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆಯೆಂದು ಹೇಳುತ್ತಾರಾದರೂ ಇನ್ನೂ ನಿರೂಪಿಸಲಾಗಿಲ್ಲ.
ಮಕ್ಕಳು ಫೋನ್ ಬೇಕೆಂದು ಕೇಳಿದಲ್ಲಿ ಹೀಗೆ ಮಾಡಿ…
ಸಾಮಾನ್ಯವಾಗಿ ಮಕ್ಕಳು ನಮ್ಮ ಹಾವಭಾವಗಳನ್ನೇ ಅನುಕರಿಸುತ್ತಾರೆ. ಆದುದರಿಂದ ನೀವು ಫೋನ್ ಬಳಸುವಾಗ ಹೆಡ್ ಫೋನ್ , ಇಯರ್ ಫೋನ್ ಬಳಸುವುದನ್ನು ಮಾಡಿದರೆ ಮಕ್ಕಳೂ ಸಹ ನಿಮ್ಮನ್ನೇ ಅನುಕರಿಸುತ್ತಾರೆ. ಲೌಡ್ ಸ್ಪೀಕರ್ ಆನ್ ಮಾಡಿ ಮಾತ ನಾಡುವುದರಿಂದ ರೇಡಿಯೇಷನ್ ಪ್ರಭಾವ ಕಡಿಮೆಯಾಗುತ್ತದೆ. ಕಡಿಮೆ ರೇಡಿಯೇಷನ್ ಇರುವ ಫೋನ್ ಗಳು ಮಾರುಕಟ್ಟೆ ಯಲ್ಲಿವೆ . ಅಂತಹ ಫೋನ್ ಗಳನ್ನೇ ಖರೀದಿಸಿ.

Comments are closed.