ಕರಾವಳಿ

ನಾಯಕಿ ಬುಲೆಟ್‌ನಲ್ಲಿ ಎಂಟ್ರಿ… ನಾಳೆ ರಾಜ್ಯಾದ್ಯಂತ `ರಂಗ್ ರಂಗ್‌ದ ದಿಬ್ಬಣ’ ಬಿಡುಗಡೆ

Pinterest LinkedIn Tumblr

ಮಂಗಳೂರು: ವಾರಿನ್ ಕಂಬೈನ್ಸ್ ಲಾಂಛನದಲ್ಲಿ ತಯಾರಾಗಿರುವ ಶರತ್ ಕೋಟ್ಯಾನ್ ನಿರ್ಮಾಣದ ಕೃಷ್ಣಪ್ರಸಾದ್ ಉಪ್ಪಿನಕೋಟೆ ನಿರ್ದೇಶನದ ತುಳು ಚಿತ್ರ `ರಂಗ್ ರಂಗ್ದ ದಿಬ್ಬಣ’ ನಾಳೆ (ನ.3 ) ರಾಜ್ಯಾದ್ಯಂತ ತೆರೆ ಕಾಣಲಿದೆ.

ಚಿತ್ರದ ಬಗ್ಗೆ ಖ್ಯಾತ ನಟ ದಿನೇಶ್ ಅತ್ತಾವರ್ ಮಾಹಿತಿ ನೀಡಿದರು. ಮಂಗಳೂರು, ಉಡುಪಿ ಸೇರಿದಂತೆ ರಾಜ್ಯಾದ್ಯಂತ ನಾಳೆ ಏಕಕಾಲದಲ್ಲಿ ಚಿತ್ರ ತೆರೆಕಾಣಲಿದೆ. ಕರಾವಳಿಯ ಪ್ರತಿಭಾವಂತ ಯುವಕರು ನಿರ್ಮಿಸುತ್ತಿದ್ದು, ವಿಭಿನ್ನ ಕಥಾಹಂದರದ ಜೊತೆಗೆ ಮನರಂಜನಾತ್ಮಕ ಮತ್ತು ಕೌಟುಂಬಿಕವಾಗಿ ನೋಡುವ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು, ಈಗಾಗಲೇ ಹಾಡುಗಳು ಜನಪ್ರಿಯವಾಗಿದೆ. ಚಂದ್ರಕಾತ್ ಸಂಗೀತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಬಾಲಿವುಡ್ ಹಿನ್ನೆಲೆ ಗಾಯಕರಾದ ಉದಿತ್ ನಾರಾಯಣ್, ಜಾವೇದ್ ಅಲಿ, ಅನುರಾಧಾ ಭಟ್ ಮೊದಲಾವದರು ಕಂಠದಾನ ಮಾಡಿದ್ದಾರೆ.ಸಂಪೂರ್ಣ ಕರಾವಳಿಯಲ್ಲಿ ಚಿತ್ರೀಕರಣಗೊಂಡಿದೆ ಎಂದು ದಿನೇಶ್ ಅತ್ತಾವರ್ ತಿಳಿಸಿದರು.

ಚಿತ್ರದ ನಟಿಯರಲ್ಲಿ ಒಬ್ಬರಾದ ಸಂಹಿತಾ ಶಾ ಮಾತನಾಡಿ, ತುಳು ಸಿನೆಮಾರಂಗದಲ್ಲಿ ಇದೇ ಪ್ರಥಮ ಬಾರಿಗೆ ಬುಲೆಟ್ ಬೈಕ್‌ನಲ್ಲಿ ಎಂಟ್ರಿ ನೀಡುವಂತಹ ಸವಾಲಿನ ಪಾತ್ರವನ್ನು ಚಿತ್ರದಲ್ಲಿ ತನಗೆ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಕಾಲೇಜು ಹುಡುಗರು ಪ್ರೀತಿ ಪ್ರೇಮದ ಬಲೆಗೆ ಬಿದ್ದು, ಆ ಬಳಿಕ ನಡೆಯುವ ಅವಾಂತರಗಳನ್ನು ಬಿಚ್ಚಿಡುವ ಚಿತ್ರ ಇದಾಗಿದೆ. ಆಕ್ಷನ್, ಸೆಂಟಿಮೆಂಟ್ ಹಾಗೂ ಲವ್ವರ್ ಬಾಯ್ ಪಾತ್ರವನ್ನು ನಿಭಾಯಿಸಿದ್ದೇನೆ ಎಂದು ಚಿತ್ರದ ನಾಯಕ ನಟ ರವಿರಾಜ್ ಶೆಟ್ಟಿ ಹೇಳಿದರು.

ಚಿತ್ರ ನಿರ್ಮಾಪಕ ಬೆಂಗಳೂರಿನ ಯುವ ಉಯಮಿ ಶರತ್ ಕೋಟ್ಯಾನ್ ಮಾತನಾಡಿ, ತುಳುನಾಡಿನ ಅಪರೂಪದ ಪ್ರೇಮ ಕಥೆ ಹಾಗೂ ಕಾಮಿಡಿ ದೃಶ್ಯಗಳಿಂದ ಕೂಡಿದ ಚಿತ್ರವನ್ನು ಕುಟುಂಬ ಸಮೇತರಾಗಿ ನೋಡಬಹುದಾಗಿದೆ. ಕಡಲಮಗೆ ಚಿತ್ರಕತೆ ಬರೆದಿರುವ ನಿರ್ದೇಶಕ ಎಸ್. ನಾರಾಯಣ್ ಗರಡಿಯಲ್ಲಿ ಪಳಗಿರುವ ಯುವ ನಿರ್ದೇಶಕರು ಚಿತ್ರಕ್ಕೆ ಚಿತ್ರಕತೆ ಬರೆದಿದ್ದಾರೆ ಎಂದು ತಿಳಿಸಿದರು.

ಚಿತ್ರದ ನಿರ್ದೇಶಕ ಕೃಷ್ಣ ಪ್ರಸಾದ್ ಉಪ್ಪಿನಕೋಟೆ ಮಾತನಾಡಿ, ಚಿತ್ರದಲ್ಲಿ ನಾಯಕ ನಟರಾಗಿ ರವಿರಾಜ್ ಶೆಟ್ಟಿ ನಟಿಸಿದ್ದು, ಇನ್ನೋರ್ವ ನಾಯಕಿಯಾಗಿ ಸ್ವಾತಿ ಬಂಗೇರ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಖ್ಯಾತ ರಂಗ ನಟರು ಹಾಗೂ ಚಿತ್ರ ನಟರಾದ ದಿನೇಶ್ ಅತ್ತಾವರ್, ಉಮೇಶ್ ಮಿಜಾರ್, ರಾಘವೇಂದ್ರ ರೈ, ರಂಜನ್ ಬೋಳೂರು ಮುಂತಾದವರು ನಟಿಸಿದ್ದಾರೆ. ಆರ್.ಜೆ. ರೂಪೇಶ್ ಅವರು ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಸಂಗೀತ ನಿರ್ದೇಶಕ ಚಂದ್ರಕಾಂತ್, ನಾಯಕಿ ಸ್ವಾತಿ ಬಂಗೇರ, ನಟ ಉಮೇಶ್ ಮಿಜಾರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.