ಕರಾವಳಿ

ದುಬಾರಿ ಶ್ರವಣ ಸಾಧನವನ್ನು ಕಳೆದುಕೊಂಡ ಬಾಲಕಿಯ ಮೌನ ರೋಧನ

Pinterest LinkedIn Tumblr

ಕುಂದಾಪುರ: ಅದೆಷ್ಟೋ ಪರಿಶ್ರಮದಿಂದ, ಬವಣೆಯಿಂದ ಬಡತನದಲ್ಲಿಯೇ ಪುಟ್ಟ ಬಾಲಕಿಗೆ ಸರಿಸುಮಾರು ಒಟ್ಟು 8 ಲಕ್ಷದ ವೆಚ್ಚದಲ್ಲಿ ಅಳವಡಿಸಲಾದ ಶ್ರವಣಸಾಧನದ ಹೊರಭಾಗದ ಸುಮಾರು ೩.೫ ಲಕ್ಷದ ಹಿಯರಿಂಗ್ ಹೆಡ್ ಮಂಗಳೂರಿನಿಂದ ಕುಂದಾಪುರಕ್ಕೆ ಬಸ್ಸೊಂದರಲ್ಲಿ ಸಂಚರಿಸುವಾಗ ಉಡುಪಿ ಸಮೀಪ ಕಳೆದು ಹೋಗಿದೆ.

ಭಟ್ಕಳ ಮಗ್ದೂಮ್ ಕಾಲನಿ ನಿವಾಸಿ ಶರೀಫ್ ದಂಪತಿಗಳ ಆರು ವರ್ಷ ಪ್ರಾಯದ ಝಕಿಯಾ ನಿಹಾರ್ ಎಂಬ ಬಾಲಕಿಯೇ ಈ ಶ್ರವಣ ಯಂತ್ರ ಕಳೆದು ಕೊಂಡಿರುವ ದುರ್ದೈವಿಯಾಗಿದ್ದು, ತನ್ನ ತಾಯಿಯೊಡನೆ ಮಂಗಳೂರಿನ ಯೆನೋಪೊಯಾ ಆಸ್ಪತ್ರಗೆ ವಾರಂಪ್ರತಿಯಂತೆ ಚಿಕಿತ್ಸಾ ತರಬೇತಿಗೆ ಒಳಪಟ್ಟು ಹಿಂತಿರುಗುವಾಗ ಮಂಗಳವಾರ ಸಂಜೆ ಸುಮಾರಿಗೆ ಈ ಘಟನೆ ನಡೆದಿದೆ.

ಬಡ ಕುಟುಂಬ ಕಂಗಾಲು…..
ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಈ ಮಗು ಹುಟ್ಟಿತ್ತಲೇ ಶ್ರವಣ ಸಂಬಂಧಿ ಸಮಸ್ಯೆ ಹಾಗೂ ಮಾತನಾಡಗದೇ ಇರುವ ಪರಿಸ್ಥಿತಿಯಲ್ಲಿದ್ದಾಕೆ. ಇದು ಹೆತ್ತವರ ಅನುಭವಕ್ಕೆ ಬರುತ್ತಿದ್ದಂತೆ ಹತ್ತು ಹಲವು ವೈದ್ಯರನ್ನು ಸಂಪರ್ಕಿಸಿದ್ದರು.ಅಂತಿಮವಾಗಿ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯಲ್ಲಿ ಮಗುವನ್ನು ತಪಾಸಣೆ ನಡೆಸಿದ ವೈದ್ಯರು ತಲೆಯಭಾಗವನ್ನು ಕಿವಿಯ ಸಮೀಪ ಸೀಳಿ ಒಳಗೆ ಯಂತ್ರವನ್ನು ಆಳವಡಿಸಿ ಹೊರಬಾಗದಲ್ಲಿ ಅದಕ್ಕೆ ಪೂರಕವಾಗುವಂತೆ ಹಿಯರಿಂಗ್ ಆಳವಡಿಸುವ ಚಿಕಿತ್ಸಾ ವಿಧಾನ ಬಗ್ಗೆ ಹೇಳಿದ್ದರು.

ದುಬಾರಿ ಯಂತ್ರ ಅಳವಡಿಸಿದ್ದರು…
ವಿದೇಶದಿಂದ ಆಮದು ಮಾಡಿಕೊಳ್ಳುವ ಈ ಶ್ರವಣ ಸಾಧನದ ವೆಚ್ಚವು ತೀರಾ ದುಬಾರಿಯಾಗಿದ್ದು ವೆಚ್ಚವನ್ನು ಭರಿಸುವ ಬಗ್ಗೆ ಬಡ ದಂಪತಿಗಳು ತೀರಾ ಆತಂಕಿತರಾಗಿದ್ದರು. ಆದರೆ ಮುಗ್ಧ ಮಗುವಿನ ಭವಿಷ್ಯಕ್ಕಾಗಿ ಹಗಲು ರಾತ್ರಿಯೆಂಬಂತೆ ಬವಣೆಪಟ್ಟ ದಂಪತಿಗಳ ನೋವಿಗೆ ಸ್ಪಂದಿಸಿದ ಸಚಿವ ಯು.ಟಿ. ಖಾದರ್ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿನಿಧಿಯಿಂದ ಒಂದಷ್ಟು ಭಾಗದ ಧನವನ್ನು ತೆಗೆಸಿಕೊಡುವುದರಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಕಳೆದ ಒಂದೂವರೆ ವರ್ಷಗಳ ಹಿಂದೆ ಬಾಲಕಿ ಝಕಿಯಾಳ ಕಿವಿಯ ಹಿಂಭಾಗದ ತಲೆಯ ಭಾಗವನ್ನು ಸೀಳಿ ಈ ದುಬಾರಿ ಯಂತ್ರವನ್ನು ಅಳವಡಿಸುವುದರಲ್ಲಿ ಬೆಂಗಳೂರಿನ ಮಹಾವೀರ ಜೈನ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದರು. ಆಶ್ಚರ್ಯವೆಂಬಂತೆ ಚಿಕಿತ್ಸೆಗೆ ಒಳಪಟ್ಟ ಬಾಲಕಿ ಝಕಿಯಾ ಕೇಳಲು ಶಕ್ತಳಾಗಿದ್ದಳಲ್ಲದೆ ನಿಧಾನವಾಗಿಮಾತನಾಡಲೂ ಆರಂಭಿಸಿದ್ದಳು.

ಕಳೆದು ಹೋದ ಯಂತ್ರ…
ಚಿಕಿತ್ಸೆಯ ಪ್ರಕಾರ ವಾರಕ್ಕೆರಡು ಸಲ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರ ಕೌನ್ಸಲಿಂಗ್ ಗೆ ಒಳಪಡುವುದು ಅನಿವಾರ್ಯವಾಗಿದ್ದಿತು. ಅದರಂತೆ ಮೊನ್ನೆ ಮಂಗಳವಾರ ತಾಯಿಯ ಜತೆ ಮಂಗಳೂರಿನಿಂದ ಹಿಂತಿರುಗುವಾಗ ಆಕಸ್ಮಿಕವಾಗಿ ಬಾಲಕಿಯ ಕಿವಿಯ ಹೊರಭಾಗದಲ್ಲಿ ಆಳವಡಿಸಲಾದ ಯಂತ್ರ ಬಿದ್ದುಹೋಗಿರುತ್ತದೆ.ಯಂತ್ರವನ್ನು ಕಳೆದು ಕೊಂಡಿರುವ ಬಾಲಕಿಯ ರೋಧನ ಹೃದಯ ಕಲಕಿಸುವಂತಿದ್ದು, ಈಗಾಗಲೇ ಮಗುವಿನ ಚಿಕಿತ್ಸೆಗಾಗಿ ಹಲವು ಲಕ್ಷಗಳ ಸಾಲದಲ್ಲಿ ಬಿದ್ದಿರುವ ದಂಪತಿಗಳು ಇದರಿಂದಾಗಿ ತತ್ತರಿಸಿಹೋಗಿದ್ದಾರೆ.

ಪ್ಲೀಸ್ ಹೆಲ್ಪ್ ಮಾಡಿ…
ಬೇರ್‍ಯಾರಿಗೂ ಉಪಯೋಗವಿಲ್ಲದ ಈ ಯಂತ್ರ ದಂಪತಿಗಳ ಪಾಲಿಗೆ ಮಾತ್ರ ಬೆಲೆಕಟ್ಟಲಾಗದ ನಿಧಿಯಂತೆ ಆದ್ದರಿಂದ ಇದು ಯಾರಿಗಾದರೂ ಸಿಕ್ಕಿದಲ್ಲಿ ನಿಝಾಮುದ್ದಿನ್ ಅಂದಲೆ, ದಿಲ್ಕುಶ್ ಹೌಸ್, ಜುಮ್ಮಾ ಮಸೀದಿ ಹತ್ತಿರ,ಮಗ್ದೂಮ್ ಕಾಲನಿ, ಭಟ್ಕ. ಈ ವಿಳಾಸಕ್ಕೆ ಅಥವಾ, 9902893445, 9986361714 ಈ ಮೊಬೈಲ್ ನಂಬ್ರಗಳಿಗೆ ಸಂಪರ್ಕಿಸಬೇಕಾಗಿ ವಿನೀತರಾಗಿ ಭಿನ್ನವಿಸಿಕೊಂಡಿದ್ದಾರೆ.

Comments are closed.